ತಂತ್ರಜ್ಞಾನದ ಸುಳಿಯಲ್ಲಿ ಸೋಲು ಗೆಲುವು.. “ಲಂಬೋದರ 2.0” (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಲಂಬೋದರ 2.0
ನಿರ್ದೇಶಕ : ಸಿಂಪಲ್’ ಸುನಿ
ನಿರ್ಮಾಪಕ : ಅನಿಲ್ ಶೆಟ್ಟಿ
ಸಂಗೀತ : ವೀರ ಸಮರ್ಥ
ಛಾಯಾಗ್ರಹಣ :ಸಂತೋಷ ರೈ ಪಾತಜೆ
ತಾರಾಗಣ : ಅನಿಲ್ ಶೆಟ್ಟಿ , ಬಾಲಿವುಡ್ ನಟ ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮ್ಯಾಕ್ ಡಿಸೋಜ, ಮೇಘನಾ ಗಾಂವ್ಕರ್, ರಘು ರಾಮನಕೊಪ್ಪ ಹಾಗೂ ಮುಂತಾದವರು…
ಜಗತ್ತಿನಾದ್ಯಂತ ಆಧುನಿಕ ತಂತ್ರಜ್ಞಾನಕ್ಕೆ ಯುವ ಸಮೂಹವೇ ನುಗ್ತಿದ್ದು , ಹೊಸ ಆವಿಷ್ಕಾರಕ್ಕೆ ಹಿರಿಯರು ಕೂಡ ನಾವು ಸೈ ಎನ್ನುತ್ತಿದ್ದಾರೆ. ಅದಕ್ಕೆ ಪೂರಕ ಎನ್ನುವಂತೆ ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ತಂತ್ರಜ್ಞಾನ , ರೋಬೋಗಳ ಕಾರ್ಯವೈಖರಿ , ಹ್ಯಾಕರ್ ಕೈಚಳಕ , ಮನುಷ್ಯನ ದೈನಂದಿನ ಜೀವನದ ಮೇಲೆ ಹಣದ ಆಮೀಷ ಹೇಗೆ ಗಾಢವಾದ ಪ್ರಭಾವ ಬೀರುತ್ತಿವೆ ಎಂಬುದರ ಜೊತೆಗೆ ಸ್ನೇಹ , ಪ್ರೀತಿ , ತರ್ಲೆ , ಎಡವಟ್ಟುಗಳ ನಡುವೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ… ತಾಂತ್ರಿಕತೆಯ ನಡುವೆ ಸ್ವಾಭಾವಿಕ ಬದುಕು ತೋರುವ ಮಾರ್ಗ ಏನು ಎಂಬ ಸೂಕ್ಷ್ಮತೆಯನ್ನು ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಲಂಬೋದರ 2.0”.
ತಾನು ಮಾಡುವ ಕೆಲಸದಲ್ಲಿ ಸಣ್ಣ ಸುಳಿವು ನೀಡಿದಂತೆ ಜನರನ್ನ ಜಾಗೃತಿ ಮೂಡಿಸುವ ಜೊತೆಗೆ ಹಣವನ್ನ ಕದಿಯುವ ಚಾಣಾಕ್ಷ ಚೋರ ಅವುಕ್ತ ( ಅನಿಲ್ ಶೆಟ್ಟಿ). ಇದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದರೆ , ಪೊಲೀಸರಿಗೆ ದೊಡ್ಡ ತಲೆನೋವು ಆಗಿರುತ್ತದೆ.
ಇನ್ನು ಸಾಮಾಜಿಕ ಜಾಲತಾಣ , ರೀಲ್ಸ್ ನಲ್ಲೆ ಮುಳುಗುವ ಯುವಕ ಯುವತಿಯರ ಮನಸ್ಥಿತಿಗೆ ತಕ್ಕ ಸಲಹೆ , ಮಾರ್ಗವನ್ನು ನೀಡುವ ಡಾಕ್ಟರ್ ಸಮಯ (ಸಾಚಿ ಬಿಂದ್ರಾ). ಈಕೆಯ ಗೆಳೆಯ ಸುಂದರ್ (ಮ್ಯಾಕ್ ಡಿಸೋಜ) ಮೂಲಕ ಅವುಕ್ತ ಸಮಯ ಗೆ ಹತ್ತಿರವಾಗಿ ಅವಳ ಮನಸ್ಥಿತಿ, ಆಲೋಚನೆಗೆ ತಕ್ಕಂತೆ ಹೊಂದಿಕೊಳ್ಳಲು ನಿರ್ಧರಿಸುತ್ತಾನೆ. ಇಬ್ಬರು ನಡುವಿನ ಸಲುಗೆ ಪ್ರೀತಿಯ ಕಡೆ ತಿರುಗುತ್ತದೆ.
ಇದರ ನಡುವೆ ವಿಶ್ವದಾದ್ಯಂತ ಹೊಸ ಆವಿಷ್ಕಾರದ ಮೂಲಕ ಎಲ್ಲರ ಗಮನ ಸೆಳೆಯಲು ಮುಂದಾಗುವ ರಾಘವಕಶ್ಯಪ್( ಕುನಾಲ್ ಕಪೂರ್) ಜನರು ಸಂತೋಷದಿಂದ ಇರಲು ನೂತನ ಆಪ್ ಮೂಲಕ ಗೇಮ್ ಒಂದನ್ನು ಆರಂಭಿಸಿ 100 ದಿನಗಳ ಹ್ಯಾಪಿನೆಸ್ ಲೈಫ್ ಗೆ ನೂರು ಕೋಟಿ ಬಹುಮಾನ ನೀಡುವ ಚಾಲೆಂಜ್ ನೀಡುತ್ತಾನೆ. ಇದಕ್ಕೆ ‘ಜಿಯಾ’ ಹೆಸರಿನ ನೈಜ ಹ್ಯೂಮನಾಯ್ಡ್ ರೋಬೋಟ್ ಕೆಲಸ ಮಾಡುತ್ತೆ.
ಈ ಹಣದ ಆಸೆ ಹಿಂದೆ ಹೋದವರ ನಡುವಳಿಕೆಯಲ್ಲಿ ಒಂದಷ್ಟು ಪರಿವರ್ತನೆ ಕಾಣುತ್ತಾ ಹೋಗುತ್ತದೆ. ಮುಂದೆ ಒಂದಷ್ಟು ಘಟನೆ ಮೋಸದ ಜಾಲದ ಕಡೆ ತಿರುಗುತ್ತಿದ್ದಂತೆ
ಕುಟುಂಬದ ನಿಗೂಢ ಸತ್ಯ. ತಂತ್ರಕ್ಕೆ ಪ್ರತಿ ತಂತ್ರ ಎನ್ನುವಂತೆ ಆಧುನಿಕತೆಯ ಜೊತೆಗೆ ಜಾಗತಿಕ ಮಟ್ಟದ ವಿಚಾರ ಹೊಂದಿರುವ ಈ ಕಥಾವಸ್ತು ಒಂದಷ್ಟು ಎಚ್ಚರಿಕೆಯ ದಾರಿಯನ್ನ ತೋರುತ್ತದೆ. ಅದು ಏನು… ಹೇಗೆ… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ನಿರ್ದೇಶಕ ಸುನಿಲ್ ಸಿಂಪಲ್ ಆಗಿ ಕಂಡರೂ ವಿಭಿನ್ನ ಹಾಗೂ ಟೆಕ್ನಿಕಲ್ ಸ್ಟ್ರಾಂಗ್ ಕಂಟೆಂಟ್ ಗೆ ಸದಾ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದೊಂದು ವಿಶಿಷ್ಟ ಸೋಷಿಯಲ್ ಥ್ರಿಲ್ಲರ್’ ಜಾನರ್ನ ಸಿನಿಮಾವಾಗಿದ್ದು, ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಎ ಐ ತಾಂತ್ರಿಕತೆಯ ಕೈಚಳಕ ಕೃತಕ ರೊಬಾಟಿಕ್ ಹಾಗೂ ಡಿಜಿಟಲ್ ತಂತ್ರಜ್ಞಾನದ ಓಟ ಸೇರಿದಂತೆ ಒಂದಷ್ಟು ಸೂಕ್ಷ್ಮತೆ ತಂದಿದ್ದು , ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳು ಕಾಣೆಯಾದಂತಿದೆ.
ಹೊಸ ರೀತಿಯ ಕಥಾವಸ್ತುವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು. ಇದರ ಜೊತೆಗೆ ನಾಯಕನಾಗಿ ಅಭಿನಯಿಸಿರುವ ಅನಿಲ್ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಲು ಶ್ರಮ ಪಟ್ಟಿದ್ದಾರೆ. ಇನ್ನಷ್ಟು ತರಬೇತಿ ಪಡೆದರೆ ಉತ್ತಮ. ಇನ್ನು ನಾಯಕಿ ಸಾಚಿ ಬಿಂದ್ರಾ ಮುದ್ದು ಮುಂದಾಗಿ ತೆರೆದ ಮೇಲೆ ಕಾಣುತ್ತಾ ಮನಸ್ಸಿಗೆ ಹ್ಯಾಪಿನೆಸ್ ನೀಡುತ್ತಾರೆ. ಇನ್ನು ಖಡಕ್ ಧ್ವನಿಯ ಮೂಲಕ ಬಾಲಿವುಡ್ ನಟ ಕುನಾಲ್ ಕಪೂರ್ ಪಾತ್ರಕ್ಕೆ ಜೀವ ತುಂಬಿ ಉತ್ತಮವಾಗಿ ಅಭಿನಯಿಸಿದ್ದಾರೆ.
ಗೆಳೆಯನ ಪಾತ್ರಧಾರಿ ಮ್ಯಾಕ್ ಡಿಸೋಜ ಕೂಡ ನಗುವಿನ ಜೊತೆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇದರಲ್ಲಿ ಜಿಯಾ ಹೆಸರಿನ ರೋಬೋಟಿಕ್ ಪ್ರಮುಖ ಆಕರ್ಷಣೆಯಾಗಿ ಕಾಣುತ್ತದೆ. ಹಾಗೆಯೇ ಇನ್ಸ್ಪೆಕ್ಟರ್ ಪಾತ್ರದಲ್ಲಿ ರಘು ರಾಮನಕೊಪ್ಪ , ಧ್ಯಾನ ಮಂದಿರದ ಮಾತೆಯಾಗಿ ಮೇಘನಾ ಗಾವ್ಕರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಸಂಗೀತ , ಛಾಯಾಗ್ರಹಣ , ಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ಇದೊಂದು ವಿಶಿಷ್ಟ ಸೋಷಿಯಲ್ ಥ್ರಿಲ್ಲರ್ ಜಾನರ್ನ ಸಿನಿಮಾವಾಗಿದ್ದು, ಎಲ್ಲರೂ ಒಮ್ಮೆ ನೋಡುವಂತಿದೆ.
