ಸುನಯನ ಸಾರಥ್ಯದ “ಮೌನ ರಾಗ” ಕಿರುಚಿತ್ರಕ್ಕೆ ಸೆಲೆಬ್ರಿಟಿಗಳ ಸಾಥ್
ಪತ್ರಕರ್ತೆ ಹಾಗೂ ವಿಮರ್ಶಕಿ ಸುನಯನ ಸುರೇಶ್ ಈಗ ನಿರ್ದೇಶಕಿಯಾಗಿದ್ದಾರೆ. ಇಪ್ಪತ್ತು ನಿಮಿಷಗಳ “ಮೌನ ರಾಗ” ಎಂಬ ಕಿರುಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಈ ಕಿರುಚಿತ್ರ ಪ್ರಶಸ್ತಿಯ ಜೊತೆಗೆ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇತ್ತೀಚೆಗೆ ಈ ಕಿರುಚಿತ್ರದ ವಿಶೇಷ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಿತು. ಅಶ್ವಿನಿ ಪುನೀತ್ ರಾಜಕುಮಾರ್, ಪ್ರಿಯಾಂಕಾ ಉಪೇಂದ್ರ, ಕೆ.ಎಂ.ಚೈತನ್ಯ, ಪನ್ನಗಾಭರಣ, ಭಾವನಾ ರಾವ್, ಮೇಘನಾ ಗಾಂವ್ಕರ್, ಮಾನ್ವಿತ ಕಾಮತ್, ಪ್ರವೀಣ್ ತೇಜ್, ಶುಭ್ರ ಅಯ್ಯಪ್ಪ, ರಕ್ಷ್, ಪ್ರಭು ಮುಂಡ್ಕರ್, ದಿಶಾ ಮದನ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರಿಟಿಗಳು “ಮೌನ ರಾಗ” ದ ವಿಶೇಷ ಪ್ರದರ್ಶನಕ್ಕೆ ಆಗಮಿಸಿ, ಸುನಯನ ಅವರ ಚೊಚ್ಚಲ ಪ್ರಯತ್ನಕ್ಕೆ ಮನಸ್ಸಾರೆ ಹಾರೈಸಿದರು. ನಂತರ ತಂಡದ ಸದಸ್ಯರು ಮಾತನಾಡಿದರು.
ಕಿರುಚಿತ್ರದಲ್ಲಿ ನಟಿಸಿರುವ ನಟಿ ಶ್ರುತಿ ಹರಿಹರನ್ ಮಾತನಾಡಿ, ಸುನಯನ ಅವರು ನನಗೆ ಬಹಳ ವರ್ಷಗಳ ಪರಿಚಯ. ಈಗ ಅವರು ನಿರ್ದೇಶಕಿಯಾಗಿರುವುದು ಖುಷಿಯಾಗಿದೆ. ಹೆಣ್ಣು ಮಕ್ಕಳ ದಿನನಿತ್ಯದ ಬವಣೆಗಳನ್ನು ಸುನಯನ ಇಪ್ಪತ್ತು ನಿಮಿಷಗಳಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ. ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಿರುಚಿತ್ರ ಸೂಕ್ತ ವೇದಿಕೆ. ಆ ಕೆಲಸವನ್ನು ಸುನಯನ ಅಚ್ಚುಕಟ್ಟಾಗಿ ಮಾಡಿದ್ದಾರೆ. ತಾಯಿ – ಮಗನ ಸೆಂಟಿಮೆಂಟ್ ಸನ್ನಿವೇಶಗಳು ಕೂಡ ಮನಸ್ಸಿಗೆ ಹತ್ತಿರವಾಗುತ್ತದೆ ಎಂದರು.
“ಮೌನ ರಾಗ” ನನ್ನ ಮೊದಲ ನಿರ್ದೇಶನದ ಕಿರುಚಿತ್ರ. ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಈಗಾಗಲೇ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯದಲ್ಲೇ ಓಟಿಟಿಯೊಂದರಲ್ಲಿ ಈ ಕಿರುಚಿತ್ರ ಬಿಡುಗಡೆಯಾಗಲಿದೆ. ಪ್ರೀತಾ ಜಯರಾಮ್ ಛಾಯಾಗ್ರಹಣ, ಅಲೋಕ್ ಸಂಗೀತ ನಿರ್ದೇಶನವಿರುವ “ಮೌನ ರಾಗ” ಚಿತ್ರೀಕರಣ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದಿದೆ. ಶೃತಿ ಹರಿಹರನ್, ಅಗ್ನಿವ್, ಸೂರಜ್ ಗೌಡ, ಹರ್ಷಿಲ್ ಕೌಶಿಕ್, ಸಂಯುಕ್ತ ಹೊರನಾಡ್, ಅನಿರುದ್ಧ್ ಆಚಾರ್ಯ, ರಾಜಶ್ರೀ ಪೊನ್ನಪ್ಪ, ಸುವಿಶ್, ಐಶ್ವರ್ಯ ಕೌಶಿಕ್, ALL OK, ರಿಷಬ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಆದಿತ್ಯ ಗುಣವಂತೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಹಾಗೂ ಅಶ್ವಿನಿ ರಮೇಶ್ ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ಡಾಕ್ಯುಮೆಂಟರಿ ಹಾಗೂ ಚಲನಚಿತ್ರವನ್ನು ನಿರ್ದೇಶಿಸುವ ಇರಾದೆ ಇದೆ. ಸದ್ಯದಲ್ಲೇ ಅದರ ಬಗ್ಗೆ ಮಾಹಿತಿ ನೀಡುತ್ತೇನೆ. ಇಂದಿನ ವಿಶೇಷ ಪ್ರದರ್ಶನಕ್ಕೆ ಬಂದು ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕಿ ಹಾಗೂ ನಿರ್ದೇಶಕಿ ಸುನಯನ ಸುರೇಶ್.
ಈ ಕಿರುಚಿತ್ರಕ್ಕೆ ನಾನು ಸಂಗೀತ ಸಂಯೋಜಿಸಿದ್ದೇನೆ. ಯೋಗರಾಜ್ ಭಟ್ ಅವರು ಹಾಡೊಂದನ್ನು “ಮೌನ ರಾಗ”ಕ್ಕೆ ಬರೆದಿದ್ದಾರೆ ಎಂದರು ಸಂಗೀತ ನಿರ್ದೆಶಕ ALL OK.
“ಮೌನ ರಾಗ” ಕಿರುಚಿತ್ರದ ತಂತ್ರಜ್ಞರು ಹಾಗೂ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
