ನೆನಪು ಮರುಕಳಿಸುವ ಕಥೆಯಲ್ಲಿ ಪ್ರೀತಿಯ ನೆರಳು “ಅಮರ್ಥ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಅಮರ್ಥ
ನಿರ್ದೇಶಕರು : ವಿನಯ್ ಪ್ರೀತಮ್ , ಗುರು ಹೆಗ್ಡೆ
ನಿರ್ಮಾಪಕ : ಕನ್ಯಾನ ಸದಾಶಿವ ಶೆಟ್ಟಿ
ಸಂಗೀತ : ಪಂಚಮ್ ಜೀವ
ತಾರಾಗಣ : ಶ್ರೀನಗರ ಕಿಟ್ಟಿ , ಮೇಘನರಾಜ್, ಉಷಾ ಭಂಡಾರಿ, ಅಶ್ವ ,ಗುರು ಹೆಗ್ಡೆ, ಆರಾಧನಾ ಭಟ್ , ರೂಪ , ಹರೀಶ್ ಹಿರಿಯೂರು ಅರವಿಂದ್ ಬೋಳಾರ್ , ಪುಷ್ಪರಾಜ್ , ಕೃತಿ ಬಿ ಶೆಟ್ಟಿ ಹಾಗೂ ಮುಂತಾದವರು….
ಜೀವನದಲ್ಲಿ ಪ್ರತಿಯೊಬ್ಬರ ಬದುಕಿನ ಪಯಣವು ಸುಂದರವಾಗಿರಲಿ ಎಂದು ಆಸೆ ಪಡುವುದು ಸರ್ವೇ ಸಾಮಾನ್ಯ. ಆದರೆ ಸಮಯ , ಸಂದರ್ಭದ ನಡುವೆ ಕಾಲಕ್ಕೆ ತಕ್ಕಂತೆ ಸಾಗಿ ವಿಧಿಯ ಆಟಕ್ಕೆ ಮಣಿಯಬೇಕಾಗುತ್ತದೆ. ಇಂತಹ ಒಂದಷ್ಟು ಅಂಶಗಳ ಜೊತೆಗೆ ಶಾಲೆಯ ಬದುಕು, ಯೌವ್ವನದ ಹಾದಿ ನಡುವೆ ಬದುಕಿನ ಪಾಠದ ಜೊತೆ ಸವಿ ಸವಿ ನೆನಪುಗಳ ಮರುಕಳಿಸುವ ಗೆಳೆಯ ಗೆಳತಿಯರ ಸಮಾಗಮದ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಅಮರ್ಥ” .
ಸುಂದರ ಪರಿಸರದ ನಡುವೆ ಬೆಳೆಯುತ್ತಿರುವ ಹುಡುಗ ಹುಡುಗಿಯರು ಶಾಲೆಯಲ್ಲಿ ತುಂಟಾಟ , ತರಲೆ , ಪ್ರೀತಿ , ಆಟ , ನೋಟ ಒಡನಾಟದಲ್ಲಿ ಶಿಕ್ಷಕರ ಪ್ರೀತಿ ಹಾಗೂ ಕೋಪ ಕೋಪಕ್ಕೂ ಸಿಕ್ಕಿಹಾಕಿಕೊಳ್ಳುತ್ತಾರೆ. ಇದರ ನಡುವೆ ರಮೇಶ ಹಾಗೂ ಲಕ್ಷ್ಮಿಯ ಪ್ರೀತಿಯ ಸೆಳೆತ. ಇನ್ನು ಅನಿತಾ , ಕಿರಣ್ , ಗಣಪ , ರೂಪ , ಅನು , ಜನಿಫರ್ ಸೇರಿದಂತೆ ಒಬ್ಬೊಬ್ಬರದು ಒಂದೊಂದು ರೀತಿಯ ಹಾದಿ. ಇದರ ನಡುವೆ ಮತ್ತೊಂದು ಟ್ರ್ಯಾಕ್ ಸಲೂನ್ ಅಂಗಡಿಯ ಮೋಹನ ಮದುವೆ ಆಸೆಯೊಂದಿಗೆ ಬಚ್ಚು ಎಂಬ ಮೋಸದ ಮದುವೆ ಬ್ರೋಕರ್ ಮಾತಿಗೆ ಮರುಳಾಗುತ್ತಾನೆ. ಹೋಟೆಲ್ ನಟಿಸುವ ಕಾಮತ್ ಈ ಘಟನೆಗೆ ಸಾಕ್ಷಿಯಾಗಿ ಕಾಣುತ್ತಾರೆ.
ಪ್ರೀತಿ ಹಾಗೂ ಕಂಕಣ ಭಾಗ್ಯ ಅಂದುಕೊಂಡಷ್ಟು ಸುಲಭವಾಗಿ ದಕ್ಕುವುದಿಲ್ಲ ಎಂಬ ಅರಿವು ಮೂಡುವಷ್ಟರಲ್ಲಿ ಹಲವು ಘಟನೆಗಳು ನಡೆದು ಹೋಗುತ್ತದೆ. ಇನ್ನು ಲಕ್ಷ್ಮಿ ಹಾಗೂ ರಮೇಶನ ಪ್ರೀತಿಯ ವಿಚಾರ ಕುಟುಂಬಕ್ಕೆ ತಿಳಿದು ಗಲಾಟೆ ಎದುರಾಗುತ್ತದೆ. 25 ವರ್ಷಗಳ ನಂತರ ಮತ್ತೆ ಭೇಟಿಯಾಗುವ ಈ ಎಲ್ಲಾ ಗೆಳೆಯ ಗೆಳತಿಯರ ಜೀವನ ಹಾದಿಯಲ್ಲಿ ಒಬ್ಬರು ಇನ್ಸ್ಪೆಕ್ಟರ್ , ಮತ್ತೊಬ್ಬರು ಡಾಕ್ಟರ್ , ಮತ್ತೊಬ್ಬರು ಟೀಚರ್ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮ ಆಸ್ತಿತ್ವವನ್ನು ಪಡೆದುಕೊಂಡು ಮತ್ತೆ ಎಲ್ಲರೂ ಒಗ್ಗೂಡುವ ಸಂದರ್ಭ ಎದುರಾಗುತ್ತದೆ.

ಮುಂದೆ ಎದುರಾಗುವ ಒಂದಷ್ಟು ಘಟನೆಗಳು ಬೇರೆಯದೆ ದಿಕ್ಸೂಚಿಯನ್ನ ತೋರಿಸುತ್ತಾ ಹೋಗುತ್ತದೆ. ಏನದು ಆ ಗುಟ್ಟು… ರಮೇಶನ ಹಾದಿ ಯಾವುದು.. ಲಕ್ಷ್ಮಿಗೆ ಪ್ರೀತಿ ಸಿಗುತ್ತಾ… ಗೆಳೆಯ ಗೆಳತಿಯರ ಕಣ್ಣಿಗೆ ಕಾಣುವ ಸತ್ಯ ಏನು ಎಂಬುದನ್ನು ತಿಳಿಯುವುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಾಲ್ಯದ ಗೆಳೆಯ ಗೆಳತಿಯರು ಮತ್ತೆ ರೀ ಯೂನಿಯನ್ ಆಗುವ ಅಂಶ ಒಳಗೊಂಡಿದ್ದು , ಅವರ ಆಟ , ತುಂಟಾಟ , ಮನಸ್ಥಿತಿ , ಪ್ರಸ್ತುತ ಬದುಕಿನ ಜೀವನ ಹೇಗೆ ಎಂಬ ನೆನಪನ್ನ ಮರುಕಳಿಸುವ ಪ್ರಯತ್ನ ಗಮನ ಸೆಳೆಯುವಂತಿದೆ.
ಚಿತ್ರದ ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಜೀವ ಬಂದಂತಿದೆ. ಇನ್ನಷ್ಟು ಚಿತ್ರಕಥೆಯಲ್ಲಿ ಹಿಡಿತ ಮಾಡಬಹುದಿತ್ತು. ಬಾಲ್ಯದ ನೆನಪು ಮೂಡಿಸುವ ನಿರ್ದೇಶಕರ ಪ್ರಯತ್ನ ವಿಭಿನ್ನವಾಗಿದೆ. ಇಂತಹ ಚಿತ್ರಕ್ಕೆ ಹಣ ಹಾಕಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಇನ್ನು ಸಂಗೀತ , ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ.
ಇನ್ನು ಪಾತ್ರವಾಗದಲ್ಲಿ ರಮೇಶನಾಗಿ ಶ್ರೀನಗರ ಕಿಟ್ಟಿ , ಲಕ್ಷ್ಮಿಯಾಗಿ ಮೇಘನಾ ರಾಜ್ ತಮ್ಮ ತಮ್ಮ ಪಾತ್ರಕ್ಕೆ ಜೀವ ನೀಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಗುರು ಹೆಗಡೆ , ಅರವಿಂದ್ ಬೋಳಾರ್ , ಪುಷ್ಪರಾಜ್ ರೂಪ , ಕೃತಿ ಬಿ ಶೆಟ್ಟಿ , ಹರೀಶ್ ಹಿರಿಯೂರು , ಆರಾಧನಾ ಭಟ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಸಾಗಿದೆ. ಒಟ್ಟಾರೆ ಎಲ್ಲರೂ ನೋಡುವಂತಹ ಚಿತ್ರ ಇದಾಗಿದೆ.
