‘ಹನುಮಾನ್ 2 – ದಿ ರೈಸ್ ಆಫ್ ವಾನರಾಸ್’ ಅಧಿಕೃತ ಘೋಷಣೆ
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದು ದೇಶಾದ್ಯಂತ ಪ್ರೇಕ್ಷಕರ ಮನಗೆದ್ದ ಬ್ಲಾಕ್ಬಸ್ಟರ್ ಸಿನಿಮಾ ‘ಹನು-ಮಾನ್’ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ನಿರ್ಮಾಣ ಸಂಸ್ಥೆ ಪ್ರೈಮ್ಶೋ ಎಂಟರ್ಟೈನ್ಮೆಂಟ್ ತನ್ನ ಫ್ಯಾಂಟಸಿ ಸಿನಿಮಾ ಜಗತ್ತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ. ಈ ಸಂಸ್ಥೆಯು ತನ್ನ ಮುಂದಿನ ಮಹತ್ವಾಕಾಂಕ್ಷೆಯ ದೃಶ್ಯಕಾವ್ಯ ‘ಹನುಮಾನ್ 2 – ದಿ ರೈಸ್ ಆಫ್ ವಾನರಾಸ್’ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು, ಪ್ರತಿಭಾವಂತ ಯುವ ನಟ ಪಂಜ ವೈಷ್ಣವ್ ತೇಜ್ ಈ ಚಿತ್ರದಲ್ಲಿ ನಾಯಕನಾಗಿ ಬಣ್ಣಹಚ್ಚಲಿದ್ದಾರೆ.
ಪುರಾಣ, ಕಲ್ಪನೆ ಹಾಗೂ ಅಸಾಧಾರಣ ಸಿನಿಮಾ ಸಾಧ್ಯತೆಗಳ ಬೇರುಗಳನ್ನು ಹೊಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸದೊಂದು ರೋಚಕ ಪ್ರಪಂಚದ ಬಾಗಿಲು ತೆರೆಯುವ ಭರವಸೆ ನೀಡಿದೆ. ಚಿತ್ರದ ಶೀರ್ಷಿಕೆಯ ಜೊತೆಗೆ ಬಿಡುಗಡೆಯಾಗಿರುವ ಅನೌನ್ಸ್ಮೆಂಟ್ ಪೋಸ್ಟರ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ದೈತ್ಯ ದೈವಿಕ ಬಾಲ ಮತ್ತು ಅಲೌಕಿಕ ದೈವಿಕ ಶಕ್ತಿಯಿಂದ ಸುತ್ತುವರಿದು ಮೋಡಗಳ ನಡುವೆ ಮೇಲೇರುತ್ತಿರುವ ವ್ಯಕ್ತಿಯ ಶಕ್ತಿಶಾಲಿ ದೃಶ್ಯವನ್ನು ಈ ಪೋಸ್ಟರ್ ಒಳಗೊಂಡಿದ್ದು, ಸಿನಿಮಾದ ಭವ್ಯ ಫ್ಯಾಂಟಸಿ ಹಿನ್ನೆಲೆ ಹಾಗೂ ಪಾತ್ರಗಳ ಬಗೆಗಿನ ಆಸಕ್ತಿಯನ್ನು ದುಪ್ಪಟ್ಟುಗೊಳಿಸಿದೆ.
ವಿಭಿನ್ನ ಕಲ್ಪನಾತ್ಮಕ ಹಾಗೂ ಫ್ಯಾಂಟಸಿ ಕಥೆಗಳನ್ನು ಹೇಳುವುದರಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ವಿ.ಐ. ಆನಂದ್ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅವರ ಸೃಜನಶೀಲ ದೃಷ್ಟಿಕೋನ ಹಾಗೂ ಪಂಜ ವೈಷ್ಣವ್ ತೇಜ್ ಅವರ ಯುವ ಉತ್ಸಾಹದ ಸಂಗಮವು ತೆರೆಯ ಮೇಲೆ ಹೊಸ ಮ್ಯಾಜಿಕ್ ಸೃಷ್ಟಿಸುವ ನಿರೀಕ್ಷೆಯಿದೆ.
ಪ್ರತಿಷ್ಠಿತ ಪ್ರೈಮ್ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರಕ್ಕೆ ಅದ್ದೂರಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ‘ಹನು-ಮಾನ್’ ಮೂಲಕ ದೊಡ್ಡ ಗೆಲುವು ಕಂಡಿರುವ ಈ ನಿರ್ಮಾಪಕ ಜೋಡಿ, ಪ್ರಸ್ತುತ ಸಾಯಿ ದುರ್ಗಾ ತೇಜ್ ಅವರೊಂದಿಗೆ ‘SYG’ ಮತ್ತು ಕಿಚ್ಚ ಸುದೀಪ್ ಅವರೊಂದಿಗೆ ‘BRB’ ಚಿತ್ರಗಳನ್ನು ನಿರ್ಮಿಸುತ್ತಿದೆ. ಇದೀಗ ಪ್ರೇಕ್ಷಕರಿಗೆ ಭವ್ಯವಾದ ಚಿತ್ರಮಂದಿರದ ಅನುಭವ ನೀಡುವ ದೂರದೃಷ್ಟಿಯೊಂದಿಗೆ ಮತ್ತೊಂದು ದೊಡ್ಡ ಸಿನಿಮಾ ಸಾಹಸಕ್ಕೆ ಕೈಹಾಕಿದ್ದಾರೆ. ಸದ್ಯ ಶೀರ್ಷಿಕೆ ಘೋಷಣೆಯ ಮೂಲಕ ಸದ್ದು ಮಾಡುತ್ತಿರುವ ಚಿತ್ರತಂಡ, ಇತರ ತಾರಾಗಣ ಹಾಗೂ ತಾಂತ್ರಿಕ ವರ್ಗದ ಕುರಿತಾದ ರೋಚಕ ಅಪ್ಡೇಟ್ಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದೆ.