ವಿಭಿನ್ನ ಕಥಾನಕ “ಬಿಳಿಚುಕ್ಕಿ ಹಳ್ಳಿಹಕ್ಕಿ” ಚಿತ್ರ ಅಕ್ಟೋಬರ್ 24ರಂದು ಬಿಡುಗಡೆ
ಜನಪ್ರಿಯ ಅಲೆಗಳ ಭರಾಟೆಯ ನಡುವಲ್ಲಿಯೇ, ಭಿನ್ನ ಆಲಾಪದಂಥಾ ಸಿನಿಮಾಕ್ಕಾಗಿ ಧ್ಯಾನಿಸಿಸುವ ದೊಡ್ಡದೊಂದು ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರು ನಿರ್ಮಾಣ, ನಿರ್ದೇಶನ ಮಾಡಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ಅಂಥಾ ಭಿನ್ನ ಪಥವೊಂದರ ಸುಳಿವು ಬಿಟ್ಟು ಕೊಟ್ಟಿತ್ತು. ಈಗಾಗಲೇ ಪೋಸ್ಟರ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಗಮನ ಸೆಳೆದಿರುವ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟರ್ ಒಂದರ ಮೂಲಕ ಚಿತ್ರತಂಡ ಘೋಶಿಸಿದೆ. ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಇದೇ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ನಿರ್ದೇಶಕರು ಈ ವರೆಗೆ ಹೇಳಿಕೊಂಡಿರುವ ಒಂದಷ್ಟು ಅಂಶಗಳನ್ನಾಧರಿಸಿ ಹೇಳೋದಾದರೆ, ಇದು ಭಿನ್ನ ಬಗೆಯ ಸಿನಿಮಾ. ನಮ್ಮ ಸುತ್ತಮುತ್ತಲೇ ವಿಟಿಲಿಗೋ ಅಂದರೆ ತೊನ್ನು ಎಂಬ ಚರ್ಮ ಬಾಧೆ ಅನೇಕರನ್ನು ಆವರಿಸಿಕೊಂಡಿರುತ್ತೆ. ಅಂಥಾದ್ದೊಂದು ಕಾಯಿಲೆಯಲ್ಲದ ಕಾಯಿಲೆಯ ಭೂಮಿಕೆಯ ಮೇಲೆ ತಯಾರಾಗಿರುವ ಮೊಟ್ಟ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಬಿಳಿಚುಕ್ಕಿ ಹಳ್ಳಿಹಕ್ಕಿಯದ್ದು.
ಹೊರ ಜಗತ್ತಿನ ಪಾಲಿಗೆ ತೊನ್ನು ಅನ್ನೋದೊಂದು ಚರ್ಮ ವ್ಯಾಧಿ. ಆದರೆ, ಅದರ ಸುತ್ತ ಹಬ್ಬಿಕೊಂಡಿರುವ ಚಿತ್ರವಿಚಿತ್ರ ನಂಬಿಕೆಗಳದ್ದೇ ದೊಡ್ಡ ಕಥೆಯಿದೆ. ಅಂಥಾ ಬಾಧೆಗೀಡಾದ ಜೀವವೊಂದರ ಮನೋವ್ಯಾಕುಲವನ್ನು ಸುಲಭಕ್ಕೆ ಅಂದಾಜಿಸಲಾಗದ ಕಥಾ ಹಂದರದೊಂದಿಗೆ ಮಹೇಶ್ ಅವರು ಕಟ್ಟಿಕೊಟ್ಟಿದ್ದಾರಂತೆ.
ಈ ಹಿಂದೆ ಮಹಿರಾ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದವರು ಮಹೇಶ್ ಗೌಡ. ಒಂದಷ್ಟು ಸಮಯದ ಸಿದ್ಧತೆಗಳ ನಂತರ ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ ಇಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿರೋದು ವಿಶೇಷ. ಇಂಥಾದ್ದೊಂದು ವಿಶಿಷ್ಟವಾದ ಕಥೆಯನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ, ಭರಪೂರ ಮನೋರಂಜನಾತ್ಮಕ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆಯಂತೆ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾರಾಗಣದ ಬೆರಗುಗಳೂ ಸೇರಿದಂತೆ, ಈ ಸಿನಿಮಾ ಬಗೆಗಿನ ಇನ್ನಷ್ಟು ವಿವರಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.