“ಬಿಳಿಚುಕ್ಕಿ ಹಳ್ಳಿಹಕ್ಕಿ” ತಂಡಕ್ಕೆ ಸಾಥ್ ಕೊಟ್ಟ ನಟ ಶ್ರೀಮುರುಳಿ.
ಒಂದು ವಿಭಿನ್ನ ಕಥಾನಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಮಹೇಶ್ ಗೌಡ ಅವರು ನಿರ್ದೇಶಿಸಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು, ನಾಯಕನಾಗಿ ಅಭಿನಯಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’. ಈಗಾಗಲೇ ಚಿತ್ರತಂಡ ಹಂಚಿಕೊಂಡಿರುವ ಒಂದಷ್ಟು ವಿಚಾರಗಳು, ಪೋಸ್ಟರ್, ಹಾಡುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಅಕ್ಟೋಬರ್ 24ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಇದೇ ಹೊತ್ತಿನಲ್ಲಿ ಮತ್ತೊಂದು ಖುಷಿಯ ಸಂಗತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ವಿಟಿಲಿಗೋ ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರುವ ಈ ಸಿನಿಮಾದ ಕೆಲ ತುಣುಕುಗಳನ್ನು ಕಂಡು ಥ್ರಿಲ್ ಆಗಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ, ಈ ಸಿನಿಮಾವನ್ನು ತಾವೇ ಅರ್ಪಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರುಳಿಯವರ ಈ ಬೆಂಬಲದಿಂದಾಗಿ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದ ಬಿಡುಗಡೆಯ ತಯಾರಿ ಈಗ ಜೋರಾಗಿ ನಡೆಯುತ್ತಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇದರ ನಡುವಲ್ಲಿಯೇ ಶ್ರೀಮುರುಳಿ ಅವರ ಕಡೆಯಿಂದ ಇಂಥಾದ್ದೊಂದು ಸಿಹಿ ಸುದ್ದಿ ಸಿಕ್ಕಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಶ್ರೀಮುರುಳಿ ಒಂದು ಸಿನಿಮಾವನ್ನು ಪ್ರೆಸೆಂಟ್ ಮಾಡಿ ಬೆಂಬಲಿಸಲು ಮುಂದಾಗಿದ್ದಾರೆ. ಹಾಗೆ ರೋರಿಂಗ್ ಸ್ಟಾರ್ ನಿರ್ಧಾರ ಕೈಗೊಳ್ಳಲು ಕಾರಣವಾಗಿರೋದು ಬಿಳಿಚುಕ್ಕಿ ಹಳ್ಳಿಹಕ್ಕಿಯ ಕಂಟೆಂಟಿನ ಕಸುವೆಂಬುದು ಅಸಲೀ ವಿಚಾರ.
ಚಿತ್ರತಂಡದ ಕಡೆಯಿಂದ ಸಿನಿಮಾದ ಒಂದಷ್ಟು ತುಣುಕುಗಳನ್ನು ನೋಡಿರುವ ಶ್ರೀಮುರುಳಿ ಖುಷಿಗೊಂಡಿದ್ದಾರೆ. ಮಹೇಶ್ ಗೌಡ ಸೇರಿದಂತೆ ಒಂದಿಡೀ ಚಿತ್ರತಂಡವನ್ನು ಅಭಿನಂದಿಸಿರುವ ಅವರು, ಭಾರತೀಯ ಚಿತ್ರರಂಗದಲ್ಲಿಯೇ ಪ್ರಥಮ ಎಂಬಂಥಾ ಇಂಥಾ ಕಥಾ ವಸ್ತುವನ್ನು ಕನ್ನಡ ಚಿತ್ರದ ಮೂಲಕ ಮುಟ್ಟಿರುವುದಕ್ಕೆ, ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ನಾಯಕನಾಗಿ ನಟಿಸಿರುವುದಕ್ಕೆ ಅಭಿನಂದಿಸಿದ್ದಾರೆ. ಇಂಥಾ ಹಲವು ವಿಶೇಷತೆಗಳನ್ನು ಹೊಂದಿರುವ ಬಿಳಿಚುಕ್ಕಿ ಹಳ್ಳಿಹಕ್ಕಿಯ ಬಗ್ಗೆ ಬೆರಗಿಟ್ಟುಕೊಂಡೇ ಶ್ರೀಮುರುಳಿ ಪ್ರೆಸೆಂಟ್ ಮಾಡಲು ಮುಂದಾಗಿದ್ದಾರೆ. ಓರ್ವ ನಾಯಕ ನಟನಾಗಿ ಬ್ಯುಸಿಯಾಗಿರುವ ಶ್ರೀಮುರುಳಿ ವಿಶಿಷ್ಟ ಕಥಾಹಂದರದ ಸಿನಿಮಾವೊಂದಕ್ಕೆ ಸಾಥ್ ಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.