ಸಿನಿಮಾ ಬದುಕಿನ ಕಥೆ ವ್ಯಥೆ “ಟೈಮ್ ಪಾಸ್” (ಚಿತ್ರ ವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಟೈಮ್ ಪಾಸ್
ನಿರ್ದೇಶಕ : ಕೆ. ಚೇತನ್ ಜೋಡಿದಾರ್
ನಿರ್ಮಾಪಕರು : ಎಂ.ಹೆಚ್ ಕೃಷ್ಣಮೂರ್ತಿ, ಕಿರಣ್ ಕುಮಾರ್ ಶೆಟ್ಟಿ , ಗುಂಡೂರ್ ಶೇಖರ್.
ಸಂಗೀತ : ಡಿ.ಕೆ
ಛಾಯಾಗ್ರಹಣ : ರಾಜೀವ್ ಗಣೇಶ್
ತಾರಾಗಣ : ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಹಾಗೂ ಮುಂತಾದವರು…
ಬಣ್ಣದ ಬದುಕು ಎಲ್ಲರನ್ನ ಆಕರ್ಷಣೆ ಮಾಡುತ್ತದೆ. ಆದರೆ ಆಯ್ಕೆ ಮಾಡಿಕೊಳ್ಳುವುದು ಕೆಲವರನ್ನ ಮಾತ್ರ , ಅದರಲ್ಲೂ ಆಸೆ ಪಟ್ಟು ಒಳ ಹೋದವರಿಗೆ ಸಿನಿಮಾ ಮಾಡೋ ಕನಸಿಟ್ಟುಕೊಂಡವರ ಬದುಕು ಬವಣೆ , ಏಳುಬೀಳಿನ ಜಗತ್ತಿನ ನಡುವೆ ಕಷ್ಟ , ಸುಖ, ನೋವು , ಪರದಾಟ ಏನೆಲ್ಲಾ ಮಾಡಿಸುತ್ತೆ ಎಂಬ ಕಟು ಸತ್ಯದ ಅನಾವರಣ ಮಾಡಲು ಹೊರಟಿರುವಂತಹ ಕಥಾನಕ ಮೂಲಕ ಮನೋರಂಜನೆಯ ದೃಶ್ಯಗಳೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಟೈಮ್ ಪಾಸ್”.
ನೆಮ್ಮದಿಯ ಕುಟುಂಬ , ಬ್ಯಾಂಕ್ ಉದ್ಯೋಗಿ ತಂದೆ ಹಾಗೂ ತಾಯಿಯ ಮುದ್ದಿನ ಮಗ ಶಂಕರ (ಇಮ್ರಾನ್ ಪಾಷಾ) ನಿಗೆ ನಿರ್ದೇಶಕನಾಗುವುದೇ ದೊಡ್ಡ ಕನಸು. ಮನೆಯವರ ಬುದ್ಧಿ ಮಾತನ್ನ ಕೇಳದೆ , ಸಿನಿಮಾ ನಿರ್ದೇಶಕನಾಗುತ್ತೇನೆ ಎಂದು ಮನೆ ಬಿಟ್ಟು ಬರುತ್ತಾನೆ. ಸಂಗೀತ ನಿರ್ದೇಶಕನ ಕನಸು ಕಂಡ ಗೆಳೆಯ ಬಾಲ (ಓಂ ಶ್ರೀ ಯಕ್ಷಶಿಫ್) , ಮತ್ತೊಬ್ಬ ಸ್ನೇಹಿತ ಗಾಡಿಯ ಮೇಲೆ ಎಗ್ ರೈಸ್ ಮಾರುವ ಮಂಜ( ರತ್ಷಾರಾಮ್) , ಇನ್ನು ಸಿನಿಮಾಗಳಿಗೆ ಕಥೆಯನ್ನು ಕೊಡುವ ಹಿರಿಯ ಜೀವ ಶಾಮಣ್ಣ (ಬ್ಯಾಂಕ್ ಸಂಪತ್) ಬೇರೆ ಬೇರೆ ಸಂದರ್ಭಗಳಲ್ಲಿ ಸಿಕ್ಕಿ ಸಾತ್ ನೀಡುತ್ತಾನೆ. ಇವರ ನಡುವೆ ಹಲವು ಸಿನಿಮಾಗಳನ್ನ ಮಾಡಿ ಸೋತು ಮನೆ , ಆಸ್ತಿಯನ್ನು ಮಾರಿಕೊಂಡಂತಹ ನಿರ್ಮಾಪಕ ಪರಮೇಶ್ವರ್ (ಪ್ರಭಾಕರ್ ರಾವ್) ಆತನ ಮ್ಯಾನೇಜರ್ ಅಯ್ಯಂಗಾರ್ (ನವೀನ್ ಮಹಾಬಲೇಶ್ವರ) ಸಿನಿಮಾ ಸಹವಾಸವೇ ಸಾಕೆಂದು ಬೇಸತ್ತು ಹೋಗಿರುತ್ತಾರೆ.
ತನ್ನ ಜೀವನವೇ ಸಿನಿಮಾ ಎನ್ನುವ ಶಂಕರ್ ತನ್ನ ಪ್ರೇಯಸಿ ಅದಿತಿ (ವೈಸಿರಿ ಕೆ ಗೌಡ) ಗೆ ತನ್ನ ಕನಸಿಗೆ ಬೆಂಬಲವಾಗಿ ನಿಲ್ಲುವಂತೆ ಕೇಳುತ್ತಾನೆ. ಇದರ ನಡುವೆ ಎಗ್ ರೈಸ್ ಮಂಜನ ಅಂಗಡಿಯ ಮುಂದೆ ನಿರ್ಮಾಪಕ ಪರಮೇಶ್ವರನ ಭೇಟಿ ಮಾಡುವ ಶಂಕರ್ ಸಿನಿಮಾ ಕಥೆ ಹೇಳಲು ನಿರ್ಧಾರ ಮಾಡುತ್ತಾನೆ. ಕೋಟಿಗಟ್ಟಲೆ ಹಣವಿಲ್ಲದೆ ಏನು ನಡೆಯೋಲ್ಲ ಎನ್ನುವ ಮ್ಯಾನೇಜರ್ ಅಯ್ಯಂಗಾರ್ ಮಾತಿಗೆ ನಿರ್ಮಾಪಕ ಕೂಡ ಒಪ್ಪುತ್ತಾನೆ. ಶಾಮಣ್ಣನ ಬಳಿ ಇದ್ದ ಸತ್ಯವಾನ್ ಸಾವಿತ್ರಿ ಕಥೆಯ ಎಳೆಯನ್ನ ಸಿನಿಮಾ ಮಾಡಲು ನಿರ್ಧರಿಸಿ , ಪ್ಲಾನ್ ಮಾಡಿ ಇರುವ ಬಜೆಟ್ನಲ್ಲೇ ನಿರ್ಮಾಪಕರನ್ನು ಒಪ್ಪಿಸಿ ಒಂದೇ ದಿನದಲ್ಲಿ ಚಿತ್ರೀಕರಣ ಮಾಡಲು ಮುಂದಾಗುತ್ತಾನೆ. ಇದಕ್ಕೆ ಹಿರಿಯ ಛಾಯಾಗ್ರಹಕ ಇದ್ದರೆ ಸೇಫ್ ಎನ್ನುತ್ತಾ ಲೆನ್ಸ್ ಲಂಬೋದರ (ಚೇತನ್ ಜೋಡಿದಾರ್) ಸಾಕಾರ ಕೇಳುತ್ತಾರೆ.
ನಿರ್ದೇಶನದ ಜೊತೆಗೆ ನಟನಾಗಿ ಶಂಕರ್ , ಪ್ರೇಯಸಿ ಅದಿತಿ ಹಾಗೂ ಎಗ್ ರೈಸ್ ಮಂಜ ಈ ಮೂರು ಪಾತ್ರಗಳ ಸುತ್ತ ಕಥೆ ಸಿದ್ಧವಾಗುತ್ತದೆ. ಮುಂದೆ ಎದುರಾಗುವ ರೋಚಕ ಸಮಸ್ಯೆಗಳು , ಮಾಡುವ ಪ್ಲಾನ್ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಸಿನಿಮಾ ಆಗುತ್ತಾ… ಇಲ್ವಾ… ನಿರ್ದೇಶಕನ ಕನಸು… ಪ್ರೇಯಸಿಯ ಬದುಕು…
ನಿರ್ಮಾಪಕನ ಪಯಣ… ಏನಾಗುತ್ತೆ ಅನ್ನೋದಕ್ಕೆ ಒಮ್ಮೆ ಈ ಚಿತ್ರವನ್ನ ನೀವೆಲ್ಲರೂ ನೋಡಲೇಬೇಕು.
ಇನ್ನು ಸಿನಿಮಾ ಮಾಡೋ ಕನಸಿಟ್ಟುಕೊಂಡವರ ಏಳುಬೀಳಿನ ಕಥಾನಕವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನವನ್ನ ಮಾಡಿದ್ದಾರೆ ನಿರ್ದೇಶಕ ಚೇತನ್ ಜೋಡಿದಾರ್, ಇದು ನಿರ್ದೇಶಕ ಅನುಭವಿಸಿದ ನೋವಿನ ಕಥೆಯು ಒಳಗೊಂಡಂತಿದೆ. ಸಿನಿಮಾ ಹೊರ ಜಗತ್ತಿಗೆ ನೋಡಲು ವರ್ಣಮಯ , ಬಣ್ಣದ ಬದುಕಿನಲ್ಲಿ ಮೋಸ , ಕಾಮ , ದ್ವೇಷ , ಹಿಂಸೆ ಕೆಲವರಿಂದ ಇದ್ದದ್ದೇ ಎಂಬ ಸತ್ಯವನ್ನು ಸೂಕ್ಷ್ಮವಾಗಿ ನಾನಾ ಹಂತದಲ್ಲಿ ತೆರೆದಿಟ್ಟಿದ್ದಾರೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಖರ್ಚು , ವೆಚ್ಚಕ್ಕೆ ತಕ್ಕಂತೆ ಸಿನಿಮಾ ಹೊರಬಂದಿದೆ. ಆದರೂ ಪ್ರಥಮ ಪ್ರಯತ್ನದಲ್ಲೇ ಸಿನಿಮಾ ಮಾಡುವರ ಬದುಕಿನ ಕಥಾನಕ ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಇಂಥ ಚಿತ್ರ ಮಾಡಿದ ನಿರ್ಮಾಪಕರ ಸಾಥ್ ಕೂಡ ಮೈಚ್ಚಲೇಬೇಕು. ಸಂಗೀತ , ಛಾಯಾಗ್ರಹಣ ಗಮನ ಸೆಳೆದಿದ್ದು , ಸಾಹಸ , ನೃತ್ಯ , ಸಂಕಲನ ಉತ್ತಮವಾಗಿದ್ದು , ತಂಡ ಶ್ರಮಪಟ್ಟಿರೋದು ಕಾಣತ್ತದೆ.
ಯುವ ಪ್ರತಿಭೆ ಇಮ್ರಾನ್ ಪಾಷಾ ಪೂರ್ಣ ಪ್ರಮಾಣದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದು , ಒಬ್ಬ ನಿರ್ದೇಶಕನಾಗುವನ ಪಾತ್ರಕ್ಕೆ ಜೀವ ತುಂಬಿ ನಾಯಕನಾಗಿಯೂ ಕೂಡ ಅಭಿನಯಿಸಿದ್ದಾರೆ. ಬೇರೆ ಬೇರೆ ಪಾತ್ರಗಳಲ್ಲಿ ಗಮನ ಸೆಳೆದ ಈ ಪ್ರತಿಭೆ , ಸಿಕ್ಕ ಅವಕಾಶಕ್ಕೆ ನ್ಯಾಯ ನೀಡಿ , ಉತ್ತಮ ಭವಿಷ್ಯದ ಗುರಿಯನ್ನು ಹೊಂದಿದ್ದು , ಉತ್ತಮ ಅವಕಾಶಗಳು ಸಿಗಬೇಕಿದೆ.
ಯುವ ನಟಿ ವೈಸಿರಿ ಕೆ ಗೌಡ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಮತ್ತೊಬ್ಬ ದೈತ್ಯ ಪ್ರತಿಭೆ ರತ್ಷಾರಾಮ್ ಖಡಕ್ ಲುಕ್ ನಲ್ಲಿ ಮಿಂಚಿ ಎಗ್ ರೈಸ್ ಮಂಜನಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಹಿರಿಯ ನಟ ಬ್ಯಾಂಕ್ ಸಂಪತ್ತು ಕೂಡ ಕಥೆಗಾರರಾಗಿ ವಯಸ್ಸನ್ನು ಲೆಕ್ಕಿಸದೆ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ವಿಶೇಷ ಹಾವಭಾವದ ಕೇಶ ವಿನ್ಯಾಸದ ಮೂಲಕ ಶ್ರೀ ಯಕ್ಷಶಿಫ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಸಿನಿಮಾ ನಿರ್ಮಾಪಕನ ಪಾತ್ರಕ್ಕೆ ನೈಜವಾಗಿ ಪ್ರಭಾಕರ್ ರಾವ್ ಅಭಿನಯಿಸಿದ್ದು , ಮ್ಯಾನೇಜರ್ ಪಾತ್ರದಲ್ಲಿ ನವೀನ್ ಮಹಾಬಲೇಶ್ವರ್ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆದಿದ್ದಾರೆ. ಲೆನ್ಸ್ ಲಂಬೋದರನಾಗಿ ನಿರ್ದೇಶಕ ಚೇತನ್ ಜೋಡಿದಾರ್ ಕೂಡ ಪಾತ್ರದ ಪ್ರಮುಖ ತಿರುವಿಗೆ ಕಾರಣರಾಗಿ ಟ್ವಿಸ್ಟ್ ನೀಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು , ಕೆಲವು ದೃಶ್ಯಗಳು , ಸಂಭಾಷಣೆ ಮುಜುಗರ ಅನಿಸಿದರೂ , ಸಿನಿಮಾದೊಳಗೊಂದು ಸಿನಿಮಾವಾಗಿದ್ದು , ಮನೋರಂಜನೆಯ ದೃಷ್ಟಿಯಿಂದ ಒಮ್ಮೆ ನೋಡುವಂತಿದೆ.