”ದಿ ಟಾಸ್ಕ್” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ
ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ದಿ ಟಾಸ್ಕ್’ ಸಿನಿಮಾ ಟೈಟಲ್ ಮತ್ತು ಟೀಸರ್ ಮೂಲಕ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ನವೆಂಬರ್ 21ರಂದು ಈ ಸಿನಿಮಾ ತೆರೆಗೆ ಬರಲಿದೆ. ಈಗ ‘ದಿ ಟಾಸ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಸಾಂಗ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಮುಖ್ಯ ಅತಿಥಿಯಾಗಿ ಬಂದು ಟ್ರೇಲರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.
ಟ್ರೇಲರ್ ಬಿಡುಗಡೆ ಬಳಿಕ ನಟ ಶ್ರೀಮುರಳಿ ಮಾತನಾಡಿ, ದಿ ಟಾಸ್ಕ್ ಚಿತ್ರದ ನಾಯಕರಾದ ಸಾಗರ್-ಸೂರ್ಯ ನೀವು ಅದೃಷ್ಟವಂತರು. ಕಾರಣ ರಾಘು ಅವರಂತಹ ಬ್ರಿಲಿಯಂಟ್ ಡೈರೆಕ್ಟರ್ ಜೊತೆ ಕೆಲಸ ಮಾಡುವ ಅವಕಾಶ ನಿಮ್ಮದಾಗಿದೆ. ರಾಘು ಅವರನ್ನು ಚೂರಿಕಟ್ಟೆ ಸಿನಿಮಾ ಸಮಯದಿಂದ ನೋಡುತ್ತಾ ಬಂದಿದ್ದೇನೆ.
ಅವರ ಡೈರೆಕ್ಷನ್ ನನಗೆ ಬಹಳ ಇಷ್ಟವಾಯ್ತು. ಅವರ ಬರವಣಿಗೆ, ಅಂದುಕೊಳ್ಳುವ ರೀತಿ ಚೆಂದ. ಅವರು ಬುದ್ಧಿವಂತ ವ್ಯಕ್ತಿ. ಚೂರಿಕಟ್ಟೆ ಇವತ್ತಿನ ಮಾರ್ಕೆಟ್ ರಿಲೀಸ್ ಆದರೆ 100 ದಿನ ಓಡುತ್ತದೆ. ಈಗ ದಿ ಟಾಸ್ಕ್ ಸಿನಿಮಾ. ಇಬ್ಬರು ಹೀರೋಗಳು ತುಂಬಾ ಎನರ್ಜಿಟಿಕ್ ಆಗಿ ಕಾಣಿಸ್ತಾರೆ. ಒಳ್ಳೆ ಹೀರೋಗಳು ಇಂಡಸ್ಟ್ರಿಗೆ ಬರ್ತಿದ್ದಾರೆ. ಜೀವನದಲ್ಲಿ ತುಂಬಾನೇ ಟಾಸ್ಕ್ ಇದೆ. ಅದನ್ನು ಪಕ್ಕಕ್ಕಿಟ್ಟು ಇದೇ ನವೆಂಬರ್ 21ರಂದು ದಿ ಟಾಸ್ಕ್ ಸಿನಿಮಾ ನೋಡಿ, ಬೆಂಬಲಿಸಿ ಎಂದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಅದ್ಭುತವಾದ ಸಿನಿಮಾ ದಿ ಟಾಸ್ಕ್. ಇದೇ ತಿಂಗಳ 21ರಂದು ತೆರೆಗೆ ಬರ್ತಿದೆ. ಕನ್ನಡಿಗರು ಸಿನಿಮಾ ನೋಡಿ ಹಾರೈಸಬೇಕು. ಯಶಸ್ವಿಯಾಗಿಗೊಳಿಸಬೇಕು. ಸಾಗರ್ ಹಾಗೂ ಸೂರ್ಯ, ಇಡೀ ತಂಡ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದಾರೆ. ರಾಜೇಶ್ ಸರ್ 10th ಫೇಲ್ ಆದವರಿಗೆ ತಮ್ಮ ದುಡ್ಡಲ್ಲಿ ಮತ್ತೆ ಪರೀಕ್ಷೆ ಕಟ್ಟಿಸಿ ಓದಿಸಿದ್ದಾರೆ. ಇದು ಅವರ ಮಾಡಿದ ಟಾಸ್ಕ್ ಎಂದರು.

‘ಚೂರಿಕಟ್ಟೆ’ ಮೂಲಕ ಭರವಸೆ ಮೂಡಿಸಿದ ರಾಘು ಶಿವಮೊಗ್ಗ ಅವರು ಈಗ ‘ದಿ ಟಾಸ್ಕ್’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಇದೆ. ಹಲವು ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ‘ಭೀಮ’ ಸಿನಿಮಾ ಖ್ಯಾತಿಯ ಜಯಸೂರ್ಯ ಆರ್. ಅಜಾದ್ ಹಾಗೂ ‘ಪೆಂಟಗನ್’ ಖ್ಯಾತಿಯ ಸಾಗರ್ ರಾಮ್ ಅವರು ನಟಿಸಿದ್ದಾರೆ. ಬಾಲ ನಟಿ ಬೇಬಿ ಶ್ರೀಲಕ್ಷ್ಮಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ಲೋಕಪೂಜ್ಯ ಪಿಕ್ಚರ್ ಹೌಸ್’ ಮೂಲಕ ನಿರ್ಮಾಪಕ ವಿಜಯ್ ಕುಮಾರ್ ಮತ್ತು ರಾಮಣ್ಣ ಅವರು ‘ದಿ ಟಾಸ್ಕ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಾಘು ಶಿವಮೊಗ್ಗ ಅವರು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಅರವಿಂದ್ ಕುಪ್ಳಿಕರ್, ಸಂಪತ್ ಮೈತ್ರಿಯಾ, ಬಿ.ಎಂ. ಗಿರಿರಾಜ್, ಬಾಲಾಜಿ ಮನೋಹರ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.