Cini NewsSandalwood

ಇದೇ 26ರಂದು ಯುವ ಪ್ರತಿಭೆಗಳ “ಕರಾಸ್ತ್ರ” ಚಿತ್ರ ಬಿಡುಗಡೆ

Spread the love

ಈಗಿನ ಕಾಲದಲ್ಲಿ ಮಹಿಳೆಯರು ಎಂಥದೇ ಆಪತ್ತಿನ ಸಂದರ್ಭ ಎದುರಾದರೂ, ಹೇಗೆ ತಮ್ಮನ್ನು ತಾವು ಸ್ವಯಂರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ಕರಾಸ್ತ್ರ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ನಾರಾಯಣ ಪೂಜಾರ. ಸೆ.26ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಬ್ಯಾನರ್ ಮೂಲಕ ನಾರಾಯಣ ಪೂಜಾರ್ ಅವರೇ ನಿರ್ಮಾಣ ಮಾಡುವ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಮೋಟಿವೇಶನಲ್ ಸಾಂಗ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ನಿರ್ಮಾಪಕರ ಅನೇಕ ಹಿತೈಷಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದರು.

ಕರಾಸ್ತ್ರ ಕುರಿತಂತೆ ಮಾತನಾಡಿದ ನಿರ್ದೇಶಕ ನಾರಾಯಣ ಪೂಜಾರ್, ಹೆಣ್ಣು ಮಕ್ಕಳಿಗೆ ಸ್ವರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ನನ್ನೂರು ಬ್ಯಾಡಗಿ, ಒಬ್ಬ ಕಲಾವಿದನಾಗಬೇಕೆಂದು 2006ರಲ್ಲಿ ಬೆಂಗಳೂರಿಗೆ ಬಂದೆ. ಗುರು ದೇಶಪಾಂಡೆ ಅವರಬಳಿ ಕಲಿತು ಅವರ ಸಿನಿಮಾದಲ್ಲೂ ಅಭಿನಯಿಸಿದೆ. ವಿಜಯ್ ಸೇತುಪತಿ ಅವರ ಮೊದಲ ಕನ್ನಡ ಚಿತ್ರ ‘ಹೋರಾಟ’ದಲ್ಲಿ ಪ್ರಮುಖ ಪಾತ್ರ ಮಾಡಿದ್ದೆ. ಆದರೆ ಆ ಚಿತ್ರ ರಿಲೀಸಾಗಲಿಲ್ಲ.

ಒಂದಿಬ್ಬರ ಜತೆ ಸಿನಿಮಾ ಮಾಡಲು ಹೋಗಿ ಹಣ ಕಳೆದುಕೊಂಡೆ. ನಂತರ ಪತ್ರಿಕೆಗಳ ಮೂಲಕ ಸಿನಿಮಾ ರಂಗದ ಅಂತರಾಳ ತಿಳಿದುಕೊಂಡು ಕೋವಿಡ್ ಟೈಮಲ್ಲಿ ಈ ಸಿನಿಮಾ ಪ್ರಾರಂಭಿಸಿದ್ದೆ. ಬೇಸಿಕಲಿ ನಾನೊಬ್ಬ ಕರಾಟೆ ಮಾಸ್ಟರ್, ಉತ್ತರ ಕರ್ನಾಟಕದ ಪ್ರತಿಭೆಗಳನ್ನ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ. ಒಮ್ಮೆ ಚಿತ್ರದ ಹಾರ್ಡ್ ಡಿಸ್ಕೇ ಹಾಳಾಗಿತ್ತು. ಅದೆಲ್ಲ ಸರಿ ಮಾಡಿಕೊಂಡು ಇದೀಗ ಚಿತ್ರವನ್ನು ರಿಲೀಸ್ ಹಂತಕ್ಕೆ ತಂದಿದ್ದೇವೆ. ಈ ಸಿನಿಮಾ ನನಗೆ ತಪಸ್ಸಿದ್ದ ಹಾಗೆ.

ನನ್ನ ಚಿತ್ರದಲ್ಲಿ ಕೆಲಸ ಮಾಡಿದ ಬಹಳಷ್ಟು ಜನ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಚಿತ್ರದಲ್ಲಿ ಕರಾಟೆ ಒಂದು ಭಾಗ. ನಾಯಕಿಗೆ ಒಂದು ಸಮಸ್ಯೆ ಎದುರಾಗುತ್ತದೆ. ಆಕೆ ಅದನ್ನು ಬಗೆಹರಿಸ್ತಾಳಾ ಇಲ್ವಾ ಅನ್ನೋದೆ ಕರಾಸ್ತ್ರ. ಚಿತ್ರದಲ್ಲಿ ನಾನು ಮೂರು ಶೇಡ್ ಇರೋ ಪಾತ್ರ ಮಾಡಿದ್ದೇನೆ ಎಂದರು‌.

ನಂತರ ಚಿತ್ರದ ನಾಯಕಿ ಮನಿಷಾ ಕಬ್ಬೂರ ಮಾತನಾಡಿ ಕರಾಸ್ತ್ರ ಒಂದು ಟೀಮ್ ವರ್ಕ್ ಆಗಿದೆ. ಮೊದಲು ನನಗೆ ಕ್ಯಾಮೆರಾ ಹೇಗೆ ಫೇಸ್ ಮಾಡಬೇಕೆಂದು ಗೊತ್ತಿರಲಿಲ್ಲ. ನಿರ್ದೇಶಕರೇ ಹೇಳಿಕೊಟ್ಟರು. ಮಹಿಳೆಯರು ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳೋದನ್ನು ಕಲಿಯಬೇಕು ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ ಎಂದರು. ಬೇಬಿ ಕೃಷ್ಣವೇಣಿ, ಹೇಮಂತ್, ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ ರಾಜ್ ಭಾಸ್ಕರ್ ಕರಾಸ್ತ್ರ ಚಿತ್ರದ ವಿಶೇಷತೆ ಕುರಿತಂತೆ ಮಾತನಾಡಿದರು. ವಿತರಕ ಕುಲಕರ್ಣಿ ಮಾತನಾಡಿ ನಾನು ಸಿನಿಮಾ ನೋಡಿದ್ದೇನೆ.

ತುಂಬಾ ಚೆನ್ನಾಗಿ ಬಂದಿದೆ. 25 ರಿಂದ 30 ಥೇಟರ್ ಗಳಲ್ಲಿ ರಿಲೀಸ್ ಮಾಡೋ ಪ್ಲಾನ್ ಮಾಡಿಕೊಂಡಿದ್ದೇವೆ ಎಂದರು. ಉಳಿದ ತಾರಾಗಣದಲ್ಲಿ ಕಾರ್ತೀಕ್ ಪೂಜಾರ್, ಶ್ರೀನಿವಾಸ ಹುಲಕೋಟೆ, ಕ್ಷಿತಿ ವೀರಣ್ಣ, ವಿದ್ಯಾ ಬೆಳಗಾವಿ, ಸ್ಟೆಫಿ ಲೂಯಿಸ್ ಮುಂತಾದವರಿದ್ದಾರೆ.  ಶಂಕರ ಸುಗ್ನಳ್ಳಿ, ಲಕ್ಷ್ಮಣ, ಮೈಲಾರಿ, ಗಗನ್ ಅವರ ಛಾಯಾಗ್ರಹಣ, ಮಹಾರಾಜ್ ಅವರ ಸಂಗೀತ, ರಾಜ್ ಭಾಸ್ಕರ್ ಅವರ ಹಿನ್ನೆಲೆ ಸಂಗೀತ, ಕರಾಟೆ ಮಂಜು, ಶಂಕರ ಶಾಸ್ತ್ರಿ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!