ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದಲ್ಲಿ ಮತ್ತೆ ಬರುತ್ತಿದೆ “ಅಮೇರಿಕಾ ಅಮೇರಿಕಾ 2

Spread the love

90 ರ ದಶಕದಲ್ಲಿ ಭರ್ಜರಿ ಯಶಸ್ಸು ಕಂಡ ಚಿತ್ರ “ಅಮೇರಿಕಾ ಅಮೇರಿಕಾ”. ನಾಗತಿಹಳ್ಳಿ ಚಂದ್ರಶೇಖರ ಆ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ “ಅಮೇರಿಕಾ ಅಮೇರಿಕಾ ೨” ಎಂಬ ಹೊಸಚಿತ್ರ ನಿರ್ಮಾಣವಾಗಿದೆ. ನಾಗತಿಹಳ್ಳಿ ಚಂದ್ರಶೇಖರ ಅವರೆ ಈ ಹೊಸಚಿತ್ರವನ್ನೂ ನಿರ್ದೇಶಿಸಿದ್ದಾರೆ. ನಿರೂಪ್ ಭಂಡಾರಿ, ಸಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬರ್ ಈ ಚಿತ್ರದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನೆರವೇರಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಹಳೇ ಕಥೆಗಳಿಂದ್ಲೇ ಹೊಸ ಕಥೆಗಳು ಹುಟ್ಟೋದು” ಇದು ನಿಜ. ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಲ್ಲಿ ಎಲ್ಲರೂ ಇದು ಹೊಸ ಕಥೆ ಎಂದು ಹೇಳುತ್ತಾರೆ. ಎಲ್ಲಾ ಹೊಸಕಥೆಗಳು ಹಳೆ ಕಥೆಗಳೆ ಆಗಿರುತ್ತದೆ. ಹಾಗಾಗಿ ಹೊಸತು ಎನ್ನುವುದರ ಹುಡುಕಾಟದಲ್ಲಿ ಎಲ್ಲರೂ ಇದ್ದೇವೆ. ತೊಂಭತ್ತರ ದಶಕದಲ್ಲಿ ಅದ್ಭುತ ಯಶಸ್ಸು ಕಂಡ ನನ್ನ ನಿರ್ದೇಶನದ ಚಿತ್ರ “ಅಮೇರಿಕಾ ಅಮೇರಿಕಾ “. ಈಗ ಅದೇ ಶೀರ್ಷಿಕೆಯೊಂದಿಗೆ ಹೊಸಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ಅದಕ್ಕೆ “ಅಮೇರಿಕಾ ಅಮೇರಿಕಾ ೨” ಎಂದು ಹೆಸರಿಟ್ಟಿದ್ದೇವೆ. ಆದರೆ, ಇದು ಆ ಚಿತ್ರದ ಮುಂದುವರಿದ ಭಾಗ ಅಲ್ಲ. ಆ ಕಥೆಯೇ ಬೇರೆ. ಈ ಕಥೆಯೇ ಬೇರೆ. ಇಲ್ಲೂ ಮೂರು ಮುಖ್ಯಪಾತ್ರಗಳಿದೆ. ಇಲ್ಲಿ ಅಲ್ಲಿಯ ಹಾಗೆ ಸೂರ್ಯ, ಭೂಮಿ, ಶಶಾಂಕ್ ಪಾತ್ರಗಳಿಲ್ಲ. ಇದೇ ಬೇರೆ ಪಾತ್ರಗಳು. ಇದೊಂದು ಸ್ತ್ರೀ ಪ್ರಧಾನ ಚಿತ್ರ ಎನ್ನಬಹುದು. ಸಾನ್ವಿ ಶ್ರೀವಾಸ್ತವ್ ಅವರ ಅದ್ಭುತ ಅಭಿನಯ ಈ ಚಿತ್ರದಲ್ಲಿ ನೋಡಬಹುದು.

ನಿರೂಪ್ ಭಂಡಾರಿ ಹಾಗೂ ಪೃಥ್ವಿ ಅಂಬರ್ ಅವರ ಅಭಿನಯವೂ ಅಷ್ಟೇ ಅದ್ಭುತ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಸಹನಾ ವಿಜಯಕುಮಾರ್ ಅವರ ಕದಾಂಬರಿ ಆಧಾರಿತವಾಗಿದೆ. ನಾಲ್ಕು ಸುಮಧುರ ಹಾಡುಗಳಿದ್ದು, ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತ ನಕುಲ್ ಅಭಯಂಕರ್ ಅವರದು. ಎಸ್ ಕೆ ರಾವ್ ಛಾಯಾಗ್ರಹಣದಲ್ಲಿ ಅಮೇರಿಕಾದ ಸೌಂದರ್ಯ ನೋಡುವುದೇ ಒಂದು ಸೊಗಸು. ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಸಹ ಅಲ್ಲಿನ ಸೌಂದರ್ಯವನ್ನು ಡ್ರೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ನಮ್ಮ ನಾಗತಿಹಳ್ಳಿ ಸಿನಿ ಕ್ರಯೇಷನ್ಸ್ ಮೂಲಕವೇ ಈ ಚಿತ್ರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ‌ಇನ್ನಷ್ಟು ಮಾಹಿತಿ ನೀಡುವುದಾಗಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.

ನಾಗತಿಹಳ್ಳಿ ಚಂದ್ರಶೇಖರ್ ಅವರು ನನ್ನನ್ನು ಆಫೀಸ್ ಗೆ ಕರೆದು ಈ ಚಿತ್ರದ ಕಥೆ ಹೇಳಿದಾಗ, ಶೀರ್ಷಿಕೆ ಕೇಳಿಯೇ ನಟಿಸಬೇಕೆಂದುಕೊಂಡೆ. ಮೂವತ್ತು ವರ್ಷಗಳ ಹಿಂದೆ ಥಿಯೇಟರ್ ನಲ್ಲಿ ಆ ಚಿತ್ರವನ್ನು ನೋಡಿದ ನೆನಪು ಇನ್ನೂ ಹಾಗೆ ಉಳಿದಿದೆ. ಇದು ಅದರ ಮುಂದುವರಿದ ಭಾಗ ಅಲ್ಲವಾದರೂ, ಈ ಚಿತ್ರದ ಕಥೆ ಹಾಗೂ ಪಾತ್ರಗಳು ಎಲ್ಲರ ನೆನಪಿನಲ್ಲಿರುವಂತದ್ದು. ನನ್ನ ಪಾತ್ರ ಕೂಡ ಚೆನ್ನಾಗಿದೆ. ‌ಅವಕಾಶ ನೀಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಧನ್ಯವಾದ ಎಂದರು ನಟ ನಿರೂಪ್ ಭಂಡಾರಿ.

ಬಹಳ ದಿನಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ. ನನ್ನ ಹದಿಮೂರು ವರ್ಷಗಳ ಸಿನಿಪಯಣದಲ್ಲೇ ಇಂತಹ ಪಾತ್ರ ಮಾಡಿಲ್ಲ. ಅಂತಹ ಅದ್ಭುತ ಪಾತ್ರವನ್ನು ನೀಡಿರುವ ನಿರ್ದೇಶಕರಿಗೆ ಧನ್ಯವಾದ. ಇನ್ನೂ, ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಬಹಳ ಚೆನ್ನಾಗಿದೆ ಎಂದು ನಟಿ ಶಾನ್ವಿ ಶ್ರೀವಾಸ್ತವ್ ಹೇಳಿದರು.

ವಯಸ್ಸಿನಲ್ಲಿ ಹಿರಿಯರಾದರೂ ಉತ್ಸಾಹದಲ್ಲಿ ಯುವಕರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ನಮ್ಮಗೆಲ್ಲಾ ಸ್ಪೂರ್ತಿ. ಹಾಡುಗಳು, ದೃಶ್ಯಗಳು ಹಾಗೂ ಸಂಭಾಷಣೆಯ ಮೂಲಕ ಈಗಲೂ ಎಲ್ಲರ ಮನದಲ್ಲಿ ಮನೆ ಮಾಡಿರುವ ಚಿತ್ರ “ಅಮೇರಿಕಾ ಅಮೇರಿಕಾ”. ಈಗ ಅದೇ ಹೆಸರಿನ ಚಿತ್ರದಲ್ಲಿ, ಆ ಚಿತ್ರದ ನಿರ್ದೇಶಕರ ನಿರ್ದೇಶನದಲ್ಲಿ ಅಭಿನಯಿಸಿರುವುದು ಬಹಳ ಖುಷಿಯಾಗಿದೆ ಎಂದರು ನಟ ಪೃಥ್ವಿ ಅಂಬರ್.

ನಿರ್ಮಾಣದ ಉಸ್ತುವಾರಿ ಹೊತ್ತಿರುವ ಶೋಭ ನಾಗತಿಹಳ್ಳಿ ಚಂದ್ರಶೇಖರ್, ಛಾಯಾಗ್ರಾಹಕ ಎಸ್ ಕೆ ರಾವ್ ಹಾಗೂ ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಸೇರಿದಂತೆ ಅನೇಕ ತಂತ್ರಜ್ಞರು ” “ಅಮೇರಿಕಾ ಅಮೇರಿಕಾ ೨” ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

Visited 1 times, 1 visit(s) today
error: Content is protected !!