ಪ್ರೀತಿ, ಸಂಬಂಧಗಳ ಪಯಣ ‘ಭುವನಂ ಗಗನಂ’ (ಚಿತ್ರವಿಮರ್ಶೆ-ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : ಭುವನಂ ಗಗನಂ
ನಿರ್ದೇಶಕ : ಗಿರೀಶ್ ಮೂಲಿಮನಿ
ನಿರ್ಮಾಪಕ : ಮುನೇಗೌಡ
ಸಂಗೀತ : ಗುಮ್ಮಿನೇನಿ ವಿಜಯ್
ಛಾಯಾಗ್ರಹಣ : ಉದಯ್ ಲೀಲಾ
ತಾರಾಗಣ : ಪ್ರಮೋದ್ , ಪೃಥ್ವಿ ಅಂಬರ್, ರೆಚೆಲ್ ಡೇವಿಡ್, ಅಶ್ವಥಿ , ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ , ಕೆ .ಎಸ್. ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಹಾಗೂ ಮುಂತಾದವರು…
ಜೀವನವೇ ಒಂದು ಪಯಣ.. ಸಾಗುವ ಹಾದಿಯಲ್ಲಿ ಹಲವಾರು ಏಳುಬೀಳುಗಳು ಎದುರಾಗುವುದು ಸರ್ವೇ ಸಾಮಾನ್ಯ. ಅದರಂತೆ ಎರಡು ಕುಟುಂಬಗಳ ಬಾಂಧವ್ಯ , ಪ್ರೀತಿ , ಮನಸ್ಥಿತಿ , ತಳಮಳ ನಡುವೆ ಎದುರಾಗುವ ರೋಚಕ ಘಟನೆಗಳ ಸುಳಿಯಲ್ಲಿ ಸಾಗುವ ಕಥಾನಕವಾಗಿದ್ದು , ಭೂಮಿ ಆಕಾಶದಂತೆ ಎರಡು ಕಣ್ಣೆದುರು ಕಂಡರೂ ಅದರ ವೈಖರಿಯೇ ವಿಭಿನ್ನ ಎನ್ನುವಂತೆ ಪ್ರೀತಿ , ಸಂಬಂಧಗಳ ನೋವು , ನಲಿವಿನ ರೂಪಕವಾಗಿ ಈ ವಾರ ಪ್ರೇಕ್ಷಕರು ಮುಂದೆ ಬಂದಿರುವ ಚಿತ್ರವೇ “ಭುವನಂ ಗಗನಂ”.
ಕಾಲೇಜು ಸೀನಿಯರ್ ವಿದ್ಯಾರ್ಥಿ ಅಭಿ (ಪ್ರಮೋದ್) ವಾಲಿಬಾಲ್ ಪ್ಲೇಯರ್ ಆಗಿದ್ದರು, ತಂದೆ ತಾಯಿಯ ಬಗ್ಗೆ ಅಪಾರ ಪ್ರೀತಿ. ಅದೇ ಕಾಲೇಜಿನ ವಿದ್ಯಾರ್ಥಿ ನಂದಿನಿ (ರಚೇಲ್ ಡೇವಿಡ್) ಯ ಮೊದಲ ನೋಟಕ್ಕೆ ಮನಸೋಲುವ ಅಭಿ. ನಂದಿನಿ ತಂದೆ ಮಗಳ ಭವಿಷ್ಯದ ಬಗ್ಗೆ ನೂರೆಂಟು ಕನಸು ಕಾಣುತ್ತಾನೆ. ಆದರೆ ಇವರಿಬ್ಬರ ಪ್ರೀತಿ ತಂದೆ ತಾಯಿಗಳಿಂದ ದೂರ ಉಳಿಯುವಂತೆ ಮಾಡಿ ಬದುಕು ಕಟ್ಟಿಕೊಳ್ಳುವ ದಾರಿ ತೋರುತ್ತ ಹೋಗುತ್ತದೆ. ಆದರೆ ಪ್ರೀತಿ , ಸಂಸಾರದ ನಡುವೆ ಬರುವ ಹಗ್ಗ ಜಗ್ಗಾಟ ಇವರಿಬ್ಬರ ಜೀವನದಲ್ಲಿ ಸಣ್ಣ ಬಿರುಕನ್ನ ಮೂಡಿಸುತ್ತದೆ.
ಇನ್ನೊಂದೆಡೆ ಬುದ್ಧಿಮಾಂದ್ಯ ಮಗ ರಾಮ್ (ಪೃಥ್ವಿ ಅಂಬರ್) ತಾಯಿಯ ಪ್ರೀತಿ ಇಲ್ಲದೆ ತಂದೆಯ ನೆರಳಲ್ಲೇ ಬೆಳೆದರೂ ಗೆಳತಿಯ ಭೂಮಿ (ಪೊನ್ನು ಅಶ್ವತಿ) ಸ್ನೇಹ , ಸಹಕಾರ ಅವನ ಬದುಕಿಗೆ ಆಸರೆಯಾಗಿರುತ್ತದೆ. ರಾಮ್ ನ ಮುಗ್ದ ಸ್ವಭಾವ , ಆಲೋಚನೆ , ಮಮಕಾರದ ಆಸೆ , ಪ್ರೀತಿ , ಅವನ ಪಯಣಕ್ಕೂ ಬೇರೆಯದ್ದೆ ದಿಕ್ಕನ್ನ ತೆರೆದಿಡುತ್ತದೆ.
ಆದರೆ ಅಚಾನಕ್ಕಾಗಿ ಮಾರ್ಗ ಮಧ್ಯ ಅಭಿ ಹಾಗೂ ರಾಮ್ ಭೇಟಿ ಮಾಡುವ ಸಂದರ್ಭ ಎದುರಾಗುತ್ತದೆ. ಇಬ್ಬರ ಬದುಕಿನಲ್ಲೂ ಸಿಹಿ ಹಾಗೂ ಕಹಿ ಅನುಭವಗಳ ಭಾರದ ಬುತ್ತಿ ತುಂಬಿದ್ದು , ಅದನ್ನು ಮನಸ್ಸಿನಿಂದ ಇಳಿಸಿಕೊಳ್ಳುವ ಸಾಗುವ ಹಾದಿಯ ಸ್ಥಳ ಇಬ್ಬರದು ಒಂದೇ ಆಗಿರುತ್ತದೆ.
ಫ್ಲಾಶ್ ಬ್ಯಾಕ್ ಮೂಲಕ ಹಲವು ಘಟನೆಗಳ ಸುಳಿವು ತೆರೆಯುತ್ತಾ ಹೋಗುತ್ತದೆ.
ಅಭಿ ಹಾಗೂ ರಾಮ್ ಪಯಣ ಎಲ್ಲಿಗೆ…
ಅಭಿ , ನಂದಿನಿ ಪ್ರೀತಿ ಏನು…
ರಾಮ್ , ಭೂಮಿ ಬದುಕು…?
ಎರಡು ಸ್ಟೋರಿ ಹೇಳೋದು ಏನು…
ಕ್ಲೈಮಾಕ್ಸ್ ನಲ್ಲಿ ಸಿಗುವ ಉತ್ತರ ಏನು ಎಂಬುದಕ್ಕೆ ನೀವೆಲ್ಲರೂ ಈ ಚಿತ್ರವನ್ನು ಒಮ್ಮೆ ನೋಡಬೇಕು.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಶೇಷ ಅಲ್ಲದಿದ್ದರೂ ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಪ್ರತಿಯೊಬ್ಬರ ಆಲೋಚನೆ , ಮನಸ್ಥಿತಿ , ಎಲ್ಲವೂ ಭಿನ್ನವಾಗಿದ್ದು ಪ್ರೀತಿ , ಸ್ನೇಹ , ಸಂಬಂಧ , ನೋವು , ನಲಿವುಗಳನ್ನ ಸಿರಿದೂಗಿಸಿಕೊಂಡು ಜೀವನ ಸಾಗಿಸುವುದೇ ಬಹಳ ಮುಖ್ಯ .
ಪ್ರೇಮಿಗಳ ಮನಸ್ಥಿತಿ , ತಂದೆ-ತಾಯಿಯ ಆತಂಕ , ಸ್ನೇಹಿತರ ಸಹಕಾರ , ಮುಗ್ಧತೆಯ ಬದುಕು ಕಥೆಗೆ ಪೂರಕವಾಗಿದ್ದರೂ , ಚಿತ್ರಕಥೆಯ ಓಟ ತುಂಬಾ ದೂರ ಸಾಗಿದಂತಿದೆ. ಕರಾವಳಿ ಸಂಭಾಷಣೆ ಬಗ್ಗೆ ಒತ್ತು ಕೊಡಬೇಕಿತ್ತು. ಬುದ್ಧಿಮಾಂದ್ಯನ ಮೈಕಲ್ ಜಾಕ್ಸನ್ ನೃತ್ಯ , ಕೆಲವು ಸನ್ನಿವೇಶಗಳು ಲಾಜಿಕ್ ಬಿಟ್ಟಂತಿದೆ. ಆದರೂ ಮನಸ್ಸಿನ ಮೇಲೆ ಪ್ರಭಾವ ಬೀರುವ ಅಂಶಗಳು ಬೆಸೆದುಕೊಂಡಿದೆ.
ಹೊಸಬರ ಮೇಲೆ ಬಂಡವಾಳ ಹಾಕಿರುವ ನಿರ್ಮಾಪಕರ ಧೈರ್ಯ ಮೆಚ್ಚಬೇಕು. ಇನ್ನು ಚಿತ್ರದ ಸಂಗೀತ ಉತ್ತಮವಾಗಿದ್ದು , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಪ್ರಮೋದ್ ಕಾಲೇಜ್ ವಿದ್ಯಾರ್ಥಿ ಹಾಗೂ ಸಂಸಾರದ ನೋವು ನಲಿವಿನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಾಗೆ ಆಕ್ಷನ್ ದೃಶ್ಯಕ್ಕೂ ಸೈ ಎನ್ನುತ್ತಾ ತನ್ನ ಸಾಮರ್ಥ್ಯವನ್ನು ಹೊರ ಹಾಕಿದ್ದಾರೆ. ಇನ್ನು ನಟಿಯರಾದ ರಾಚೆಲ್ ಡೇವಿಡ್ ಹಾಗೂ ಅಶ್ವತಿ ಮುದ್ದು ಮುದ್ದಾಗಿ ಪರದೆ ಮೇಲೆ ಕಾಣುತ್ತಾ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ವಿಶೇಷವಾಗಿ ಪೃಥ್ವಿ ಅಂಬರ್ ತಮ್ಮ ನಟನ ಹಾವಭಾವದ ಮೂಲಕ ಕರಾವಳಿ ಸೊಗಡಿನಲ್ಲಿ ಅದ್ಭುತವಾಗಿ ಅಭಿನಯಿಸಿ ವಿಭಿನ್ನ ಪಾತ್ರಗಳಿಗೆ ನಾನು ಸಿದ್ದ ಎಂದು ಮತ್ತೊಮ್ಮೆ ತೋರಿಸಿದ್ದಾರೆ.
ಉಳಿದಂತೆ ಅಭಿನಯಿಸಿರುವ ಅಚ್ಚುತ್ ಕುಮಾರ್, ಹರಿಣಿ , ಶರತ್ ಲೋಹಿತಾಶ್ವ , ಕೆ .ಎಸ್. ಶ್ರೀಧರ್, ಸ್ಪರ್ಶ ರೇಖಾ, ಪ್ರಕಾಶ್ ತುಮ್ಮಿನಾಡು, ಪ್ರಜ್ವಲ್ ಶೆಟ್ಟಿ , ಚೇತನ್ ದುರ್ಗ ಸೇರಿದಂತೆ ಎಲ್ಲಾ ಪಾತ್ರ ವರ್ಗಗಳು ಚಿತ್ರದ ಓಟಕ್ಕೆ ಜೀವ ತುಂಬಿದ್ದಾರೆ. ಒಟ್ಟರೆ ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ನೋಡುವಂತ ಚಿತ್ರ ಇದಾಗಿದೆ.