ಊರಿಗೊಂದು ಬ್ರಿಡ್ಜು…ಕಾರ್ಯಕರ್ತನ ಪರದಾಟ… “ಜೈ” ಚಿತ್ರವಿಮರ್ಶೆ (ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಜೈ
ನಿರ್ದೇಶಕ :ರೂಪೇಶ್ ಶೆಟ್ಟಿ
ನಿರ್ಮಾಪಕರು : ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ
ಸಂಗೀತ : ಲೊಯ್ ವೆಲೆಂಟಿನ್ ಸಲ್ದಾನ
ಛಾಯಾಗ್ರಹಣ : ವಿನುತ್
ತಾರಾಗಣ : ಸುನಿಲ್ ಶೆಟ್ಟಿ , ರೂಪೇಶ್ ಶೆಟ್ಟಿ , ಅದ್ವಿತಿ ಶೆಟ್ಟಿ , ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ , ಉಮೇಶ್ ಮಿಜಾರ್ ಹಾಗೂ ಮುಂತಾದವರು…
ಜೀವನವೇ ಒಂದು ಪಾಠ. ಎಲ್ಲೇ ಇರು.. ಹೇಗೆ ಇರು.. ನಾವು ಮಾತ್ರ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದುಕೊಳ್ಳುವುದಕ್ಕಿಂತ ಎಲ್ಲರನ್ನೂ ಜೊತೆಗೂಡಿಸಿಕೊಂಡು ಚೆನ್ನಾಗಿರಬೇಕೆಂದು ಆಸೆ ಪಡುವುದು ಬಹಳ ಮುಖ್ಯ. ಅಂತದ್ದೇ ಒಂದು ಕಡಲ ತೀರದ ಗ್ರಾಮೀಣ ಭಾಗದ ಊರಿನಲ್ಲಿ ಸೇತುವೆ ಇಲ್ಲದೆ ಪರದಾಡುವ ಜನರು , ಆರೋಗ್ಯ , ವಿದ್ಯೆಗಾಗಿ ಕಿಲೋಮೀಟರ್ ಗಟ್ಟಲೇ ಸಾಗುವ ಸ್ಥಿತಿಗತಿ , ಎಂಎಲ್ಎ ಇದ್ದರೂ ಇರದಂತೆ , ಕಾರ್ಯಕರ್ತರ ಪರದಾಟ , ಕಬ್ಬಡಿಯ ಆಟ , ಪ್ರೀತಿಯ ಸೆಳೆತದ ನಡುವೆ ಎದುರಾಗುವ ಒಂದಷ್ಟು ಸಮಸ್ಯೆಗಳ ಸುಳಿಯ ಸುತ್ತ ಹಾಸ್ಯಮಿಶ್ರಣದೊಂದಿಗೆ ಎಡವಟ್ಟಿನ ಸರಮಾಲೆಯ ಜೊತೆಗೆ ಸಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜೈ”.
ಬಾಲ್ಯದಿಂದಲೂ ತನಗೆ ಬೇಕಾದದ್ದನ್ನು ಹೋರಾಟ ಮಾಡುತ್ತಲೇ ಪಡೆಯುವಂತಹ ಬುದ್ಧಿವಂತ ಯುವಕ ಸತ್ಯ(ರೂಪೇಶ್ ಶೆಟ್ಟಿ). ಸಿಂಹ ಬೆಟ್ಟು ಊರಿನ ಪ್ರಿನ್ಸಿಪಲ್(ನವೀನ್. ಡಿ. ಪಡಿಲ್) ಮಗನಾದ ಸತ್ಯ , ನಾಲ್ಕು ಬಾರಿ ಗೆದ್ದಿರುವ ಎಂಎಲ್ಎ ವಿಶ್ವನಾಥ್ ( ರಾಜ್ ದೀಪಕ್ ಶೆಟ್ಟಿ) ಗೆ ಸದಾ ಜೈ ಎನ್ನುತ್ತಲೆ ಬಂಟನಾಗಿದ್ದು , ಒಬ್ಬ ನಿಷ್ಠಾವಂತ ಕಾರ್ಯಕರ್ತ. ತನ್ನದೇ ಒಂದು ಕಬ್ಬಡಿ ಟೀಮ್ ಹಾಗೂ ಒಂದಷ್ಟು ಊರ ಜನರ ಬೆಂಬಲದೊಂದಿಗೆ ಎಂಎಲ್ಎ ಹೇಳಿದಾಗೆಲ್ಲ ಪ್ರತಿಭಟನೆ ಮಾಡುತ್ತಾ ಒಂದಷ್ಟು ಹಣವನ್ನು ಗಿಟ್ಟಿಸಿಕೊಳ್ಳುತ್ತಾನೆ.
ಇನ್ನು ಕಬ್ಬಡಿ ಆಟಕ್ಕೆ ಎಂಎಲ್ಎ ಸಾಥ್ ಕೂಡ ನೀಡುತ್ತಾರೆ. ಮಗನ ಭವಿಷ್ಯ ಹಾಳಾಗಬಾರದೆಂದು ತಂದೆ ತಾಯಿ ಮುದ್ದಾದ ಹುಡುಗಿಯ ಜೊತೆ ಎಂಗೇಜ್ಮೆಂಟ್ ಮಾಡಿಸಲು ನಿರ್ಧಾರ ಮಾಡುತ್ತಾರೆ. ಟಿವಿ ನಿರೂಪಕಿಯಾಗಿರುವ ಶ್ರಾವ್ಯ (ಅದ್ವಿತಿ ಶೆಟ್ಟಿ) ಳನ್ನ ನೋಡುವ ಸತ್ಯ ಮದುವೆ ಬೇಡ ಎಂದು ಹೋಗುತ್ತಾನೆ. ಯಾವ ಹುಡುಗನನ್ನು ಒಪ್ಪದಾ ಶ್ರಾವ್ಯಗೆ ಇದು ಒಂದು ಪ್ರಶ್ನೆಯಾಗಿ ಉಳಿಯುತ್ತದೆ.

ಇನ್ನು ಸತ್ಯನ ಗೆಳೆಯ ಆಟೋ ಓಡಿಸುವ ಆಂಟೋನಿ , ಆಂಬುಲೆನ್ಸ್ ಡ್ರೈವರ್ ದಾಮಣ್ಣ ( ಅರವಿಂದ್ ಬೋಳಾರ್) ಜೊತೆಗೆ ಒಂದಷ್ಟು ಸ್ನೇಹಿತರು ಈ ಊರಿನ ವಿಚಾರವಾಗಿ ಮಾತುಕತೆ , ಚರ್ಚೆ ನಿರಂತರವಾಗಿರುತ್ತದೆ. ಇದರ ನಡುವೆ ಗರ್ಭಿಣಿ , ವೃದ್ಧರು ಯಾವುದೇ ಆಸ್ಪತ್ರೆ ಸಮೀಪ ಇಲ್ಲದೆ ದೂರ ಪಯಣದಿಂದ ಸಾವಿಗೀಡಾಗುತ್ತಾರೆ. ಇದರಿಂದ ಊರಿನ ಜನರು ಸೇತುವೆ ಬೇಕೆಂದು ಪಟ್ಟು ಹಿಡಿಯುತ್ತಾರೆ.
ಇನ್ನು ಎಂಎಲ್ಎ ಹೊರಗಿನವರಿಗೆ ಫ್ಯಾಕ್ಟರಿ ಕಟ್ಟಲು ಭೂಮಿ ಬಿಡುವಂತೆ ಹಣದ ಆಮಿಷ ಓಡ್ತಾನೆ. ಇದರ ನಡುವೆ ಎಮ್ಎಲ್ಎ ಗೆ ಪಾಠ ಕಲಿಸಲು ಸತ್ಯ ಹಾಗೂ ಗ್ಯಾಂಗ್ ಒಂದಷ್ಟು ಪ್ಲಾನ್ ಕೂಡ ಮಾಡುತ್ತದೆ. ಎಲೆಕ್ಷನ್ ಸಮೀಪದ ಕಾರಣ ಗುಂಡು , ತುಂಡು , ಹಣ ಒದಗಿಸುವ ಎಂಎಲ್ಎ ವಿಶ್ವನಾಥ್ ತನ್ನ ಆತ್ಮೀಯ ಸ್ನೇಹಿತ ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿಯನ್ನು ಪ್ರಚಾರಕ್ಕೆ ಕರೆ ತರಲು ಎಂಎಲ್ಎ ನಿರ್ಧಾರ ಮಾಡುತ್ತಾನೆ. ಊರ ಜನರಿಗೆ ಸೇತುವೆಯ ಅಗತ್ಯ ಒಂದೆಡೆಯಾದರೆ… ಎಂಎಲ್ಎ ಗೆ ಎಲೆಕ್ಷನ್ ನಲ್ಲಿ ಗೆಲ್ಲುವುದೇ ಇನ್ನೊಂದು ಗುರಿ… ಇದರ ನಡುವೆ ನಟ ಸುನಿಲ್ ಶೆಟ್ಟಿ ಹೇಳುವುದು ಏನು… ಕ್ಲೈಮಾಕ್ಸ್ ನಲ್ಲಿ ಜೈ ಯಾವುದಕ್ಕೆ ಎಂಬುದನ್ನು ನೀವು ಚಿತ್ರ ನೋಡಿ ತಿಳಿಯಬೇಕು.
ಇದೊಂದು ಕರಾವಳಿ ಭಾಗದ ಲೋಕಲ್ ಪೊಲಿಟಿಕಲ್ ಕಂಟೆಂಟ್ ಕಥನಕವನ್ನು ಒಳಗೊಂಡಿರುವಂತಹ ಚಿತ್ರವಾಗಿದ್ದು , ಊರುಗಳಲ್ಲಿ ಸೇತುವೆ ಇಲ್ಲದೆ ಜನರು ಎದುರಿಸುವ ಸಂಕಷ್ಟದ ನೈಜತೆಯ ಬಗ್ಗೆ ಅಚ್ಚುಕಟ್ಟಾಗಿ ಹೇಳಿದ್ದಾರೆ ನಿರ್ದೇಶಕ. ಇನ್ನು ಈ ಚಿತ್ರದಲ್ಲಿ ವಿಶೇಷವಾಗಿ ನೋಟು ಬಿಡಿ..ವೋಟು ಇಡಿ.. ಎನ್ನುವಂತೆ ಹಣ , ಹೆಂಡಕ್ಕೆ ದಾಸರಾಗದೆ ಪ್ರಾಮಾಣಿಕವಾಗಿ ವೋಟನ್ನ ಹಾಕಿ , ನಮ್ಮ ಊರು ಸಂಸ್ಕೃತಿಯನ್ನು ನಾವೇ ಬೆಳೆಸಬೇಕು , ಉಳಿಸಬೇಕು ಎಂಬ ಸಂದೇಶವನ್ನು ಬಹಳ ಅರ್ಥಪೂರ್ಣವಾಗಿ ಒಬ್ಬ ಸ್ಟಾರ್ ನಟ ಸುನಿಲ್ ಶೆಟ್ಟಿ ಮೂಲಕ ಹೇಳಿಸಿರುವುದಂತೂ ಇನ್ನು ಅದ್ಭುತವಾಗಿದೆ. ಜನರ ಬಗ್ಗೆ ಅಧಿಕಾರಿಗಳು , ಎಂಎಲ್ಎಗಳು ಗಮನ ಹರಿಸುವುದು ಬಹಳ ಮುಖ್ಯ ಎಂಬುದನ್ನು ತೋರಿದ್ದಾರೆ. ಕರಾವಳಿ ಪ್ರತಿಭೆಗಳು ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದು , ಕೆಲವೊಂದು ಕರಾವಳಿ ಹಾಸ್ಯ ಸನ್ನಿವೇಶಗಳು ಗಮನ ಸೆಳೆಯುತ್ತದೆ. ಚಿತ್ರಕಥೆಯಲ್ಲಿ ಇನ್ನೆಷ್ಟು ವೇಗ ಮಾಡುವುದರ ಜೊತೆಗೆ ಸಿನೆಮಾಟಿಕ್ ಸ್ಟೈಲ್ ಹೆಚ್ಚು ಬೇಕಿತ್ತು ಅನ್ಸುತ್ತೆ. ಒಟ್ಟಾರೆ ಮನೋರಂಜನೆಯ ಅಂಶ ಒಳಗೊಂಡಿದ್ದು , ಎಲ್ಲರಿಗೂ ಇಷ್ಟವಾಗುವಂತಿದೆ.
ನಿರ್ಮಾಪಕರು ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದು , ಸಂಗೀತ, ಛಾಯಾಗ್ರಹಣ , ಸಂಕಲನ , ಸಂಭಾಷಣೆ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ನಟ ರೂಪೇಶ್ ಶೆಟ್ಟಿ ಇಡಿ ಚಿತ್ರವನ್ನು ಆವರಿಸಿಕೊಂಡಿದ್ದು , ಬಹಳ ಲೀಲಾಜಾಲವಾಗಿ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲಿ ಜೈ ಎನ್ನುವಂತೆ ಮಿಂಚಿದ್ದಾರೆ. ನಟಿ ಅದ್ವಿತಿ ಶೆಟ್ಟಿ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಡೀ ಚಿತ್ರದ ಹೈಲೈಟ್ ಎಂದರೆ ನಟ ಸುನಿಲ್ ಶೆಟ್ಟಿ ರವರ ಪಾತ್ರ , ಸೂಕ್ತ ಸಮಯಕ್ಕೆ ಬಂದು ಆಕ್ಷನ್ ಮಾಡುವುದರ ಜೊತೆಗೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ.
ಇನ್ನು ಎಂಎಲ್ಎ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ, ಹಾಸ್ಯ ಸನ್ನಿವೇಶಗಳಲ್ಲಿ ಅರವಿಂದ್ ಬೋಳಾರ್ , ಬೋಜ ರಾಜ , ಸಂದೀಪ್ , ಪ್ರಸನ್ನ ಶೆಟ್ಟಿ ಹಾಗೂ ನಾಯಕನ ತಂದೆಯಾಗಿ ನವೀನ್ ಡಿ ಪಡಿಲ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ. ಒಟ್ಟಾರೆ ಮನೋರಂಜನೆಯ ಅಂಶ ಒಳಗೊಂಡಿರುವ ಈ ಚಿತ್ರವನ್ನು ಎಲ್ಲರೂ ನೋಡಬಹುದು.