ಕಿರುಕುಳ – ದರೋಡೆ ಕೋರರಿಗೆ ಪ್ರೇಮಿಯ ಪ್ರತ್ಯುತ್ತರ…”ನೀ ನಂಗೆ ಅಲ್ಲವಾ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ನೀ ನಂಗೆ ಅಲ್ಲವಾ
ನಿರ್ದೇಶಕ : ಮನೋಜ್. ಪಿ
ನಿರ್ಮಾಪಕ : ಜಯರಾಮ್ ದೇವಸಮುದ್ರ
ಸಂಗೀತ : ಸೂರಜ್ ದೇಸಾಯಿ
ಛಾಯಾಗ್ರಾಹಣ : ಉದಯ್ ಲೀಲಾ
ತಾರಾಗಣ : ರಾಹುಲ್ ಆರ್ಕಾಟ್, ಕಾಶಿಮಾ , ಮಂಜುನಾಥ ಹೆಗಡೆ , ಗಿರಿ, ರೋಹಿತ್, ಭಾವನಾ , ರವಿ ಪ್ರಕಾಶ್ ಹಾಗೂ ಮುಂತಾದವರು…
ಪ್ರತಿಯೊಬ್ಬರಿಗೂ ಸಮಾಜದಲ್ಲಿ ನೆಮ್ಮದಿ, ಸುಖ ಶಾಂತಿಯಿಂದ ಬದುಕುವ ಹಕ್ಕಿದೆ. ಆದರೆ ಕೆಲವೊಂದು ಸಮಯ , ಸಂದರ್ಭ , ನಿರೀಕ್ಷೆಗೂ ಮೀರಿದಂತ ಕಠೋರ ಅನುಭವವನ್ನು ನೀಡುತ್ತದೆ. ಅದರಲ್ಲೂ ಮಹಿಳೆಯರು ಎದುರಿಸುವ ದೈಹಿಕ , ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳು ಬಹಳ ಕಷ್ಟಕರವಾಗಿರುತ್ತದೆ. ಅಂತದ್ದೇ ಒಂದಷ್ಟು ವಿಚಾರಗಳೊಂದಿಗೆ ರಾತ್ರಿಯಲ್ಲಿ ಹೈವೇ ಸಂಚಾರ , ಡಾಬಾಗಗಳ ಸ್ಥಿತಿಗತಿ , ಕಾಮುಕರ ಅಟ್ಟಹಾಸ , ಕಾಣದ ಕೈಗಳ ಸಾಥ್ ನಡುವೆ ಪ್ರೇಮಿಗಳ ಒದ್ದಾಟ , ನ್ಯಾಯಕ್ಕಾಗಿ ಹುಡುಕುವ ದಾರಿಯ ಸುತ್ತ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನೀ ನಂಗೆ ಅಲ್ಲವಾ”.
ಕೆಲಸ ಕಾರ್ಯವಿಲ್ಲದೆ ಗೆಳೆಯರೊಟ್ಟಿಗೆ ತನ್ನಷ್ಟದಂತೆ ಕಾಲ ಕಳೆಯುವ ಲಕ್ಕಿ (ರಾಹುಲ್)ಗೆ ಅಪ್ಪ (ಮಂಜುನಾಥ ಹೆಗಡೆ) ಬೈಗುಳ ಹಾಗೂ ಅಕ್ಕನ ಸಹಕಾರವೇ ಎಲ್ಲಾ. ಇನ್ನು ಐಟಿ ಉದ್ಯೋಗಿ ಖುಷಿ (ಕಾಶಿಮಾ) ವೀಕೆಂಡ್ ನಲ್ಲಿ ಹೋಟೆಲ್ ಗಳಲ್ಲಿ ಹಾಡುವುದೇ ಕೆಲಸ. ಆಕೆಯ ಗಾಯನದ ಸಿರಿ ಹಾಗೂ ಸೌಂದರ್ಯಕ್ಕೆ ಮರುಳಾಗಿ ಇಷ್ಟ ಪಡುತ್ತಾನೆ. ಆದರೆ ಒಂದಷ್ಟು ವಾದ ಪ್ರತಿವಾದ ಕೀಟಲೆ, ಮಾತುಕತೆ ಮೂಲಕ ಒಂದಾಗುತ್ತಾರೆ.
ಒಮ್ಮೆ ತನ್ನ ಸಹಉದ್ಯೋಗಿ ಜೊತೆ ಕಾರಿನ ಮಾರ್ಗವಾಗಿ ಡಾಬಾಗೆ ಬಂದಾಗ ಎದುರಾಗುವ ಸಂಕಷ್ಟ , ತೊಂದರೆ , ಅವಮಾನ, ಕಿರುಕುಳ, ದೌರ್ಜನ್ಯ ಅವರ ಮನಸ್ಸಿಗೆ ಬಹಳಷ್ಟು ನೋವನ್ನ ಉಂಟು ಮಾಡಿ ಕುಗ್ಗಿಸುತ್ತದೆ. ಈ ವಿಚಾರ ತಿಳಿಯುವ ಪ್ರೇಮಿ ಲಕ್ಕಿಯ ಕೋಪ ಅತಿರೇಕಕ್ಕೆ ಹೋದರು ತನ್ನ ಪ್ರೀತಿಯ ಗೆಳತಿ ಖುಷಿಯ ಮಾತಿಗೆ ಒಪ್ಪಿ ಕಾನೂನು ರೀತಿ ನ್ಯಾಯ ಪಡೆಯಲು ನಿರ್ಧರಿಸುತ್ತಾನೆ. ಆದರೆ ಮುಂದೆ ಎದುರಾಗುವ ಒಂದಷ್ಟು ಘಟನೆಗಳು ನಿಗೂಢತೆ ಬೇರೆ ಬೇರೆ ವಿಚಾರವನ್ನು ಹೇಳುತ್ತದೆ. ಅದು ಏನು ಎಂಬುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಈ ರೀತಿಯ ಘಟನೆಗಳು ಹೈವೇ ಪ್ರಯಾಣಿಕರಿಗೆ ಡಾಬಾ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ವಿಚಾರವನ್ನು ಇಟ್ಟುಕೊಂಡು ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುತ್ತಿದೆ. ಆದರೆ ಚಿತ್ರದ ಮೊದಲ ಭಾಗ ಹಿಡಿತ ಕಳೆದುಕೊಂಡು ದ್ವಿತೀಯ ಭಾಗದಲ್ಲಿ ಜೀವ ನೀಡುವ ಪ್ರಯತ್ನ ಮಾಡಿದಂತಿದೆ. ಚಿತ್ರಕಥೆಯಲ್ಲಿ ಬಹಳಷ್ಟು ಹಿಡಿತ ಅಗತ್ಯವಾಗಿದೆ.
ಹೊಸಬರಿಗೆ ಅವಕಾಶ ನೀಡಿರುವ ನಿರ್ಮಾಪಕರು ಚಿತ್ರಕಥೆಯ ಸ್ವರೂಪದ ಬಗೆಯು ಗಮನ ಕೊಟ್ಟಿದ್ದರೆ ಉತ್ತಮವಾಗಿರುತ್ತಿತ್ತು. ಸಂಗೀತ ತಕ್ಕಮಟ್ಟಗಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ನಾಯಕನಾಗಿ ಅಭಿನಯಿಸಿರುವ ಯುವ ಪ್ರತಿಭೆ ರಾಹುಲ್ ಆರ್ಕಾಟ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮ ಪಟ್ಟಿದ್ದು , ಮುಂದೆ ಉಜ್ವಲ ಭವಿಷ್ಯವಿದೆ ಎನ್ನಬಹುದು.
ಇನ್ನು ನಾಯಕಿಯಾಗಿರುವ ಕಾಶಿಮಾ ತನ್ನ ಪಾತ್ರಕ್ಕೆ ಜೀವ ತುಂಬಿದ್ದು , ಎಲ್ಲರ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ಇನ್ನು ತಂದೆಯ ಪಾತ್ರದಲ್ಲಿ ಮಂಜುನಾಥ ಹೆಗಡೆ ನಗುವಿನ ಚಟಾಕಿ ಜೊತೆ ಮನಸೆಳೆದಿದ್ದಾರೆ. ಉಳಿದಂತೆ ಬರುವ ವಿಲನ್ , ಪೋಲಿಸ್ , ಲಾಯರ್ ಪಾತ್ರಗಳ ಜೊತೆ ಎಲ್ಲರೂ ಕೂಡ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಪ್ರೀತಿಸುವ ಹುಡುಗಿಗಾಗಿ ಪ್ರೇಮಿ ಹೇಗೆ ಸೆಡ್ಡು ಹೊಡೆದು ನಿಲ್ಲುತ್ತಾನೆ , ಪ್ರೀತಿಯ ತಾಕತ್ತು ಪ್ರೇಮಿಗೆ ಗೊತ್ತು ಎನ್ನುವ ಈ ಚಿತ್ರ ಒಮ್ಮೆ ನೋಡಬಹುದು.