ಮಹಾಶಿವರಾತ್ರಿಗೆ ನಿಖಿಲ್ ಸಿದ್ದಾರ್ಥ್ ನಟನೆಯ ‘ಸ್ವಯಂಭು’ ರಿಲೀಸ್
ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಸ್ವಯಂಭು. ಟೈಟಲ್ ಹಾಗೂ ಮೇಕಿಂಗ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮಹಾಶಿವರಾತ್ರಿ ಅಂದರೆ 2026 ಫೆಬ್ರವರಿ 13ಕ್ಕೆ ವಿಶ್ವಾದ್ಯಂತ ಸ್ವಯಂಭು ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ.
ಸ್ಪೆಷಲ್ ವಿಡಿಯೋ ಮೂಲಕ ಚಿತ್ರತಂಡ ಶೂಟಿಂಗ್ ಮುಗಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಬರೋಬ್ಬರಿ ಎರಡು ವರ್ಷದ ಜರ್ನಿ ಇದಾಗಿದ್ದು, 170 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಅಂದಹಾಗೇ ಇದು ನಿಖಿಲ್ ಸಿದ್ದಾರ್ಥ್ ಅವರ 20ನೇ ಚಿತ್ರ.
ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭು ಎಂದರೆ ಸ್ವಯಂ ಹುಟ್ಟು ಎಂದರ್ಥ.
ಸಹಸ್ರಮಾನಗಳ ಹಿಂದಿನ ಕಥೆ ಒಳಗೊಂಡಿರುವ ಸ್ವಯಂಭು ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಕೆಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಿಜಯ್ ಕಾಮಿಸೆಟ್ಟಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ. ತಮ್ಮಿರಾಜು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಭರತ್ ಕೃಷ್ಣಮಾಚಾರಿ ಆಕ್ಷನ್ ಕಟ್ ಹೇಳಿರುವ ಸ್ವಯಂಭು ಸಿನಿಮಾದಲ್ಲಿ ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ನಭಾ ನಟೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.