ಯುವ ನಟ ಭಾರ್ಗವ ಕೃಷ್ಟ ನಟನೆಯ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ’19’.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಒಳಗೊಂಡ ಸಿನಿಮಾಗಳ ಮೂಲಕ ಕುತೂಹಲ ಮೂಡಿಸುತ್ತಿರುವ ಯುವ ಪ್ರತಿಭೆಗಳ ಸಾಲಿಗೆ ಇದೀಗ ‘19’ ಎಂಬ ಚಿತ್ರತಂಡವೂ ಸೇರ್ಪಡೆಯಾಗುತ್ತಿದೆ.
ಕ್ರೈಂ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಾನ್ಸೆಪ್ಟ್ ಹೊಂದಿದ ಈ ಚಿತ್ರವು ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ದುಬೈನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿಕೊಂಡಿರುವ ಪ್ರತಿಭಾವಂತ ಯುವ ನಾಯಕನಟ ಭಾರ್ಗವ ಕೃಷ್ಣ, ಈ ಹಿಂದೆ ‘ಓಂ ಶಿವಂ’ ಎಂಬ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಚಿತ್ರವನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ದಿದ್ದರು.

ಇದೀಗ ತಮ್ಮ ಮತ್ತೊಂದು ವಿಭಿನ್ನ ಪ್ರಯತ್ನವಾದ ‘19’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ಭಾರ್ಗವ ಕೃಷ್ಣ ಅವರಜತೆ ನಾಯಕಿಯಾಗಿ ಆಶಿಕಾ ರೈ ಅಭಿನಯಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಕೆ.ಎನ್. ಕೃಷ್ಣ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಯುವ ನಿರ್ದೇಶಕ ಅಕುಲ್ ಅವರು ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ತಾಂತ್ರಿಕ ತಂಡವೂ ವಿಶೇಷವಾಗಿದೆ, ಈ ಚಿತ್ರದ ನಾಲ್ಕು ಹಾಡುಗಳಿಗೆ ಅಭಿನಂದನ್ ಕಶ್ಯಪ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ, ಜತೆಗೆ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಚಿತ್ರದ ನಾಲ್ಕು ಪ್ರಮುಖ ಸಾಹಸ ದೃಶ್ಯಗಳಿಗೆ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಅವರು ಆ್ಯಕ್ಷನ್ ಕೋರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಛಾಯಾಗ್ರಹಣದ ಜವಾಬ್ದಾರಿಯನ್ನು ಸ್ವಾಮಿ ಮೈಸೂರು ಅವರು ವಹಿಸಿಕೊಂಡಿದ್ದು, ಸಿನಿಮಾದ ದೃಶ್ಯಗಳನ್ನು ವಿಭಿನ್ನ ಹಾಗೂ ಕುತೂಹಲಕಾರಿ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಸಂಕಲನ ಹಾಗೂ DI ಕಾರ್ಯವನ್ನು ಅನುರಂಜನ್ ಎಚ್.ಆರ್. ಅವರು ನಿರ್ವಹಿಸಿದ್ದಾರೆ. ‘19’ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಂತಹ ಕ್ರೈಂ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದ್ದು, ಕಥೆ ಸಾಗುವ ರೀತಿಯಲ್ಲಿ ಹಲವು ತಿರುವುಗಳು ಪ್ರೇಕ್ಷಕರಲ್ಲಿ ಕುತೂಹಲದಿಂದ ಮೂಡಿಸಲಿವೆ ಎಂಬ ನಿರೀಕ್ಷೆ ಚಿತ್ರತಂಡದ್ದು.

ಈಗಾಗಲೇ ಚಿತ್ರವು ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಬಿಡುಗಡೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಚಿತ್ರತಂಡವು ಸದ್ಯದಲ್ಲೇ ಟೀಸರ್ ಹಾಗೂ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಆ ಮೂಲಕ ಚಿತ್ರದ ಹಾಡುಗಳು ಹಾಗೂ ಸಂಗೀತವನ್ನು ಪ್ರೇಕ್ಷಕರಿಗೆ ಪರಿಚಯಿಸುವ ಯೋಜನೆ ಹೊಂದಿದೆ. ಯುವ ಪ್ರತಿಭೆಗಳ ಹೊಸ ಪ್ರಯತ್ನವಾಗಿರುವ ‘19’, ತನ್ನ ವಿಭಿನ್ನ ಕಥೆ, ಕುತೂಹಲಕಾರಿ ಸನ್ನಿವೇಶಗಳು, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಹಾಗೂ ತಾಂತ್ರಿಕ ಶ್ರೀಮಂತಿಕೆಯಿಂದ ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.