Cini NewsSandalwood

ತನುಷ್ ಶಿವಣ್ಣ ನಟನೆಯ “ಬಾಸ್” ಚಿತ್ರದ ಚಿತ್ರೀಕರಣ ಮುಕ್ತಾಯ

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ “ಬಾಸ್” ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ಬಾಸ್”, ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ. ಕೆಲವೇ ದಿನಗಳಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಡಿಸೆಂಬರ್ ನಲ್ಲಿ ತೆರೆಗೆ ತರುವ ಪ್ರಯತ್ನ ನಡೆಯತ್ತಿದೆ. ತನುಷ್ ಶಿವಣ್ಣ ಚಿತ್ರದ ನಾಯಕನಾಗಿ ನಟಿಸಿದ್ದು, ಮೋನಿಕಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. “ಬಾಸ್” ಚಿತ್ರಕ್ಕೆ “ಸತ್ಯಮೇವ ಜಯತೇ” ಎಂಬ ಅಡಿಬರಹವಿದೆ. ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್ ಆರ್ ಪುರ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ಮಂಜುನಾಥ್ ಮತ್ತು ತೀರ್ಥ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ವಿ.ಲವ ತಿಳಿಸಿದರು.

ಇದು ನಾನು ನಾಯಕನಾಗಿ ನಟಿಸಿರುವ ಐದನೇ ಚಿತ್ರ ಎಂದು ಮಾತನಾಡಿದ ನಾಯಕ ತನುಷ್ ಶಿವಣ್ಣ, ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರ ನಿರ್ವಹಣೆ ಮಾಡಿದ್ದೇನೆ. ಚಿತ್ರದಲ್ಲಿ ಎಲ್ಲರೂ ನನ್ನ “ಬಾಸ್” ಎನ್ನುತ್ತಾರೆ. ತಾವೆಲ್ಲರು ನನ್ನ‌ ಹಿಂದಿನ ಚಿತ್ರಗಳಿಗೆ ತೋರಿದ ಪ್ರೋತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲಿ ಎಂದರು.

ನನ್ನ ಪಾತ್ರ ಕೂಡ ಚೆನ್ನಾಗಿದೆ. ಶೀಲಾ ನನ್ನ ಪಾತ್ರದ ಹೆಸರು ಎಂದು ನಾಯಕಿ ಮೋನಿಕಾ ಗೌಡ ಹೇಳಿದರು. ಚಿತ್ರದಲ್ಲಿ ನಟಿಸಿರುವ ಸಂದೀಪ್, ವೀರೇನ್ ಕೇಶವ್, ಸುಜನ್ ಶೆಟ್ಟಿ, ದುನಿಯಾ ಮಹೇಶ್, ಜೋಶ್ ಅಕ್ಷಯ್, ಮಹೇಶ್, ಮನು, ಮಂಡ್ಯ ರವಿ, ಮಹೇಂದ್ರ ರಾವ್, ಪೃಥ್ವಿ, ನಿಶಾಂತ್, ಮೋಹಿತ್, ಲಕ್ಷ್ಮಣ್ ಪೂಜಾರಿ, ಸಂಗೀತ ನಿರ್ದೇಶಕ ಡೆವಿ ಸುರೇಶ್, ಛಾಯಾಗ್ರಾಹಕ ಶರತ್ ಹಾಗೂ ಸಹ ನಿರ್ದೇಶಕ ಮಂಜುನಾಥ್ ಮುಂತಾದವರು “ಬಾಸ್” ಚಿತ್ರದ ಕುರಿತು ಮಾತನಾಡಿದರು.

error: Content is protected !!