ಮಾರ್ಚ್ 27ರಂದು ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಬಿಡುಗಡೆ.
ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶರಣಪ್ಪ ಗೌರಮ್ಮ ಮೊದಲಬಾರಿಗೆ ನಿರ್ಮಾಣ ಮಾಡಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 27ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಜಾಲತಾಣದಲ್ಲಿ ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ರಷ್ಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೆಡಲ್ ಪಡೆದಿರುವ ಶರಣಪ್ಪ ಅವರು ವೃತ್ತಿಯಲ್ಲಿ ವಕೀಲರು. ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಿದ್ದಾರೆ.
ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ‘ಮಗಳಿಗಾಗಿ ಈ ಸಿನಿಮಾ ಮಾಡಿದ್ದು ಕಥೆ ಚನ್ನಾಗಿ ಇತ್ತು. ಹಾಗಾಗಿ ನಿರ್ಮಾಣ ಮಾಡಿದೆ. 10 ದಿನ ಶೂಟಿಂಗ್ ಬಾಕಿ ಇರುವಾಗ ಚಿತ್ರದಲ್ಲಿ ನಟಿಸಿರುವ ರಾಕಿ ಎಂಬ ನಾಯಿ ಆಕಸ್ಮಿಕವಾಗಿ ನಡೆದ ಆಕ್ಸಿಡೆಂಟ್ ನಲ್ಲಿ ನಿಧನವಾಯಿತು. ಚಿಕ್ಕವನಾಗಿದ್ದ ರಾಣಾ ನಾಯಿ ದೊಡ್ಡದು ಆಗುವವರೆಗೂ ಕಾದು ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ದೆವು ಹಾಗಾಗಿ ಸಿನಿಮಾ ಲೇಟ್ ಆಗಿದೆ. ನಾಯಿ ಪ್ರೇಮಿಗಳಿಗೆ ಈ ಸಿನಿಮಾ ತುಂಬಾ ಇಷ್ಟ ಆಗುತ್ತದೆ. ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಫ್ಯಾಮಿಲಿ ಕಥೆಯ ಸಿನಿಮಾವಿದು. ಮುಂದಿನ ದಿನಗಳಲ್ಲಿ ಕಿಕ್ ಬಾಕ್ಸಿಂಗ್ ಕುರಿತಾದ ಸಿನಿಮಾ ಮಾಡುವ ಪ್ಲ್ಯಾನ್ ಇದ್ದು, ಹೊಸಬರಿಗೆ ಸಿನಿಮಾ ಮಾಡಲು ರೆಡಿಯಾಗಿದ್ದೇನೆ. ಈಗಾಗಲೇ ಇನ್ನೆರಡು ಸಿನಿಮಾಗಳ ಕೆಲಸ ಮುಗಿದಿದ್ದು ಸದ್ಯದಲ್ಲೇ ಆಪ್ ಡೇಟ್ ಕೊಡುತ್ತೇನೆ’ ಎಂದು ಹೇಳಿದರು.
ನಂತರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ವಿಶ್ವಾಸ್ ಕೃಷ್ಣ ಮಾತನಾಡಿ, ‘ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಇದರಲ್ಲಿ ಸುಂದರ ಕಥೆ ಎಮೋಷನಲ್ ಜರ್ನಿ ಇದೆ. ಪೆಟ್ ಲವ್ವರ್ ಗೆ ತುಂಬಾ ಇಷ್ಟ ಆಗುತ್ತದೆ. ಫ್ಯಾಮಿಲಿ ಸಮೇತ ನೋಡಬೇಕಾದ ಸಿನಿಮಾ’ ಎಂದರು. ಚಿತ್ರದ ಮುಖ್ಯ ಪಾತ್ರದಲ್ಲಿ ನಿರ್ಮಾಪಕರ ಮಗಳು ಕುಮಾರಿ ಪ್ರಕೃತಿ ಅಭಿನಯಿಸಿದ್ದಾರೆ. ಇವರು ಕೂಡ ಕಿಕ್ ಬಾಕ್ಸಿಂಗ್ ನಲ್ಲಿ ಎರಡು ಇಂಟರ್ ನ್ಯಾಷನಲ್ ಪದಕ ಪಡೆದಿದ್ದಾರೆ. ಇನ್ನು ಬಾಲಕಿಯ ತಂದೆಯಾಗಿ ಮಾಧವ, ತಾಯಿಯಾಗಿ ಸ್ವಪ್ನ ಶೆಟ್ಟಿಗಾರ ಬಣ್ಣ ಹಚ್ಚಿದ್ದಾರೆ. ಪಟೇಲ್ ವರುಣ್ ರಾಜ್ ಅವರು ಸಹ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅನಿಲ ಸಿ.ಜೆ ಸಂಗೀತ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಾಣಾ ಹಾಗೂ ರಾಕಿ ಎಂಬ ನಾಯಿಗಳು ಅಭಿನಯ ಮಾಡಿದ್ದು, ರಾಣಾ ಟ್ರೇಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.