ಮಚ್ಚೆಗಿಂತ ಮನುಷ್ಯತ್ವದ ಪ್ರೀತಿ ಮುಖ್ಯ : ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರವಿಮರ್ಶೆ (ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಬಿಳಿಚುಕ್ಕಿ ಹಳ್ಳಿಹಕ್ಕಿ
ನಿರ್ದೇಶಕ : ಮಹೇಶ್ ಗೌಡ ನಿರ್ಮಾಣ : ಹೊನ್ನುಡಿ ಪ್ರೊಡಕ್ಷನ್ಸ್
ಸಂಗೀತ : ರಿಯೋ ಆಂಟನಿ
ಛಾಯಾಗ್ರಹಣ : ಕಿರಣ್ ಸಿಹೆಚ್‌ಎಂ
ತಾರಾಗಣ : ಮಹೇಶ್ ಗೌಡ , ಕಾಜಲ್ ಕುಂದರ್ ,ಲಕ್ಷ್ಮಿ ಸಿದ್ದಯ್ಯ , ಜಹಾಂಗೀರ್ , ವೀಣಾ ಸುಂದರ್, ರವಿ ಭಟ್, ಗಿರಿಜಾ ಲೋಕೇಶ್ ಹಾಗೂ ಮುಂತಾದವರು…
ಪ್ರತಿಯೊಬ್ಬರೂ ನೆಮ್ಮದಿಯ ಬದುಕು , ಆರೋಗ್ಯ , ಅಂದ, ಚಂದ, ಸೌಂದರ್ಯದ ಬಗ್ಗೆ ಗಮನ ಹರಿಸುವುದು ಸರ್ವೇ ಸಾಮಾನ್ಯ. ಆದರೆ ಕೆಲವರ ಬದುಕಿನಲ್ಲಿ ಮುಖದ ಬಣ್ಣ , ದೇಹದ ಕಲೆ ಹಾಗೂ ಮತ್ತಷ್ಟು ಏರುಪೇರುಗಳಿಂದ ಮನಸ್ಸಿನಲ್ಲಿ ಕೂಗುತ್ತಾ ಸೊರುಗುತ್ತಾರೆ. ಇಂಥದ್ದೇ ಒಂದು ಗಾಢವಾದ ವಿಚಾರವಿರುವ ವ್ಯಕ್ತಿ ಒಬ್ಬನ ತೊನ್ನು (ವಿಟಿಲಿಗೋ) ಸಮಸ್ಯೆಯ ಕುರಿತಾದ ಕಥಾನಕದಲ್ಲಿ ಸ್ನೇಹ , ಪ್ರೀತಿ , ಮಮಕಾರ , ಸಂಬಂಧದ ನಡುವೆ ಬದುಕಿನ ದಾರಿಯನ್ನ ಸೂಕ್ಷ್ಮವಾಗಿ ತೆರೆಯ ಮೇಲೆ ಹೇಳುವ ಹಾದಿಯಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬಿಳಿಚುಕ್ಕಿ ಹಳ್ಳಿ ಹಕ್ಕಿ”.
ಸುಂದರವಾದ ಪರಿಸರದ ನಡುವೆ ಶಾಂತ (ಲಕ್ಷ್ಮಿ ಸಿದ್ದಯ್ಯ) ಅನ್ನ ಪ್ರೀತಿಯ ಮಗ ಶಿವ(ಮಹೇಶ್ ಗೌಡ) ಹಾಗೂ ಅಣ್ಣ ರಂಗಣ್ಣ (ಜಹಾಂಗೀರ್) ಜೊತೆ ವಾಸ.
ತನ್ನ ಮಗ ಶಿವನಿಗೆ ಬಾಲ್ಯದಿಂದಲೇ ದೇಹದ ಮೇಲೆ ಇರುವ ಬಿಳಿ ಚುಕ್ಕಿ (ವಿಟಿಲಿಗೋ) ಸಮಸ್ಯೆ ಬಗೆಹರಿಸಲು ನಾನಾ ಪ್ರಯತ್ನ ಮಾಡ್ತಾಳೆ. ಇದರ ನಡುವೆಯೇ ಬೆಳೆಯುವ ಶಿವ ಮನಸ್ಸಿನಲ್ಲಿ ನೋವಿದ್ದರೂ ತಾಯಿಗೆ ಬೆನ್ನೆಲುಬಾಗಿಲು ನಿಂತು ಒಂದು ಕೆಲಸ ಗಿಟ್ಟಿಸಿಕೊಂಡು ಬದುಕು ನಡೆಸುತ್ತಾನೆ.
ಆದರೆ ತಾಯಿಗೆ ಮಗನಿಗೆ ಹೇಗಾದರೂ ಒಂದು ಹೆಣ್ಣು ಹುಡುಕಿ ಮದುವೆ ಮಾಡಬೇಕೆಂದು ಬ್ರೋಕರ್ ಮೂಲಕ ಬಹಳಷ್ಟು ಪ್ರಯತ್ನ ಮಾಡುತ್ತಾಳೆ. ತನಗೆ ಯಾರು ಹೆಣ್ಣು ಕೊಡುವುದಿಲ್ಲ ಎನ್ನುವ ಶಿವನ ಮಾತಿಗೆ ಸೋದರ ಮಾವ ಟಾಂಗ್ ನೀಡುತ್ತ ಅಳಿಯನಿಗೆ ಬದುಕಿನ ಉತ್ಸಾಹದ ದಾರಿ ಹೇಳುತ್ತಾನೆ.
ಇದರ ನಡುವೆ ತಾಯಿಯ ಆಸೆಯಂತೆ ಹುಡುಗಿ ನೋಡಲು ಶಿವ ಕುಟುಂಬದ ಜೊತೆ ಹೋಗುತ್ತಾನೆ. ಒಳ್ಳೆಯ ಮನೆ ಸೇರಿ ನೆಮ್ಮದಿ ಬದುಕು ನಡೆಸಲೆಂದು ಆಸೆಪಡುವ ಸುಶೀಲ (ವೀಣಾ ಸುಂದರ್) ಹಾಗೂ ವೀರ (ರವಿ ಭಟ್) ತಮ್ಮ ಇಬ್ಬರು ಪುತ್ರಿಯರಲ್ಲಿ ಮೊದಲ ಮಗಳು ಕವಿತಾ (ಕಾಜಲ್ ಕುಂದರ್) ಳನ್ನ ನೋಡಲು ಮುಜುಗರ ಪಡುತ್ತಾನೆ ಶಿವ. ಹುಡುಗಿಯ ತಾಯಿಗೆ ಬಿಳಿ ಚುಕ್ಕಿ ಇರುವ ಹುಡುಗನನ್ನ ಅಳಿಯನಾಗಿ ಒಪ್ಪಲು ಇಷ್ಟ ಪಡುವುದಿಲ್ಲ , ಇದರ ನಡುವೆ ಕವಿತಾ ಮದುವೆಯಾಗಲು ಒಪ್ಪುತ್ತಾಳೆ. ಶಿವು ಹಾಗೂ ಕುಟುಂಬಕ್ಕೆ ಆಶ್ಚರ್ಯ ಅನಿಸಿದರೂ ಮನಸ್ಸಿನಲ್ಲಿ ಖುಷಿಯಾಗುತ್ತದೆ.
ಕವಿತಾ ಮನೆಯಲ್ಲಿ ತಂದೆಗೆ ಒಪ್ಪಿಗೆ ಇದ್ದರೂ ಇಷ್ಟವಿಲ್ಲದ ತಾಯಿಯ ಮಾತಿನ ವರಸೆ ಗೊಂದಲ ಆಗಿರುತ್ತದೆ. ಒಂದಷ್ಟು ಮಾತುಕತೆ , ಸಮಯ ತೆಗೆದುಕೊಂಡು ಶಿವ ಹಾಗೂ ಕವಿತಾ ಮದುವೆ ನಡೆಯುತ್ತದೆ. ಸೊಸೆಯನ್ನ ಮುದ್ದಾಗಿ ನೋಡಿಕೊಳ್ಳುವ ಅತ್ತೆ , ಸೋದರ ಮಾವನ ಬೆಂಬಲ , ಗಂಡನ ಪ್ರೀತಿಯ ನಡುವೆ ಕವಿತಾಳ ಮನಸ್ಸಿನಲ್ಲಿ ಒಂದಷ್ಟು ಗೊಂದಲ. ಮಗಳ ಭವಿಷ್ಯ ಹಾಳಾಯಿತು ಎನ್ನುವ ಕವಿತಾಳ ತಾಯಿ , ಹೇಗೋ ನೆಮ್ಮದಿಯಾಗಿ ಇರಲಿ ಎನ್ನುವ ತಂದೆ , ಇದರ ನಡುವೆ ಊರಿನವರ ಕೊಂಕು ಮಾತು , ಫ್ಲ್ಯಾಷ್ ಬ್ಯಾಕ್ ಕಥೆ ಬೇರೆ ತಿರುವನ್ನ ತೋರುತ್ತಾ ಸಾಗುತ್ತದೆ. ಅದು ಏನು… ಹೇಗೆ… ಯಾರಿಂದ…ಬಿಳಿ ಚುಕ್ಕಿ ಸಮಸ್ಯೆನಾ…ಮನಸ್ಸಿನ ಸಮಸ್ಯೆನಾ… ಎಂಬ ಸೂಕ್ಷ್ಮ ವಿಚಾರವನ್ನ ನೀವು ತೆರೆಯ ಮೇಲೆ ನೋಡಬೇಕು.
ಒಂದು ಗಾಢವಾದ ವಿಚಾರವನ್ನು ಬಹಳ ಸೊಗಸಾಗಿ , ನೈಜಕ್ಕೆ ಹತ್ತಿರ ಎನ್ನುವ ಹಾಗೆ ತೆರೆಯ ಮೇಲೆ ತಂದಿರುವ ನಿರ್ದೇಶಕ ಮಹೇಶ್ ಗೌಡ ರವರ ಆಲೋಚನೆ ಗಮನ ಸೆಳೆಯುತ್ತದೆ. ಅದರಲ್ಲೂ ಈ ರೀತಿಯ ಸಮಸ್ಯೆಯನ್ನು ಎದುರಿಸಿರುವ ಮಹೇಶ್ ಗೌಡ ರವರೆ ನಟನಾಗಿ ಪಾತ್ರಕ್ಕೆ ಜೀವ ತುಂಬುವುದರ ಜೊತೆಗೆ ನಿರ್ಮಿಸಿ , ನಿರ್ದೇಶನ ಮಾಡಿರುವುದು ಮತ್ತೊಂದು ವಿಶೇಷ. ಇದು ಯಾವುದೇ ಕಾಯಿಲೆ , ರೋಗವಲ್ಲ ಎಂಬ ಸೂಕ್ಷ್ಮ ವಿಚಾರವನ್ನು ಹೇಳುವುದರ ಜೊತೆಗೆ ಮಚ್ಚೆಗಿಂತ ಮನುಷ್ಯತ್ವ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು. ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಒಂದು ಉತ್ತಮ ಪ್ರಯತ್ನವಾಗಿ ಚಿತ್ರ ಮೂಡಿ ಬಂದಿದೆ. ನಟಿ ಕಾಜಲ್ ಕುಂದರ್ ತಮ್ಮ ಪಾತ್ರದ ನೈಜ್ಯತೆಗೆ ಹೆಚ್ಚು ಹೊತ್ತುಕೊಟ್ಟು , ಫ್ರೀ ಕ್ಲೈಮಾಕ್ಸ್ ನಲ್ಲಿ ಅದ್ಭುತ ಸನ್ನಿವೇಶಕ್ಕೆ ಜೀವ ತುಂಬಿದ್ದಾರೆ. ಇನ್ನು ಬಹುಮುಖ ಪ್ರತಿಭೆ ಜಹಂಗೀರ್ ಎಂ. ಎಸ್. ಇಡೀ ಚಿತ್ರದ ಓಟಕ್ಕೆ ಹೈಲೈಟ್ ಆಗಿ ತರ್ಲೆ , ತಮಾಷೆಯಲ್ಲಿ ಮಿಂಚಿದ್ದಾರೆ. ನಾಯಕಿಯ ತಾಯಿಯಾಗಿ ವೀಣಾ ಸುಂದರ್ , ತಂದೆಯಾಗಿ ರವಿ ಭಟ್ ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕನ ತಾಯಿಯಾಗಿ ಲಕ್ಷ್ಮಿ ಸಿದ್ದಯ್ಯ ಉತ್ತಮ ಅಭಿನಯ ನೀಡಿ ನೆನಪಿನಲ್ಲಿ ಉಳಿಯುತ್ತಾರೆ. ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಒಟಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ. ಇನ್ನು ತಾಂತ್ರಿಕವಾಗಿ ಸಂಗೀತ , ಛಾಯಾಗ್ರಹಣ , ಸಂಕಲನ ಕೆಲಸ ಗಮನ ಸೆಳೆಯುತ್ತದೆ.
ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ ಹೇಳಿರುವ ಈ ಕಥೆಯನ್ನ ಯಾವುದೇ ಮುಜುಗರವಿಲ್ಲದೆ ಎಲ್ಲರೂ ನೋಡುವಂತಹ ಚಿತ್ರ ಇದಾಗಿದೆ.