ಹೃದಯಸ್ಪರ್ಶಿ…ಭಾವನಾತ್ಮಕ ಸೆಳೆತ “ಲವ್ ಮಾಕ್ಟೇಲ್ 3” (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಲವ್ ಮಾಕ್ಟೇಲ್ 3
ನಿರ್ದೇಶಕ : ಡಾರ್ಲಿಂಗ್ ಕೃಷ್ಣ
ನಿರ್ಮಾಪಕಿ : ಮಿಲನಾ ನಾಗರಾಜ್
ಸಂಗೀತ : ನಕುಲ್ ಅಭಯಂಕರ್
ಛಾಯಾಗ್ರಹಣ : ಶ್ರೀ ಕ್ರೇಜಿ ಮೈಂಡ್ಸ್
ತಾರಾಗಣ. : ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಹಾಗೂ ಮುಂತಾದವರು…
ಪ್ರೀತಿ , ವಾತಲ್ಯ , ಸ್ನೇಹ , ಸಂಬಂಧಗಳ ಬೆಸುಗೆಗಳು ಎಂದಿಗೂ ಅಳಿಸಲಾಗದು , ಆದರೆ ಸಮಯ , ಸಂದರ್ಭಗಳ ನಡುವೆ ಮನಸ್ಸಿನ ತಳಮಳ , ಭಾವನೆಗಳ ಒದ್ದಾಟ , ಸಂಘರ್ಷಗಳ ಸುಳಿ, ಅಪ್ಪ ಮಗಳ ಭಾಂದವ್ಯ , ತರ್ಲೆ, ತುಂಟಾಟ , ಕರಳು ಬಳ್ಳಿಯ ಸೆಳೆತದ ನಡುವೆ ಕುತೂಹಲಕಾರಿಯಾಗಿ ಕೋರ್ಟ್ ಅಂಗಳದಲ್ಲಿ ಎದುರಾಗುವ ಮನಮುಟ್ಟುವ ತೀರ್ಪಿನ ಭಾವನಾತ್ಮಕದ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಲವ್ ಮಾಕ್ಟೇಲ್ 3”. ಈ ಹಿಂದೆ ಬಂದಂತಹ ಲವ್ ಮಾಕ್ಟೇಲ್ ಭಾಗ ಒಂದು , ಎರಡು ನಂತರ ಒಗ್ಗೂಡಿಕೊಳ್ಳುವ ಗೆಳೆಯರ ನಡುವೆ ತೆರೆದುಕೊಳ್ಳುವ ಈ ಕಥಾನಕದಲ್ಲಿ ಆದಿ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ (ಮಿಲನ ನಾಗರಾಜ್)ಯ ಅಗಾಧವಾದ ಒಡನಾಟ , ಪ್ರೀತಿ , ಸೆಳೆತ ವಿಧಿಯ ಆಟಕ್ಕೆ ದೂರವಾಗುವ ನಿಧಿ. ಆ ನೋವಿನಿಂದ ದೂರವಾಗಲು ಆದಿ ಯ ಬದುಕಿಗೆ ಬರುವ ಪುಟ್ಟ ಮಗು ನಿಧಿ ( ಸಂವೃತ). ಅನಾಥಾಶ್ರಮದಿಂದ ಕರೆ ತಂದಂತಹ ಮಗುವನ್ನು ಸಾಕಿ , ಬೆಳೆಸುವ ಆದಿಗೆ ನಿಧಿಯೇ ಸರ್ವಸ್ವ , ಜೀವನ.
ಇನ್ನು ನಿಧಿಯ ತುಂಟಾಟ , ತರ್ಲೆ ಬಗ್ಗೆ ಆದಿಗೆ ಕಂಪ್ಲೇಂಟ್ ಮಾಡುವ ಶಾಲೆಯ ಪ್ರಿನ್ಸಿಪಲ್, ಇನ್ನು ಅವಳ ಬುದ್ಧಿವಂತಿಕೆ ಮೆಚ್ಚುವ ಟೀಚರ್ (ರಜನಿ ಭಾರದ್ವಾಜ್), ಮನೆಯಲ್ಲಿ ತಾಯಿಯಂತೆ ನೋಡಿಕೊಳ್ಳುವ ಜಗ್ಗ ಮಮ್ಮಿ (ಜಗದೀಶ) , ಪ್ರೀತಿಯಿಂದ ಮಾತನಾಡಿಸುವ ವಿಜುಮಾಮ (ಅಭಿಲಾಶ್), ಬೇಜಾರಾದಾಗ ಅಮ್ಮನ ಫೋಟೋ ಮುಂದೆ ಮಾತನಾಡುವ ನಿಧಿಗೆ ತನ್ನ ಅಪ್ಪನೇ ದೇವರು. ಇದರ ನಡುವೆ ಎದುರಾಗುವ ಡಾಕ್ಟರ್ ಶಾಂತ ಆದಿಗೆ ನಿಧಿ ಎಂದು ಸಾಕುತ್ತಿರುವ ಈ ಪುಟಾಣಿಯ ಹೆಸರು ರಮ್ಯಾ ಇವಳು ನಮ್ಮ ಮಗು ಎಂಬ ಸತ್ಯ ಹೇಳುತ್ತಾಳೆ.
ಮುಂದೆ ಎದುರಾಗುವ ಘಟನೆಗಳು ಕೋರ್ಟ್ ಅಂಗಳಕ್ಕೆ ಹೋಗುತ್ತದೆ. ಅಲ್ಲಿ ನಡೆಯುವ ವಾದ ವಿವಾದ ಎಲ್ಲವೂ ಮನಮುಟ್ಟುವ ಸಂದರ್ಭಕ್ಕೆ ಸಾಕ್ಷಿಯಾಗುತ್ತದೆ.ನಿಧಿ ಯಾರು… ತಂದೆ ತಾಯಿ ಎಲ್ಲಿ… ಆದಿ ಗೆ ಮಗು ಸಿಕ್ಕಿದ್ದು ಹೇಗೆ… ಕೋರ್ಟ್ ತೀರ್ಪು ಏನು… ಕರುಳು ಬಳ್ಳಿನಾ… ಸಾಕಿದ ಪ್ರೀತಿನಾ… ಹೀಗೆ ಒಂದಷ್ಟು ವಿಚಾರಕ್ಕೆ ಬಹಳ ಅರ್ಥಪೂರ್ಣವಾಗಿ ಉತ್ತರ ನೀಡಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು.
ನಿರ್ದೇಶಕನಾಗಿ ನಟ ಡಾರ್ಲಿಂಗ್ ಕೃಷ್ಣ ಚಿತ್ರಕಥೆಯನ್ನು ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಮಕ್ಕಳ ಮನಸ್ಥಿತಿ , ತಂದೆ ತಾಯಿಗಳ ಜವಾಬ್ದಾರಿ , ಸರಿ ತಪ್ಪುಗಳ ನಿಲುವು, ವಾಸ್ತವತೆಯ ಜೊತೆಗೆ ಕೋರ್ಟ್ ಅಂಗಳದ ವಾದ ವಾದಗಳನ್ನು ಸಮರ್ಥವಾಗಿ ಕಟ್ಟಿಕೊಡುವುದರ ಜೊತೆಗೆ ಗಮನ ಸೆಳೆಯುವಂತ ಅಂಶವನ್ನು ಪ್ರೇಕ್ಷಕರ ಮುಂದೆ ತಂದು ಗೆದ್ದಿದ್ದಾರೆ.
ಮೊದಲ ಭಾಗದಲ್ಲಿ ಇನ್ನಷ್ಟು ಕಡಿತಗೊಳಿಸಿದರೆ ಚೆನ್ನಾಗಿರೋದು , ಕೋರ್ಟ್ ಭಾಗದ ಪಯಣ ಅದ್ಭುತವಾಗಿದೆ. ಒಬ್ಬ ತಂದೆಯ ಪಾತ್ರದಲ್ಲಿ ಬಹಳ ನ್ಯಾಚುರಲ್ ಆಗಿ ಜೀವಿಸಿದ್ದಾರೆ. ನಿರ್ಮಾಪಕಿಯಾಗಿ ಮಿಲನ ನಾಗರಾಜ್ ಚಿತ್ರಕ್ಕೆ ಏನು ಬೇಕು ಅದನ್ನು ಅಚ್ಚುಕಟ್ಟಾಗಿ ಒದಗಿಸಿರುವುದು ತೆರೆಯ ಮೇಲೆ ಕಾಣುತ್ತದೆ.

ಶ್ರೀ ಕ್ರೇಜಿ ಮೈಂಡ್ ಕ್ಯಾಮೆರಾ ಕೈಚಳಕ ಹಾಗೂ ಸಂಕಲನ ಉತ್ತಮವಾಗಿದ್ದು , ಇನ್ನು ಅಷ್ಟೇ ಉತ್ತಮವಾದ ಸಾಹಿತ್ಯಕ್ಕೆ ನಕುಲ್ ಅಭ್ಯಯಂಕರ್ ಸಂಗೀತ ಸೊಗಸಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮಪಟ್ಟು ಕೆಲಸವನ್ನು ಮಾಡಿದೆ. ಇನ್ನು ಪುಟಾಣಿ ಸಂವೃತ ಕೂಡ ಬಹಳ ಮುದ್ದು ಮುದ್ದಾಗಿ ಪಾತ್ರವನ್ನು ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ಇನ್ನು ಚಿತ್ರದ ಹೈಲೈಟ್ ಎಂದರೆ ಜಗ್ಗ ಮಮ್ಮಿ ಪಾತ್ರ ಮಾಡಿರುವ ಜಗದೀಶನ ನೇರ ಮಾತಿನ ವರಸೆ ನಗುವಿನ ಜೊತೆ ಮನ ಮುಟ್ಟುವಂತಿದೆ.
ಲಾಯರ್ ಪಾತ್ರಗಳನ್ನು ದಿಲೀಪ್ ರಾಜ್ ಹಾಗೂ ಶ್ವೇತಾ ಪ್ರಸಾದ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ನ್ಯಾಯಾಧೀಶರ ಪಾತ್ರದಲ್ಲಿ ಗಿರಿರಾಜ್ ಕೂಡ ಅಷ್ಟೇ ಸಮರ್ಥವಾಗಿ ಪಾತ್ರಕ್ಕೆ ಜೀವ ತುಂಬಿದ್ದು , ಒಂದು ಕೋರ್ಟ್ ಸನ್ನಿವೇಶ ಎಷ್ಟು ಅಚ್ಚುಕಟ್ಟಾಗಿ , ಘನತೆ ಪೂರ್ವವಾಗಿ ಚಿತ್ರೀಕರಿಸಬೇಕೆಂಬುದನ್ನ ತೋರಿಸಿದ್ದು , ಕೆಲವು ಬೇರೆ ಚಿತ್ರಗಳಿಗೆ ಇದೊಂದು ಉತ್ತಮ ನಿರ್ದೇಶನವಾಗಿದೆ.
ಇನ್ನು ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದು , ಭಾವನಾತ್ಮಕ ವಿಚಾರದ ಜೊತೆಗೆ ಬಹಳಷ್ಟು ಸೂಕ್ಷ್ಮವಾದ ಅಂಶಗಳನ್ನು ಹೇಳಿರುವ ಈ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಸಮೇತ ನೋಡಬಹುದಾಗಿದೆ.