ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ “ದಿ ರೈಸ್ ಆಫ್ ಅಶೋಕ” ಸಿನಿಮಾದ ಸಾಂಗ್ ಅನಾವರಣ
ಏಳೋ ಏಳೋ ಮಾದೇವ..ಇದು ಸತೀಶ್ ನೀನಾಸಂ ಶಿವ ಪರಾಕಾಷ್ಠೆ.ದಿ ರೈಸ್ ಆಫ್ ಅಶೋಕ ಸಿನಿಮಾದ ಮೊದಲ ಹಾಡು ರಿಲೀಸ್..ಮಾದೇವನ ಪರಾಕಾಷ್ಠೆಯಲ್ಲಿ ಸತೀಶ್ ನೀನಾಸಂ. ಅಭಿನಯ ಚತುರ ಸತೀಶ್ ನೀನಾಸಂ ಅವರ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿರುವ ಈ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ಮಾದೇವನ ಕುರಿತ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಸ್ವತಃ ಸತೀಶ್ ಏಳೋ ಏಳೋ ಮಹಾದೇವ ಗೀತೆ ಕ್ಯಾಚಿಮ್ಯಾಚಿ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ.
ಹಾಡು ಬಿಡುಗಡೆ ಬಳಿಕ ಭಾವುಕರಾಗಿಯೇ ಮಾತನಾಡಿದ ಸತೀಶ್ ನೀನಾಸಂ, ಅಯೋಗ್ಯ ಲೆಕ್ಕ ಅಲ್ಲಾ ನನಗೆ ಮನೇಲಿ ಮಲಗಿದ್ದರು ಜನ ಆ ಸಿನಿಮಾ ನೋಡ್ತಾರೆ. ಅಯೋಗ್ಯ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡೋ ಹುಚ್ಚ ಅಂತಾರೆ? ಒಂದು ಕೆಜಿಎಫ್, ಒಂದು ಕಾಂತಾರ ಮಾಡಬೇಕು ಅನ್ನೋ ಆಸೆ ನನಗಿದೆ. ಒಂದು ರೂಪಾಯಿ ನಾನು ಸೈನಿಂಗ್ ದುಡ್ಡು ತಗೊಂಡಿಲ್ಲ. ನಾಳೆ ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮಹತ್ಯೆ ಮಾಡ್ಕೊಂಡಿದ್ರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು. ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣಗೆ ಆಕ್ಸಿಡೆಂಟ್ ಆಗುತ್ತೆ. ಮೂರು ವರ್ಷ ರಾತ್ರಿ ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ. ನನ್ನ ಶತ್ರುಗಳು ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡು 6 ಸಿನಿಮಾ ಮಾಡಬೋದಿತ್ತು ಮೂರು ವರ್ಷದಲ್ಲಿ, ಆದ್ರೆ ಮಾಡ್ಲಿಲ್ಲ ಸರ್ವಸ್ವವು ನಮಗೆ ರೈಸ್ ಆಫ್ ಅಶೋಕ ಆಗಿತ್ತು ಎಂದಿದ್ದಾರೆ.
ನಟಿ ಸಪ್ತಮಿ ಗೌಡ ಮಾತನಾಡಿ, ಬಹಳ ಖುಷಿಯಾಗ್ತಿದೆ. ನಾನು ಸಿನಿಮಾ ತಂಡಕ್ಕೆ ಲಾಸ್ಟ್ ಆರ್ಟಿಸ್ಟ್ ಆಗಿ ಸೇರ್ಪಡೆಯಾಗಿದ್ದು. ನಾನು ಈ ಚಿತ್ರ ಭಾಗವಾಗಿದ್ದೇನೋ ಅಂದಿನಿಂದ ಇಂದಿನವರೆಗೂ ಯಾವುದೇ ಸಾಂಗ್, ಡೈಲಾಗ್ , ಸೀನ್, ಕಾಸ್ಟ್ಯೂಮ್ ಎಲ್ಲರ ಬಗ್ಗೆಯೂ ಚರ್ಚೆ ನಡೆಸುತ್ತಾರೆ. ನಮ್ಮ ಅಭಿಪ್ರಾಯ ಕೇಳುತ್ತಾರೆ. ಸತೀಶ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ. ಇಡೀ ತಂಡಕ್ಕೆ ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಎಲ್ಲರೂ ಅವರ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಕೇರ್ ಸಾಧ್ವಿನಿ ಕೊಪ್ಪ ಹಾಗೂ ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಮಾದೇವ ಗೀತೆಯ ತೂಕ ಹೆಚ್ಚಿಸಿದೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನ್ನು ವರ್ಣಿಸಿರುವ ಸತೀಶ್ ನೀನಾಸಂ, ಶಿವನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದ್ದಾರೆ.
ದಿ ರೈಸ್ ಆಫ್ ಅಶೋಕ 70ರ ದಶಕದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ದಿ ರೈಸ್ ಆಫ್ ಅಶೋಕ.
ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ. ಇದು ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಕೂಡ ಇದೆ.
ಬಹುಭಾಷೆಯಲ್ಲಿ ಚಿತ್ರ
ಸಿನಿಮಾ ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ದಿ ರೈಸ್ ಆಫ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ನಿರ್ವಹಿಸಿದ್ದರೆ, ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
