ಪ್ರೀತಿ… ಪಡ್ಕೊಳೋದಾ… ಕಳ್ಕೊಳೋದಾ…”ಕಲ್ಟ್” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಕಲ್ಟ್
ನಿರ್ದೇಶಕ ಅನಿಲ್ ಕುಮಾರ್
ನಿರ್ಮಾಪಕ : ಲೋಕಿ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ವಾಲಿ
ತಾರಾಗಣ : ಝೈದ್ ಖಾನ್, ಮಲೈಕಾ , ರಚಿತರಾಮ್ , ಅಲೋಕ್, ಕಿಶನ್, ರಂಗಾಯಣ ರಘು, ಅಚ್ಚುತ್ ಕುಮಾರ್ ಹಾಗೂ ಮುಂತಾದವರು…
ಜೀವನದಲ್ಲಿ ಸಮಯ , ಸಂದರ್ಭ ಬದುಕಿನ ಶೈಲಿಯನ್ನೇ ಬದಲಿಸುತ್ತಾ ಹೋಗುತ್ತದೆ. ಆದರೆ ಎಲ್ಲದಕ್ಕೂ ಒಂದೊಂದು ಕಾರಣ ಇದ್ದೇ ಇರುತ್ತದೆ. ಇವತ್ತಿನ ಟ್ರೆಂಡಿಗೆ ತಕ್ಕಂತೆ ಬದಲಾಗುತ್ತಿರುವ ಯುವಜನತೆಯ ಲೈಫ್ ಸ್ಟೈಲ್ , ಡ್ರೆಸ್ ಕೋಡ್ , ಮೋಜು , ಮಸ್ತಿ ಹೀಗೆ ಒಂದಷ್ಟು ಬದಲಾವಣೆ ರೂಪ ಪಡೆದರೆ , ಮತ್ತೊಂದೆಡೆ ಮುಗ್ಧ ಬದುಕಿನ ಜೀವನ , ಪ್ರೀತಿ , ನಂಬಿಕೆ , ಮೋಸದ ಸುಳಿಯ ಸುತ್ತ ಪ್ರೀತಿ ಹೇಗೆಲ್ಲಾ ಪರಿತಪಿಸುತ್ತದೆ ಎಂಬ ಸೂಕ್ಷ್ಮತೆಯನ್ನು ಯುವಕನೊಬ್ಬನ ಬದುಕಲ್ಲಿ ಇಬ್ಬರು ಯುವತಿಯರ ಸಂಚಲನವಾದಾಗ ಏನೆಲ್ಲಾ ಆಗುತ್ತೆ ಎಂಬುದನ್ನು ಹೇಳುವ ಪರಿಯಾಗಿ ಪ್ರೀತಿ ಪಡ್ಕೊಳೋದಾ… ಕಳ್ಕೊಳೋದಾ… ಎಂದಿದೆ “ಕಲ್ಟ್ ಸಿನಿಮಾ.
ಪ್ರೀತಿಯೇ ಮೋಸ , ನಂಬಬೇಡಿ ಎನ್ನುತ್ತಾ ಸದಾ ಗುಂಡಿನ ನಶೆಯಲ್ಲಿ ತೇಲಾಡುವ ಯುವಕ ಮ್ಯಾಡಿ ಅಲಿಯಾಸ್ ಮಾಧವ (ಝೈದ್ ಖಾನ್). ಡ್ಯಾನ್ಸ್ , ಪಾರ್ಟಿ ಇವೆಂಟ್ಗಳಲ್ಲಿ ಡಿಜೆ ಆಗಿರುವ ಗೆಳೆಯ ಜಾಯ್(ಅಲೋಕ್) ಜೊತೆ ವಾಸ ಮಾಡುವ ಮ್ಯಾಡಿ. ಎಣ್ಣೆ ಪಾರ್ಟಿಯಲ್ಲಿ ಟೈಟಾಗಿದ್ದ ಇತಿ (ರಚಿತಾ ರಾಮ್)ಯನ್ನ ಕಾಪಾಡಿ ಮನೆಗೆ ಕರೆದೊಯ್ಯುವ ಗೆಳೆಯರು, ನಂತರ ಮ್ಯಾಡಿಯ ಹಿನ್ನೆಲೆ ಕೇಳಲು ಮುಂದಾದಾಗ , ಕೃಷ್ಣಾಪುರದಲ್ಲಿ ಕಾಲೇಜಿನ ಟಾಪರ್ ಆಗಿದ್ದ ಮಾಧವ ತನ್ನ ಉಸಿರಂತಿರುವ ಗೆಳತಿ ಗೀತಾ (ಮಲೈಕಾ)ಳನ್ನ ಒಂದು ಕ್ಷಣವೂ ಬಿಟ್ಟಿರದಂತಹ ಪ್ರೀತಿ. ಆಕೆಗೆ ಯಾರಿಂದಲೂ ತೊಂದರೆ ಬಾರದಂತೆ ಕಾಪಾಡಿಕೊಳ್ಳುವ ಮಾಧವ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗುವಂತ ಸ್ಥಿತಿ ಎದುರಾಗುತ್ತದೆ.
ತಂದೆ ತಾಯಿಗಿಂತ ತನ್ನ ಗೆಳತಿಯೇ ತನ್ನ ಬದುಕು ಎಂದುಕೊಳ್ಳುವ ಮಾದವನಿಗೆ ಗೀತಾ ನೀಡುವ ಭರವಸೆಯ ಮುಂದೊಂದು ದಿನ ಲಾಯಲ್ ಗಿಂತ ರಾಯಲ್ , ಐಷಾರಾಮಿ ಜೀವನವೇ ಮುಖ್ಯ ಎನ್ನುವ ಗೀತಾಳ ವರ್ತನೆ ಮಾಧವನ ಧಿಕ್ಕನ್ನೇ ಬದಲಿಸಿ , ಕುಡುತಕ್ಕೆ ದಾಸನಾಗುವಂತೆ ಮಾಡುತ್ತದೆ.
ಇನ್ನು ತಾಯಿ ಇಲ್ಲದೆ , ಹಂಪಿಯಲ್ಲಿ ಪ್ರವಾಸಿಗರಿಗೆ ಗೈಡ್ ಆಗಿರುವ ತಂದೆ (ರಂಗಾಯಣ ರಘು) ಆಸರೆಯಲ್ಲೇ ಬೆಳೆಯುವ ಇತಿಹಾಸಿನಿ (ರಚಿತಾ ರಾಮ್) ಅಪ್ಪನಿಗೆ ಮುದ್ದಾದ ಯುವರಾಣಿ. ಜೀವನದಲ್ಲಿ ಹೇಗೆಲ್ಲಾ ಬದುಕಬೇಕೆಂದು ಆಸೆ ಪಡುವ ಇತಿ ಗೆ ವಿಧಿಯ ಆಟದಲ್ಲಿ ಘೋರ ಅನ್ಯಾಯವಾಗಿ ಎಲ್ಲವನ್ನು ಕಳೆದುಕೊಂಡು ಅನಾಥಳಾಗುವ ಸ್ಥಿತಿ ಎದುರಾಗಿ , ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಎಂದು ಅರಿಯುವ ಇತಿ ಕುಡಿತಕ್ಕೆ ದಾಸಲಾಗುತ್ತಾಳೆ.
ಇದರ ನಡುವೆಯೇ ಮ್ಯಾಡಿ ಅಲಿಯಾಸ್ ಮಾಧವನ ಬದುಕು ಈ ಇಬ್ಬರು ಹುಡುಗಿಯರ ಪ್ರವೇಶದಿಂದ ಅತಂತ್ರದ ಸ್ಥಿತಿಯಲ್ಲಿ ನರಲಾಡುತ್ತಿರುತ್ತದೆ. ಮುಂದೆ ಎದುರಾಗುವ ಸಮಸ್ಯೆ ಏನು..
ಮಾದವನಿಗೆ ಗೀತಾ ಸಿಕ್ತಾಳ…
ಮ್ಯಾಡಿ ಮತ್ತು ಇತಿ ಒಂದಾಗ್ತಾರ…
ಯಾರು ಇಲ್ಲದೆ ಕುಡಿತಕ್ಕೆ ದಾಸನಾಗುತ್ತಾನೆ…
ಇಲ್ಲ ಬದುಕಿನ ಅರಿವು ಆಗುತ್ತಾ… ಎಂಬ ಬಹಳಷ್ಟು ಪ್ರಶ್ನೆಗೆ ಉತ್ತರ ನೀವು ಈ ಚಿತ್ರವನ್ನು ನೋಡಬೇಕು.
ಈ ಕಥಾವಸ್ತು ಇವತ್ತಿನ ಯುವ ಪೀಳಿಗೆಗೆ ಪೂರ್ವಕವಾಗಿ ಬಂದಿರುವಂತಹ ಚಿತ್ರವಾಗಿದ್ದು , ನಿರ್ದೇಶಕರು ಬಹಳ ಸೂಕ್ಷ್ಮವಾಗಿ ಎರಡು ದೃಷ್ಟಿಕೋನದಿಂದಲೂ ಪ್ರೀತಿಯ ಶಕ್ತಿಯ ಜೊತೆ ಮೋಜು , ಮಸ್ತಿ , ಆಸೆ , ಪ್ರೀತಿ, ಸಂಬಂಧಗಳ ಮೌಲ್ಯ , ನಂಬಿಕೆ, ಜೀವನದ ದಿಕ್ಕಿನ ಸೂಕ್ಷ್ಮತೆಯನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಕೆಲವು ಸನ್ನಿವೇಶಗಳು ಇದ್ದಲ್ಲೇ ತಿರುಗಿದಂತಿದೆ.ನಿರ್ಮಾಪಕರ ಖರ್ಚು ವೆಚ್ಚ ತೆರೆಯ ಮೇಲೆ ಕಾಣುತ್ತದೆ.

ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದ್ದು , ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕೂಡ ಸೊಗಸಾಗಿ ಮೂಡಿಬಂದಿದೆ. ಸಂಕಲನ , ಸಾಹಸ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಗಮನ ಸೆಳೆಯುತ್ತದೆ. ನಾಯಕನಾಗಿ ಝೈದ್ ಖಾನ್ ಎರಡು ಶೇಡ್ ಗಳಲ್ಲಿ ಅಭಿನಯಿಸಲು ಬಹಳ ಶ್ರಮಪಟ್ಟಿರೋದು ಕಾಣುತ್ತದೆ. ಅದೇ ರೀತಿ ನಟಿ ಮಲೈಕಾ ತೆರೆಯ ಮೇಲೆ ಸೌಮ್ಯ ಸ್ವಭಾವದ ಮುದ್ದಾದ ಹುಡುಗಿಯಾಗಿ ಕಾಣುವುದರ ಜೊತೆಗೆ ಮಾಡ್ರನ್ ಲೈಫುಗೂ ಜೈ ಎಂದು ಎರಡು ಶೇಡ್ ಗಳಲ್ಲಿ ಗಮನ ಸೆಳೆದಿದ್ದಾರೆ.
ಇನ್ನು ವಿಶೇಷವಾಗಿ ನಟಿ ರಚಿತರಾಮ್ ತಮ್ಮ ಪಾತ್ರದಲ್ಲಿ ಜೀವಿಸಿದ್ದು , ಅದ್ಭುತವಾಗಿ ನಟಿಸಿದ್ದಾರೆ. ಇತಿಹಾಸಿನಿಯಾಗಿ ಮನ ಮುಟ್ಟುವ ರೀತಿಯಲ್ಲಿ ಅಭಿನಯಿಸುವುದರ ಜೊತೆಗೆ ನಡೆ-ನುಡಿ , ಬೋಲ್ಡ್ ಲುಕ್ ನಲ್ಲಿ ಮಿಂಚಿದ್ದಾರೆ. ತಂದೆಯ ಪಾತ್ರದಲ್ಲಿ ಹಿರಿಯ ನಟ ರಂಗಾಯಣ ರಘು ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ನಟ ಅಚ್ಚುತ್ ಕುಮಾರ್ ರವರ ಅರ್ಥಪೂರ್ಣ ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. ನಾಯಕನ ಗೆಳೆಯನಾಗಿ ಆಲ್ ಓಕೆ ಪಾತ್ರವು ಉತ್ತಮವಾಗಿ ಸಾಗಿದ್ದು , ಕಿಶನ್ ಸೇರಿದಂತೆ ಎಲ್ಲಾ ಕಲಾವಿದರು ಕೂಡ ಚಿತ್ರದ ಓಟಕ್ಕೆ ಪೂರಕವಾದ ಸಾಥ್ ನೀಡಿದ್ದಾರೆ. ಈಗಿನ ಯುವಜನತೆಗೆ ಇಷ್ಟವಾಗುವ ಈ ಚಿತ್ರ ಒಮ್ಮೆ ನೋಡುವಂತಿದೆ.