ಹಳ್ಳಿಯ ಕಥೆ ವ್ಯಥೆಯ ರಾಜಕೀಯ “ಗ್ರಾಮಾಯಣ” (ಚಿತ್ರವಿಮರ್ಶೆ – ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5
ಚಿತ್ರ : ಗ್ರಾಮಾಯಣ
ನಿರ್ದೇಶಕ : ದೇವನೂರು ಚಂದ್ರು
ನಿರ್ಮಾಪಕ : ಜಿ. ಮನೋಹರನ್ , ನವೀನ್ ಮನೋಹರನ್
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ಸಂತೋಷ್ ರೈ ಪತಾಜೆ
ತಾರಾಗಣ : ವಿನಯ್ ರಾಜಕುಮಾರ್ , ಮೇಘ ಶೆಟ್ಟಿ , ಗೋಪಾಲ್ ಕೃಷ್ಣ ದೇಶಪಾಂಡೆ , ಅಪರ್ಣ , ಅಚ್ಚುತ್ ಕುಮಾರ್ , ಅರುಣ್ ಸಾಗರ್, ಯೋಗಿ , ಬಾಲ ರಾಜ್ವಾಡಿ, ಹಾಗೂ ಮುಂತಾದವರು…

ಹಳ್ಳಿ ಎಂದಾಕ್ಷಣ ನೆನಪಾಗುವುದೇ ಸುಂದರ ಪರಿಸರ , ಸ್ನೇಹ , ಗೆಳೆತನ , ಪ್ರೀತಿ , ಸಂಬಂಧ ಆಚರಣೆ , ಸಂಪ್ರದಾಯ , ಒಗ್ಗಟ್ಟಿನ ಬೆಸುಗೆ ಎನ್ನುವಂಥದ್ದು , ಅದರಲ್ಲೂ ರಾಜಕೀಯ , ದ್ವೇಷ ಬೆಳೆದಾಗ ಗ್ರಾಮದ ಸ್ಥಿತಿಗತಿ ಪರಿಸ್ಥಿತಿಯೇ ಬದಲಾಗುತ್ತಾ ಹೋಗುತ್ತದೆ. ಇಂತದ್ದೇ ಗ್ರಾಮ ಒಂದರ ಜನರ ಜೀವನದ ಬದುಕಿನಲ್ಲಿ ಹಣವಿರುವ ಪುಡಾರಿಗಳು , ರಾಜಕೀಯ ನಾಯಕನ ಕುತಂತ್ರ ಎದುರಾದಾಗ ಬಹಳಷ್ಟು ಕಷ್ಟಕಾರ್ಪಣ್ಯಗಳು ಎದುರಾಗುತ್ತಾ ಹೋಗುತ್ತದೆ.

ಅಂತದ್ದೇ ಮೂಲ ಕಥೆಯೊಂದಿಗೆ ಗ್ರಾಮೀಣ ಕಥೆಯನ್ನು ಅಚ್ಚುಕಟ್ಟಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಗ್ರಾಮಾಯಣ”. ಹಳ್ಳಿಯಲ್ಲಿ ನನ್ನ ಜೀವನ ಬದುಕು ಎನ್ನುತ್ತಾ ಗೆಳೆಯನ ಜೊತೆ ಮೋಟರ್ ಪಂಪ್ಸೆಟ್ ರಿಪೇರಿ ಮಾಡುತ್ತಾ ತಂದೆ , ತಾಯಿ , ತಂಗಿಯರ ಜೊತೆ ಬಡ ಸ್ಥಿತಿಯಲ್ಲೇ ಜೀವನ ನಡೆಸುವ ಹುಡುಗ ಸಿಕ್ಸ್ತ್ ಸೆನ್ಸ್ ಸೀನ (ವಿನಯ್ ರಾಜಕುಮಾರ್).

ಮನೆಯಲ್ಲಿ ಬೈಸಿಕೊಂಡರು ಗೆಳೆಯರ ಜೊತೆ ಒಗ್ಗಟ್ಟಾಗಿ ಕಾಲ ಕಳೆಯುವ ಸೀನನಿಗೆ ಅದೇ ಊರಿನ ಧೈರ್ಯವಂತ ಮುದ್ದಾದ ಬೆಡಗಿ ಕುಸುಮ (ಮೇಘ ಶೆಟ್ಟಿ) ಳನ್ನ ಕಂಡರೆ ಆಸೆ. ಓರೆ ನೋಟದಲ್ಲಿ ನೋಡಿಕೊಳ್ಳುವ ಇವರಿಬ್ಬರ ಮನಸ್ಸಿನಲ್ಲೂ ಪ್ರೀತಿ. ನಾನು ಮದುವೆಯಾಗಲು ಸಿದ್ದ ಎನ್ನುವ ಸೀನನ ಮಾತಿಗೆ ಮುಗುಳ್ನಗೆಯಲ್ಲಿ ಒಪ್ಪಿಗೆ ನೀಡುವ ಕುಸುಮ.

ಇನ್ನೂ ಈ ದೇವಪುರ ಗ್ರಾಮದಲ್ಲಿ ಕರಿ ಬೇಕ್ಕು (ಲೂಸ್ ಮಾದ ಯೋಗಿ) ತನ್ನ ಗ್ಯಾಂಗ್ ಮೂಲಕ ಕೇಬಲ್ ಟಿವಿ ನಡೆಸುತ್ತಾನೆ, ಇದಕ್ಕೆ ಬೆಂಬಲವಾಗಿ ಸತ್ ನೀಡುತ್ತಾ ದುಷ್ಕೃತ್ಯಕ್ಕೆ ಬಳಸಿಕೊಳ್ಳುವ ರಾಜಕೀಯ ಮುಖಂಡ ಸದಾನಂದ ಸ್ವಾಮಿ (ಗೋಪಾಲಕೃಷ್ಣ ದೇಶಪಾಂಡೆ). ಈತನಿಗೆ ಬೆನ್ನೆಲುಬಾಗಿ ನಿಲ್ಲುವ ಎಂಎಲ್ಎ ನವೀನ್ ರಾಮಪ್ಪ (ಅರುಣ್ ಸಾಗರ್)
ಇದೊಂದು ಗ್ಯಾಂಗ್ ಗ್ರಾಮಕ್ಕೆ ಸಿಗುವ ಸೌಲತ್ತನ್ನ ನಾನಾ ರೂಪದಲ್ಲಿ ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾ ಹೋಗುತ್ತಾರೆ. ಇವರ ನಡುವೆಯೇ ಲೋಕಲ್ ಪತ್ರಿಕೆಯ ಫೋಟೋಗ್ರಾಫರ್ ರಮಣಿ (ಜಹಾಂಗೀರ್) ಹಾಗೂ ಐದು ರೂಪಾಯಿಯ ಡಾಕ್ಟರ್ ಶಂಕರೇಗೌಡ (ಅಚ್ಯುತ್‌ಕುಮಾರ್) ಕೂಡ ತಮ್ಮ ಪ್ರಾಮಾಣಿಕ ಬದುಕನ್ನು ನಡೆಸುತ್ತಾರೆ. ಇದರ ನಡುವೆ ಸೀನನ ಬದುಕಲ್ಲಿ ಗೆಳೆಯನ ಸಾವು , ಪ್ರೀತಿಯ ಕಗ್ಗಂಟು ಒಂದಷ್ಟು ಘಟನೆಗಳು ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತದೆ.

ಇನ್ನು ಪುಡಿ ರಾಜಕಾರಣಿಯ ಕುಮ್ಮಕ್ಕು , ಚುನಾವಣೆಗೆ ನಿಂತು ಗೆಲ್ಲಬೇಕೆಂದು ಊರ ಜನರಿಗೆ ಸಹಾಯ ಮಾಡುವಂತೆ ಆಡುವ ನಾಟಕ ಒಂದೆಡೆಯಾದರೆ. ಅನ್ಯಾಯದ ವಿರುದ್ಧ ಹೋರಾಡಲು ಮುಂದಾಗುವ ಸೀನನ ಬದುಕು , ಹೀಗೆ ಸಾಗುವ ಕಥೆಯಲ್ಲಿ ನೈಜಕ್ಕೆ ಹೊಂದಿಕೊಳ್ಳುವಂತಹ ಗ್ರಾಮೀಣ ಭಾಗದ ಬದುಕಲ್ಲಿ ಎದುರಾಗುವ ಘಟನೆಗಳನ್ನು ಏನೆಲ್ಲಾ ಹೇಳುತ್ತೆ… ಹೇಗೆಲ್ಲಾ ಇರುತ್ತೆ ಎಂಬುದನ್ನು ಒಮ್ಮೆ ತೆರೆಯ ಮೇಲೆ ಬಂದು ನೋಡಬೇಕು.

ಸಾಮಾನ್ಯವಾಗಿ ಒಂದು ಗ್ರಾಮೀಣ ಭಾಗದ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಂಡು ತೆರೆಯ ಮೇಲೆ ತಂದಿರುವ ನಿರ್ದೇಶಕ ದೇವನೂರು ಚಂದ್ರು ರವರ ಶ್ರಮವನ್ನ ಮೆಚ್ಚಲೇಬೇಕು. ಭಾಷೆ , ಸೊಗಡು , ಸಂದರ್ಭದಲ್ಲಿ ತಕ್ಕಂತ ಸಂಭಾಷಣೆ , ಸಾಹಿತ್ಯ , ಹದವಾದ ಸಂಗೀತ ಬೆರೆಸಿ ಉತ್ತಮ ಪ್ರಯತ್ನದ ಚಿತ್ರವಾಗಿ ನೀಡಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಇನ್ನೊಂದಷ್ಟು ಗಟ್ಟಿತನದ ವಿಚಾರ ಬೇಕಿತ್ತು ಅನಿಸುತ್ತದೆ. ಆದರೂ ಮೊದಲ ಪ್ರಯತ್ನದಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಇಂತಹ ಸದಾಭಿರುಚಿಯ ಗ್ರಾಮೀಣ ಸೊಗಡಿನ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನು ಕೂಡ ಮೆಚ್ಚಲೇಬೇಕು. ಹಾಡುಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ. ಸಂಗೀತ ಉತ್ತಮವಾಗಿದ್ದು , ಛಾಯಾಗ್ರಾಹಕರ ಕೈಚಳಕವು ಸೊಗಸಾಗಿದೆ. ಅದೇ ರೀತಿ ತಾಂತ್ರಿಕವಾಗಿ ತಂಡ ಬಹಳ ಶ್ರಮಪಟ್ಟಿರುವುದು ಕಾಣುತ್ತದೆ. ಇನ್ನು ಸೀನನ ಪಾತ್ರದಲ್ಲಿ ನಟ ವಿನಯ್ ರಾಜಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ನೀಡಲು ಶ್ರಮಪಟ್ಟು ಅಭಿನಯಿಸಿದ್ದಾರೆ. ಸಾಂಗ್ಸ್ ಹಾಗೂ ಆಕ್ಷನ್ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇನ್ನು ನಟಿ ಮೇಘ ಶೆಟ್ಟಿ ತನ್ನ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಎಂದಿನಂತೆ ಗೋಪಾಲ್ ದೇಶಪಾಂಡೆ ತಮ್ಮ ಪಾತ್ರವನ್ನ ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ವಿಶೇಷವಾಗಿ ಲೂಸ್ ಮಾದ ಯೋಗಿ ಕೂಡ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ನಟಿ ಅರ್ಪಣಾ ನಾಯಕನ ತಾಯಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದು , ನೆನಪಿನಲ್ಲಿ ಉಳಿಯುತ್ತಾರೆ. ಉಳಿದಂತೆ ಅಚ್ಚುತ್ ಕುಮಾರ್ , ಅರುಣ್ ಸಾಗರ್, ಜಹಂಗೀರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬಹುದು.

Visited 1 times, 1 visit(s) today
error: Content is protected !!