ಗ್ರಾಮೀಣ ಸೊಗಡಿನ ತುಂಟಾಟ , ಪ್ರೀತಿ, ಬದುಕಿನ ಪಾಠ “ಲೋ ನವೀನ” | ಚಿತ್ರ ವಿಮರ್ಶೆ -ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಲೋ ನವೀನ
ನಿರ್ದೇಶಕ : ಧನುರ್ಧಾರಿ ಪವನ್
ನಿರ್ಮಾಪಕಿ : ಕೀರ್ತಿಸ್ವಾಮಿ
ಸಂಗೀತ : ನವೀನ್ ಸಜ್ಜು
ಛಾಯಾಗ್ರಹಣ : ಸತೀಶ್
ತಾರಾಗಣ : ನವೀನ್ ಸಜ್ಜು , ವರ್ಷ ಗಿರಿಧರ್ , ರೇಷ್ಮಾ ವಿ ಗೌಡ , ಪ್ರಕಾಶ್ ತುಮಿನಾಡು , ಅಪೂರ್ವಶ್ರೀ , ರಮೇಶ್ ಪಾಪಯ್ಯ ಹಾಗೂ ಮುಂತಾದವರು…
ಗ್ರಾಮೀಣ ಭಾಗದ ನಡೆ-ನುಡಿ , ಸಂಪ್ರದಾಯ, ಆಚರಣೆ , ಪದ್ಧತಿ , ಸಂಬಂಧಗಳ ಮೌಲ್ಯ , ಗೆಳೆಯರ ಒಡನಾಟ , ತರ್ಲೆ, ತುಂಟಾಟ , ಎಡವಿಟ್ಟಿನ ನಡುವೆ ಮುಗ್ಧ ಪ್ರೀತಿ , ಬದುಕಿನ ಪಾಠ ತಿಳಿಸುವ ಹಾದಿಯಲ್ಲಿ ಹಾಸ್ಯದ ಲೇಪನ ಜೊತೆ ಮನಮುಟ್ಟುವಂತಹ ಕಥಾನಕದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಲೋ ನವೀನ”.
ಸುಂದರ ಪರಿಸರದ ನಡುವೆ ಹಳ್ಳಿಯ ಬದುಕನ್ನೇ ನಂಬಿಕೊಂಡು ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸಾಗುವವರ ಸಂಖ್ಯೆಯೇ ಹೆಚ್ಚು. ಅದರಲ್ಲೂ ಕೆಲ ಪುಂಡೈಕಳು ಕೆಲಸಕ್ಕಿಂತ ಮಾತೆ ಬಂಡವಾಳ ಮಾಡಿಕೊಂಡು ಅಡ್ಡಾದಿಡ್ಡಿ ಓಡಾಡಿಕೊಂಡಿರುವುದೇ ಕಾಯಕ.
ಮನೆಗಿಂತ ಗೆಳೆಯರೇ ಜೀವನ ಎನ್ನುವ ನವೀನ (ನವೀನ್ ಸಜ್ಜು) ಕೆಲಸ ಕಾರ್ಯ ಬಿಟ್ಟು ಕಂಕಣ ಭಾಗ್ಯ ಕಾಣದ ಮುದುಕನಿಗೆ ಹೆಣ್ಣು ಹುಡುಕಲು ಹೋಗಿ ಇಕಟ್ಟಿಗೆ ಸಿಲುಕುತ್ತಾನೆ. ಇನ್ನು ಅದೇ ಊರಿನಲ್ಲಿರುವ ಮಾವನ ಮಗಳು ಆಶಾ (ವರ್ಷ ಗಿರಿಧರ್) ಎಂದರೆ ಜೀವ. ಆದರೆ ಅಳಿಯನ ಕಂಡರೆ ಮಾವನಿಗೆ ಕೋಪ. ತನ್ನ ಮಗಳಿಗೆ ಸರ್ಕಾರಿ ಉದ್ಯೋಗದ ಹುಡುಗನನ್ನು ಹುಡುಕಿ ಮದುವೆ ಮಾಡಲು ಮುಂದಾಗುವ ಅಪ್ಪ. ಇನ್ನು ಅಣ್ಣನ ಮಗಳನ್ನು ಸೊಸೆ ಮಾಡಿಕೊಳ್ಳುವ ಆಸೆಯಿದ್ದರೂ ಮಗನ ವರ್ತನೆಯಿಂದ ಅಣ್ಣನ ಮಾತಿಗೆ ತಲೆದೂಗುವ ತಂಗಿ.
ಇದರ ನಡುವೆ ಆಶಾ ಗೆ ನವೀನನ ಕಂಡರೆ ಇಷ್ಟ. ಊರು ಬಿಟ್ಟು ಹೋಗಲು ನಿರ್ಧರಿಸುವ ಈ ಜೋಡಿಗೆ ಗೆಳೆಯರ ಬೆಂಬಲ ಸಿಗುತ್ತೆ. ಆದರೆ ವಿಧಿ ಆಟ ಇವರಿಬ್ಬರನ್ನು ದೂರ ಮಾಡುತ್ತೆ. ಮುಂದೆ ಹೊಸ ಜೀವನ , ದುಡಿಮೆ ಕಾಣುವ ನವೀನನ ಬದುಕಿನಲ್ಲಿ ಮತ್ತೆ ಆಶಾ ಪ್ರವೇಶ ಆಗುತ್ತಾಳೆ. ಮತ್ತೆ ಒಂದಷ್ಟು ಮಾತುಕತೆ , ವಿಶ್ವಾಸ , ಪ್ರೀತಿ ಬೆಳೆಯುವ ಹಂತದಲ್ಲಿ ಇಷ್ಟೇ ಜೀವನವೆಲ್ಲ ಮುಂದೆಯೂ ಬೇರೆ ಬದುಕು ಇದೆ ಎಂಬ ಸಂದೇಶವನ್ನು ಹೇಳುವ ದಾರಿ ತೋರಿತ್ತದೆ. ಏನಿದು ಆ ಸಂದೇಶ… ನವೀನನ ಬದುಕು ಏನಾಗುತ್ತೆ… ಆಶಾ ಪ್ರೀತಿ ಪಡೆಯುತ್ತಾಳ… ಊರ ದಾರಿ ಸಿಗುತ್ತಾ… ಇಲ್ವಾ… ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಎಲ್ಲರೂ ಲೋ ನವೀನ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಶೇಷವಾಗಿದೆ. ಪ್ರಸ್ತುತ ಹಳ್ಳಿ ಬದುಕಿನ ಜೀವನ , ನಡೆ-ನುಡಿ , ತುಂಟಾಟ , ಪ್ರೀತಿ , ಸಂಬಂಧಗಳ ಮೌಲ್ಯದ ಜೊತೆ ಮನಮುಟ್ಟುವಂತೆ ಸಂದೇಶವನ್ನ ಹೇಳಿದ್ದು , ಮೊದಲ ಭಾಗ ಮನೋರಂಜನೆಯ ಮಹಾಪೂರವನ್ನೇ ನೀಡಿದ್ದು , ದ್ವಿತೀಯ ಭಾಗ ಎಮೋಷನ್ ಜೊತೆ ಸಾಗಿದ್ದು , ಚಿತ್ರಕಥೆಯಲ್ಲಿ ಇನ್ನಷ್ಟು ಕಡಿತ ಮಾಡಬಹುದಿತ್ತು ಅನಿಸುತ್ತದೆ. ಭಾಷೆಯ ಸೊಗಡಿನ ಗತ್ತು ಸೆಳೆಯುತ್ತದೆ. ಒಟ್ನಲ್ಲಿ ಒಂದು ಉತ್ತಮ ಚಿತ್ರ ಎನ್ನುವಂತಿದೆ.

ನಿರ್ಮಾಪಕರು ಒಂದು ಉತ್ತಮ ಚಿತ್ರವನ್ನು ನೀಡಿದ್ದಾರೆ. ಸಂಗೀತ , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಾಯಕನಾಗಿ ನವೀನ್ ಸಜ್ಜು ಪಾತ್ರದಲ್ಲಿ ಜೀವಿಸಿದ್ದು , ಉತ್ತಮವಾಗಿ ಅಭಿನಯಿಸಿದ್ದಾರೆ. ನಟಿ ಆಶಾ ಕೂಡ ಮುದ್ದು ಮುದ್ದಾಗಿ ಕಾಣುತ್ತಾ , ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದು , ಮುಂದಿನ ದಿನಗಳಲ್ಲಿ ಉತ್ತಮ ನಟಿಯಾಗಿ ಹೊರಬರುವ ಸಾಧ್ಯತೆ ಇದೆ.
ವಧು ಹುಡುಕುವ ಪಾತ್ರಧಾರಿ ಕೂಡ ಅದ್ಭುತವಾಗಿ ನಟಿಸಿದ್ದು , ನಾಯಕನ ಗೆಳೆಯರಾಗಿ ಅಭಿನಯಿಸಿರುವ ತ್ರಿಮೂರ್ತಿಗಳ ಮಾತು , ವರ್ಚಸ್ಸು ಸೊಗಸಾಗಿ ಮೂಡಿಬಂದಿದೆ. ತಂದೆ , ತಾಯಿ , ಅತ್ತೆ , ಮಾವ ಸೇರಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಪೂರಕವಾಗಿದ್ದು , ಜನರನ್ನ ನಗಿಸುವುದರ ಜೊತೆಗೆ ಉತ್ತಮ ಚಿತ್ರವಾಗಿದ್ದು ಎಲ್ಲರೂ ಒಮ್ಮೆ ನೋಡುವಂತಿದೆ.