‘ಅಮರಾವತಿ ಪೋಲಿಸ್ ಸ್ಟೇಷನ್’ ಚಿತ್ರದ ಟ್ರೈಲರ್ ಬಿಡುಗಡೆ.
ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ. “ಅಮರಾವತಿ ಪೊಲೀಸ್ ಸ್ಟೇಷನ್”. ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೈಲರ್ ನ್ನು ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮ ಹರೀಶ್ ಹಾಗೂ ಹಿರಿಯ ಪ್ರಚಾರಕರ್ತರಾದ ನಾಗೇಂದ್ರ ಅವರುಗಳು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದ್ದಕ್ಕಿದ್ದ ಹಾಗೆ ಕಾಣೆಯಾಗುವ ಊರಗೌಡ, ಪ್ರಕರಣ ಪತ್ತೆಹಚ್ಚಲು ಬಂದ ಪೋಲೀಸ್ ಕೂಡ ಕಾಣೆಯಾಗುತ್ತಾನೆ. ಇದೆಲ್ಲದರ ಹಿಂದೆ ಯಾರ ಕೈವಾಡವಿದೆ, ಇದರ ಮರ್ಮವೇನು ಎಂದು ಪತ್ತೆ ಹಚ್ಚಲು ಅಮರಾವತಿಗೆ ಬರುವ ಮಫ್ತಿ ಪೊಲೀಸ್ ಕಥೆಯೇ ಅಮರಾವತಿ ಪೊಲೀಸ್ ಸ್ಟೇಷನ್.
ಚಿತ್ರದಲ್ಲಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಧರ್ಮ ಕೀರ್ತಿರಾಜ್ ಮಾತನಾಡುತ್ತ ನಿರ್ದೇಶಕರು ನನಗೆ ಬ್ರದರ್ ಥರ, ಚಿತ್ರ ಚೆನ್ನಾಗಿ ಬರಬೇಕೆಂದು ಕೆಲ ಭಾಗದ ರೀಶೂಟ್ ಮಾಡಿದ್ದಾರೆ. ತುಂಬಾ ಜನ ಹೆಸರಾಂತ ಖಳ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ರೋಣದ ಬಕ್ಕೇಶ್ ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ ಎಂದರು.
ಗುರುರಾಜ್ ಜಗ್ಗೇಶ್ ಮಾತನಾಡುತ್ತ ನಿರ್ದೇಶಕರಿಗೆ ತುಂಬಾ ಕಾನ್ಫಿಡೆಂಟ್ ಇದೆ. ಅಂದುಕೊಂಡ ಹಾಗೇ ಸಿನಿಮಾ ಬರಬೇಕೆಂದು ತುಂಬಾ ಎಫರ್ಟ್ ಹಾಕಿದ್ದಾರೆ. ನನ್ನದು ನೆಗೆಟಿವ್ ಶೇಡ್ ಇರುವಂಥ, ಟಗರು ಡಾಲಿ ಥರದ, ಕ್ರೂರಿಯ ಪಾತ್ರ. ಚಾಲೆಂಜಿಂಗ್ ಆಗಿತ್ತು ಎಂದರು.
ಹಿರಿಯನಟ ಧರ್ಮ ಮಾತನಾಡಿ ಚಿತ್ರದಲ್ಲಿ ನಾನು ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದೇನೆ. ಆಕ್ಷನ್ ತುಂಬಾ ವಿಶೇಷವಾಗಿದೆ.ನಾಯಕ ಧರ್ಮ ಕೀರ್ತಿರಾಜ್ ತುಂಬಾ ರಿಸ್ಕ್ ತಗೊಂಡು ಅಕ್ಷನ್ ಮಾಡಿದ್ದಾರೆ, ಅಲ್ಲದೆ ನಿರ್ಮಾಪಕರು ಪುನೀತ್ ನಂಬಿ ಹಣ ಹಾಕಿದ್ದಾರೆ ಎಂದರು. ಚಿತ್ರದ ನಾಯಕಿ ತೆಲುಗು ಮೂಲದ ವೇದ್ವಿಕ ಮಾತನಾಡುತ್ತ ಇದು ನನ್ನ ಫಸ್ಟ್ ಕನ್ನಡ ಚಿತ್ರ. ಇಡೀ ಚಿತ್ರ ವಿಲೇಜ್ ಬ್ಯಾಕ್ ಡ್ರಾಪ್ ನಲ್ಲಿದೆ, ಮನಾಲಿಯಲ್ಲಿ ಮಾಡಿರುವ ಡ್ಯುಯೆಟ್ ಸಾಂಗ್ ತುಂಬಾ ಚನ್ನಾಗಿ ಬಂದಿದೆ ಎಂದರು.
ನಂತರ ಮಾತನಾಡಿದ ನಿರ್ದೇಶಕ ಪುನೀತ್, ನಾನು ಈ ಕಥೆ ರೆಡಿ ಮಾಡಿಕೊಂಡ ತಕ್ಷಣ ನಾಗೇಂದ್ರ ಅವರಿಗೆ ಹೇಳಿದ್ದೆ. ಚಿತ್ರದಲ್ಲಿ ರೈತರ ಬಗ್ಗೆ ಹೇಳಿದ್ದೇವೆ. ಕೃತಕ ಆಹಾರದಿಂದ ಜನರಿಗೆ ಏನೆಲ್ಲ ತೊಂದರೆಗಳಾಗುತ್ತಿವೆ ಎಂದು ತೋರಿಸಿದ್ದೇವೆ. ಮಾಳವಿಕಾ ಅವರು ಕಮೀಷನರ್ ಆಗಿ ನಟಿಸಿದ್ದಾರೆ. ವಿಶೇಷವಾಗಿ ಚಿತ್ರದಲ್ಲಿ 29 ಜನ ಕಲಾವಿದರಿದ್ದಾರೆ. ಸಿನಿಮಾ ತುಂಬಾ ಚನ್ನಾಗಿ ಬಂದಿದೆ. ಡಿಸೆಂಬರ್ ನಲ್ಲಿ ರಿಲೀಸ್ ಮಾಡೋ ಪ್ಲಾನಿದೆ ಎಂದು ಹೇಳಿದರು. ನಂತರ ಖಳನಟರಾದ ಕಾಕ್ರೋಚ್ ಸುಧಿ, ಡ್ರಾಗನ್ ಮಂಜು ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.
ಯುವ ಪವರ್ ಪಿಕ್ಚರ್ಸ್ ಲಾಛನದಲ್ಲಿ ಪವರ್ ಪಿಕ್ಚರ್, ಎನ್.ಅನಿತಾ ಸುಕೇಂದ್ರ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕೆ.ಆರ್.ಪ್ರದೀಪ್ ಕಮಲಾಪುರ, ಶ್ರೀಮತಿ ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕಿಯಾಗಿದ್ದಾರೆ,ಸಾಧು ಕೋಕಿಲ, ಮಾಳವಿಕ ಅವಿನಾಶ್, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಉಳಿದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ೪ ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆಯಿದೆ. ಗೌತಮ್ ಮಟ್ಟಿ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ, ದೀಪು ಅವರ ಸಂಕಲನ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರಕ್ಕಿದೆ.
