Cini NewsMovie ReviewSandalwood

ಸಮಸ್ಯೆಗೆ ಸಾವೇ ಪರಿಹಾರ ಅಲ್ಲ…ಇದು ಸಂದೇಶವಿರುವ ಚಿತ್ರ “ಸೆಪ್ಟೆಂಬರ್ 10” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ಸೆಪ್ಟೆಂಬರ್ 10
ನಿರ್ದೇಶಕ : ಓಂ ಸಾಯಿಪ್ರಕಾಶ್
ನಿರ್ಮಾಪಕಿ : ರಾಜಮ್ಮ ಸಾಯಿಪ್ರಕಾಶ್
ಸಂಗೀತ : ವಿ. ನಾಗೇಂದ್ರ ಪ್ರಸಾದ್
ಛಾಯಾಗ್ರಹಣ : ಜೆಜಿ. ಕೃಷ್ಣ
ತಾರಾಗಣ : ಶಶಿಕುಮಾರ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಸಿಹಿ ಕಹಿ ಚಂದ್ರು , ಗಣೇಶ ರಾವ್ ಕೇಸರಕರ್, ತನುಜಾ , ಶ್ರೀರಕ್ಷಾ ಶಿವಕುಮಾರ್ , ಜಯಸಿಂಹ ಕೊಟ್ಟಪಟ್ಟಿ , ರಿಷಿತ ಮಲ್ನಾಡ್ ಹಾಗೂ ಮುಂತಾದವರು…

ಈ ಭೂಮಿ ಮೇಲೆ ಹುಟ್ಟಿದಂತ ಪ್ರತಿಯೊಬ್ಬ ಮನುಷ್ಯನು ತನ್ನ ಸಮಯ ಬಂದಾಗ ಸಾಯಲೇಬೇಕು , ಹಾಗಂತ ಬದುಕಿದ್ದಾಗಲೇ ಸಮಸ್ಯೆ , ಕಷ್ಟಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎನ್ನುವುದೇ ಪ್ರಶ್ನೆ. ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶದ ಮೂಲಕ ಒಂದಷ್ಟು ಕುಟುಂಬಗಳ ಬದುಕು , ನೋವು , ಪ್ರೀತಿ , ಹತಾಶೆ , ಹಿಂಸೆಯ ನೋವನ್ನ ಅನುಭವಿಸಿದವರ ಬದುಕು ಹೇಗೆಲ್ಲ ಇರುತ್ತದೆ ಎಂಬ ಸೂಕ್ಷ್ಮತೆಯನ್ನು ತೆರೆಯ ಮೇಲೆ ಬಹಳ ಅಚ್ಚುಕಟ್ಟಾಗಿ ತೋರುವ ಪ್ರಯತ್ನದ ಫಲವಾಗಿ ಬಂದಿರುವಂತಹ ಚಿತ್ರ “ಸೆಪ್ಟೆಂಬರ್ 10”.

ಸಾಮಾನ್ಯವಾಗಿ ಪ್ರೀತಿ , ಸ್ನೇಹ , ತಂದೆ , ತಾಯಿ ಸೇರಿದಂತೆ ಒಂದೊಂದುಕ್ಕು ಒಂದು ದಿನಾಚರಣೆ ಇರುತ್ತದೆ. ಅದೇ ರೀತಿ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ “ವಿಶ್ವ ಆತ್ಮಹತ್ಯೆ ನಿವಾರಣ ದಿನಾಚರಣೆ” ಯನ್ನು ಸೆಪ್ಟೆಂಬರ್ 10ರಂದು ನಡೆಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿ ಎಲ್ಲಾ ಜಾತಿ , ಧರ್ಮದವರು ಸೇರಿ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾವು ಎಲ್ಲದಕ್ಕೂ ಪರಿಹಾರವಲ್ಲ , ಸೋಲೇ ಗೆಲುವಿನ ಮೆಟ್ಟಲು , “ಧೈರ್ಯಂ ಸರ್ವತ್ರ ಸಾಧನಂ”… ಎಂಬ ಸಂದೇಶವನ್ನು ಸಾರುವ ಗಣ್ಯರ ಸಮ್ಮುಖದಲ್ಲಿ ಮಾನಸಿಕ ತಜ್ಞ (ಶಶಿಕುಮಾರ್) ಹೇಳುವಂತೆ ಪ್ರತಿ ೪೦ ಸೆಕೆಂಡಿಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಕಾನೂನು ರೀತಿಯಲ್ಲಿ ಇದೊಂದು ಅಪರಾಧ, ಧೈರ್ಯದಿಂದ ಬದುಕುವುದನ್ನು ಕಲಿಯಬೇಕು ಎನ್ನುತ್ತಾ , ಒಂದಷ್ಟು ಘಟನೆಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ.

ಹಳ್ಳಿಯ ಜಮೀನ್ದಾರ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ , ತನ್ನ ಐಷಾರಾಮಿ ಜೀವನದಲ್ಲಿ ಒಬ್ಬಳೇ ಮಗಳನ್ನು ಮುದ್ದಾಗಿ ಬೆಳೆಸಿ ಕಾಲೇಜಿಗೆ ಕಳಿಸುತ್ತಾನೆ. ಇನ್ನು ಕೂಲಿ ಮಾಡುವವನ ಮಗ ಕೂಡ ಚೆನ್ನಾಗಿ ಓದುತ್ತಾ ಅದೇ ಕಾಲೇಜಿನಲ್ಲಿ ಅಗ್ರಿಕಲ್ಚರ್ ಡಿಗ್ರಿ ಮಾಡುತ್ತಾ ಆಧುನಿಕ ರೈತನಾಗಿ ಬದುಕುವ ಆಸೆ ಕಾಣುತ್ತಾನೆ. ಇದರ ನಡುವೆ ಇವರಿಬ್ಬರೂ ಪ್ರೀತಿಯಲ್ಲಿ ಮುಳುಗುತ್ತಾರೆ.

ಮತ್ತೊಂದೆಡೆ ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ, ಅಳಿಯನಿಗೆ ಗಾಡಿ , ವರದಕ್ಷಿಣೆ ಕೊಡಲಾಗದೆ, ಮಗಳ ಪರಿಸ್ಥಿತಿಯನ್ನು ನೋಡಲಾಗದೆ ಪರದಾಡುವ ತಂದೆ ತಾಯಿ. ಹಾಗೆಯೇ ಶಾಲೆಗೆ ಹೋಗುವ ಮಗಳು 99% ಪಡೆದು ವಿದೇಶಕ್ಕೆ ಹೋಗಬೇಕೆಂದು ಕನಸು ಕಾಣುವ ತಾಯಿ, ವಿದೇಶದಲ್ಲಿರುವ ಸ್ನೇಹಿತರ ಮಾತಿಗೆ ಕಟ್ಟು ಬಿದ್ದು ಮಗಳ ಮೇಲೆ ಒತ್ತಡ ಹೇರುವ ತಾಯಿ. ಇನ್ನು ಪ್ರೀತಿಸಿ ಮದುವೆಯಾದವನು ತನ್ನ ಪತ್ನಿಯ ಐಷಾರಾಮಿ ಬದುಕಿನ ಆಸೆ , ಆಡಂಬರಕ್ಕಾಗಿ ಸಾಲ ಮಾಡಿ ಪರದಾಡುವ ಸ್ಥಿತಿಗತಿ. ಮತ್ತೊಂದೆಡೆ ಕ್ರಿಕೆಟ್ ಬಗ್ಗೆ ಹೆಚ್ಚು ಒಲವಿರುವ ಮಗುವಿಗೆ ಓದು ಓದು ಎಂದು ಒತ್ತಡ ಹೇರುವ ಅಪ್ಪನ ವರ್ತನೆ.

ಇನ್ನು ಹಣ , ಆಸ್ತಿ , ಅಂತಸ್ತು ಎಲ್ಲಾ ಇದ್ದರೂ ಬಿಸಿನೆಸ್ ನಲ್ಲಿ ಸದಾ ನಂಬರ್ ಒನ್ ಆಗಬೇಕೆಂದು ಒತ್ತಡ ಹಾಕುವ ಹೆಂಡತಿಯ ಕಾಟಕ್ಕೆ ಪರದಾಡುವ ಪತಿ. ಹೀಗೆ ಒಂದಷ್ಟು ಕುಟುಂಬಗಳಲ್ಲಿ ಕೆಲವರು ಸಮಸ್ಯೆಯನ್ನು ಎದುರಿಸುತ್ತಾ , ಜೀವನವೇ ಜಿಗುಪ್ಸೆಗೊಂಡು ಬದುಕುವುದು ಅಗತ್ಯವೇ ಎಂಬ ನಿರ್ಧಾರಕ್ಕೂ ಬರುತ್ತಾರೆ. ಮುಂದೆ ಎದುರಾಗುವ ಘಟನೆಗಳು ಬೇರೆಯದೆ ಕಥೆಯನ್ನು ಹೇಳುತ್ತದೆ. ಸಮಸ್ಯೆ ಎದುರಿಸಿದವರ ಬದುಕು ಏನಾಗುತ್ತೆ… ಅವರು ಸಾಯುತ್ತಾರಾ… ಬದುಕುತ್ತಾರಾ… ಬೇರೆ ದಾರಿ ಸಿಗುತ್ತಾ… ಕ್ಲೈಮಾಕ್ಸ್ ಹೇಳುವ ಸಂದೇಶ ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಓಂ ಸಾಯಿ ಪ್ರಕಾಶ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣವಾಗಿದ್ದು , ಒಂದು ಉತ್ತಮ ಸಂದೇಶವನ್ನು ನೀಡುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಮಸ್ಯೆಗಳನ್ನು ಎದುರಿಸಿರುವ ಬಹಳಷ್ಟು ಮಂದಿ ಸಾಧನೆ ಮಾಡಿ ಬದುಕಿನಲ್ಲಿ ಗೆದ್ದಿದ್ದಾರೆ.

ಜೀವನದಲ್ಲಿ ಪ್ಲಾನಿಂಗ್ ಬಹಳ ಮುಖ್ಯ , ಬದುಕನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಮಸ್ಯೆಯ ಸುಳಿಯಿಂದ ಹೊರಬರುವ ದಾರಿ ಕಂಡುಕೊಳ್ಳಿ , ಸಾವೇ ಎಲ್ಲದಕ್ಕೂ ಉತ್ತರವಲ್ಲ ಎಂಬುವ ವಿಚಾರ ಮನಸ್ಸನ್ನು ಮುಟ್ಟುತ್ತದೆ. ಆದರೆ ಚಿತ್ರಕಥೆಯಲ್ಲಿ ಮೊದಲ ಭಾಗ ಇದ್ದಲ್ಲೇ ಒಂದಷ್ಟು ವಿಚಾರ ಗಿರಿಗಿ ಹೊಡೆದಂತಿದೆ.ಇನ್ನಷ್ಟು ಬದಲಾವಣೆ ಮಾಡಬಹುದಿತ್ತು. ಇಂತಹ ಸಂದೇಶ ಸಾರುವ ಚಿತ್ರವನ್ನು ಧೈರ್ಯ ಮಾಡಿ ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನ ಕೂಡ ಮೆಚ್ಚಲೇಬೇಕು.

ಇಂತಹ ಚಿತ್ರಗಳಿಗೆ ಸರ್ಕಾರವು ಬೆಂಬಲ ನೀಡಿ , 100% ಟ್ಯಾಕ್ಸ್ ಫ್ರೀ ಮೂಲಕ ಪ್ರತಿಯೊಬ್ಬರು ಚಿತ್ರ ವೀಕ್ಷಣೆಗೆ ದಾರಿ ಮಾಡಿಕೊಡುವುದು ಅಗತ್ಯ ಅನಿಸುತ್ತದೆ. ಈ ಚಿತ್ರದ ಸಂಗೀತ ಹಾಗೂ ಸಾಹಿತ್ಯ ಅರ್ಥಪೂರ್ಣವಾಗಿ ಮೂಡಿಬಂದಿದೆ. ಛಾಯಾಗ್ರಹಕರ ಕೆಲಸವೂ ಕೂಡ ಉತ್ತಮವಾಗಿದೆ. ಇನ್ನು ಪಾತ್ರಧಾರಿಗಳಾಗಿ ಚಿತ್ರರಂಗದ ಹಿರಿಯ , ಕಿರಿಯ ಕಲಾವಿದರ ದಂಡೆ ಅಭಿನಯಿಸಿದ್ದು , ಎಲ್ಲರೂ ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಶ್ರಮಪಟ್ಟಿದ್ದಾರೆ. ಯಾವುದೇ ಆಕ್ಷನ್ , ಸಾಂಗ್, ಮಾಸ್ ಅಬ್ಬರವಿಲ್ಲದ ಈ ಚಿತ್ರವು ಒಂದು ಸಂದೇಶವನ್ನು ಅಚ್ಚುಕಟ್ಟಾಗಿ ಸಾರಿದ್ದು , ಒಟ್ಟಾರೆ ಕುಟುಂಬ ಸಮೇತ ಕುಳಿತು ನೋಡುವಂತಹ ಚಿತ್ರ ಇದಾಗಿದೆ.ದಾಗಿದೆ.

error: Content is protected !!