ಮಧುರವಾದ ಕಂಠದಲ್ಲಿ ಅನಿತಾ ಸಾರಾ ಮಹೇಶ್ ಹಾಡಿದ “ಏನಾಗಿದೆ ನನಗೇನಾಗಿದೆ” ಆಲ್ಬಂ ಸಾಂಗ್ ರಿಲೀಸ್.
ಗಾಯನ ಸರಸ್ವತಿ ಒಮ್ಮೆ ಒಲಿದರೆ, ಅದು ಯಾವತ್ತೂ ಬಿಟ್ಟು ಹೋಗಲ್ಲ. ಎನ್ನುವುದಕ್ಕೆ ಶ್ರೀಮತಿ ಅನಿತಾ ಸಾರಾ ಮಹೇಶ್ ಅವರ ಪ್ರತಿಭೆಯೇ ಉದಾಹರಣೆ. ಅವರು ಸಂಸಾರ, ಮಕ್ಕಳಾದವು ಅಂತ ಮನೆಯಲ್ಲಿ ಕೂರದೆ ತಮ್ಮೊಳಗಿನ ಗಾಯನ ಕಲೆಯನ್ನು ಸಿನಿಮಾ, ಆಲ್ಬಂ ಹಾಡುಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ಇದಕ್ಕೆ ಪತಿ ಸಾರಾ. ಮಹೇಶ್ ಮತ್ತು ಮಕ್ಕಳ ಬೆಂಬಲವೂ ಸಿಕ್ಕಿದೆ. ಅದರ ಪ್ರತಿಫಲವಾಗಿ “ ಏನಾಗಿದೆ ನನಗೇನಾಗಿದೆ” ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಇದನ್ನು ಶ್ರೀಮತಿ ಅನಿತಾ ಸಾರಾ ಮಹೇಶ್ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಮೊಲೋಡಿ ಧ್ವನಿಗೆ ಕನ್ನಡದ ಮೂವರು ಹಿರಿಯ ಸಂಗೀತ ನಿರ್ದೇಶಕರು ಮೂಕ ವಿಸ್ಮಿತರಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶ್ರೇಯಾ ಘೋಷಾಲ್ ಕಂಠ ಸಿಕ್ಕಂತಾಗಿದೆ.

ಸಂಗೀತ ನಿರ್ದೇಶಕ ವಿ.ಮನೋಹರ್, ಸಾಧುಕೋಕಿಲ ಹಾಗು ಅಭಿಮಾನ್ ರಾಯ್ ಅವರು ಗಾಯಕಿ ಅನಿತಾ ಸಾರಾ ಮಹೇಶ್ ಅವರ ಪ್ರತಿಭೆಗೆ ಮಾರುಹೋಗಿದ್ದು, ಆ ಕಲೆಯನ್ನು ಇನ್ನೂ ದೊಡ್ಡಮಟ್ಟದಲ್ಲಿ ಪ್ರದರ್ಶಿಸಿ ಜೊತೆಗೆ ನಿಮಗಿರುವ ಸಂಪರ್ಕದಲ್ಲಿ ಆಡಿಯೋ ಕಂಪನಿಯನ್ನು ಆರಂಭಿಸಿ, ಆ ಮೂಲಕ ಅನೇಕ ಹೊಸ ನಿರ್ಮಾಪಕರು, ನಿರ್ದೆಶಕರು ಮತ್ತು ಚಿತ್ರತಂಡಕ್ಕೆ ಬೆಂಬಲವಾಗಿ ನಿಲ್ಲಿ ಎಂದು ಮನವಿ ಮಾಡುವ ಮೂಲಕ “ಏನಾಗಿದೆ ನನಗೇನಾಗಿದೆ” ಆಲ್ಬಂ ಹಾಡನ್ನು ಮನಸಾರೆ ಮೆಚ್ಚಿಕೊಂಡಿದ್ಧಾರೆ.
ಗೌಸ್ ಪೀರ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅನಿತಾ ಸಾರಾ ಮಹೇಶ್ ದನಿಯಾಗಿದ್ದು, ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲದಂತೆ ಮೂಡಿ ಬಂದಿದೆ, ಇದು ಅನಿತಾ ಅವರೊಳಗೆ ಇರುವ ಹಿನ್ನೆಲೆ ಗಾಯಕಿಯನ್ನು ಹೊರ ಹಾಕಿದೆ.

ಇನ್ನು ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಸಾಧು ಕೋಕಿಲ, ಅನಿತಾ ಅವರ ಈ ಸಾಂಗ್, ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲ, ಪತಿ ಸಾರಾ ಮಹೇಶ್ ಅವರ ಬೆಂಬಲದಿಂದ ಈ ಮಟ್ಟಕ್ಕೆ ಬಂದಿದ್ಧಾರೆ. ತಮಗೂ ಒಂದು ಆಲ್ಬಂ ಸಾಂಗ್ ಹಾಡಿ ಕೊಡುವಂತೆ ಕೇಳಿದ್ದಾರೆ. ಪ್ರಕೃತಿಯ ಮಧ್ಯೆ ಇಡೀ ನಾಡೇ ತಿರುಗಿ ನೋಡುವಂತೆ ಅವರಿಗಾಗಿ ಮ್ಯೂಸಿಕ್ ಮಾಡಿಕೊಡುವೆ ಎಂದು ಹೇಳಿದರು. ಈಗ ಇರುವ ಆಡಿಯೋ ಕಂಪನಿಗಳವರು ಆಕಾಶದಲ್ಲಿದ್ದಾರೆ, ಅವರಾರೂ ಸಣ್ಣ ಪುಟ್ಟ ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ, ಹೀಗಾಗಿ ಆಡಿಯೋ ಕಂಪನಿ ಆರಂಭಿಸಿ ಕನ್ನಡ ಚಿತ್ರರಂಗಕ್ಕೆ ನೆರವಾಗಿ, ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಮನದುಂಬಿ ಹಾರೈಸಿದರು.
ವಿ,ಮನೋಹರ್ ಮಾತನಾಡಿ, ಅನಿತಾ ಅವರ ಹಾಡು ಕೇಳುತ್ತಿದ್ದರೆ, ವೃತ್ತಿಪರ ಹಿನ್ನೆಲೆ ಗಾಯಕಿ ಹಾಡಿದ ರೀತಿ ಇದೆ. ಅವರು ಈಗಾಗಲೇ ಕನ್ನಡದಲ್ಲಿ ಕೆಲ ಚಿತ್ರಗಳಿಗೆ ಹಾಡಿದ್ದಾರೆ. ಮುಂದೆಯೂ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಚಿತ್ರವನ್ನೂ ನಿರ್ಮಾಣ ಮಾಡಲಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಮಾತನಾಡಿ ಅನಿತಾ ಅವರು ಈ ಹಾಡು ಮಾಡಿಕೊಡುವಂತೆ ಕೇಳಿಕೊಂಡರು. ಅವರ ಧ್ವನಿಗೆ ಹೊಂದುವಂತೆ ಮೆಲೋಡಿ ಮ್ಯೂಸಿಕ್ ಕಂಪೋಜ್ ಮಾಡಿದ್ದೇವೆ. “ಏನಾಗಿದೆ ನನಗೇನಾಗಿದೆ” ಸಾಹಿತ್ಯವನ್ನು ಅದ್ಬುತವಾಗಿ ಹಾಡಿದ್ದಾರೆ. ಮುಂದೆಯೂ ಅವರಿಗಾಗಿ ಹಾಡು ಮಾಡುತ್ತೇನೆ. ಅವರೊಳಗಿನ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಗಾಯಕಿ ಅನಿತಾ ಸಾರಾ ಮಹೇಶ್ ಮಾತನಾಡಿ ನಮ್ಮದೇ ‘ಅನು ಸಾರ’ ಆಡಿಯೋ ಮೂಲಕ ಈ ಹಾಡನ್ನು ಹೊರತಂದಿದ್ದೇವೆ. ನನಗೆ ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಅತೀವ ಆಸಕ್ತಿ ಇತ್ತು, ಈ ನಡುವೆ ಮದುವೆಯಾದ ನಂತರ ಮಕ್ಕಳ ಜವಾಬ್ದಾರಿ ನಿಭಾಯಿಸಬೇಕಾಗಿತ್ತು. ಪತಿ ಸಾರಾ ಮಹೇಶ್ ಅವರು ರಾಜಕಾರಣದಲ್ಲಿರುವ ಹಿನ್ನೆಲೆ ಅವರ ಕೆಲಸದಲ್ಲಿ ಜೊತೆಯಾಗಬೇಕಾಗಿತ್ತು, ಒಬ್ಬ ಮಗ ವೈದ್ಯ ಮತ್ತೊಬ್ಬ ಮಗ ಉದ್ಯಮಿಯಾಗದ್ದು, ನನಗೂ ಸಮಯ ಸಿಕ್ಕಿದೆ, ಹಾಗಾಗಿ ಗಾಯನದಲ್ಲಿ ಹೆಚ್ಚು ತೊಡಗಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.