ನಿಗೂಢ ಕೊಲೆಗಳ ರಹಸ್ಯ “ಉಸಿರು” (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಉಸಿರು
ನಿರ್ದೇಶಕ : ಪನೇಮ್ ಪ್ರಭಾಕರ್
ನಿರ್ಮಾಪಟಿ : ಲಕ್ಷ್ಮಿ ಹರೀಶ್
ಸಂಗೀತ : ಆರ್.ಎಸ್.ಗಣೇಶ್ ನಾರಾಯಣನ್
ತಾರಾಗಣ : ತಿಲಕ್ ಶೇಖರ್, ಪ್ರಿಯಾ ಹೆಗ್ಡೆ , ರಘು ರಾಮನಕೊಪ್ಪ , ನೈದಿಲೆ ಶೈವ , ಬಾಲ ರಾಜವಾಡಿ , ಅಪೂರ್ವ ನಾಗರಾಜ್, ಅರುಣ್ ಕುಮಾರ್ , ರಘು ಪಾಂಡೇಶ್ವರ , ಸಂತೋಷ್ ನಂದಿವಾಡ, ಚಿಲ್ಲರ್ ಮಂಜು ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಚಿತ್ರಗಳು ಪ್ರೇಕ್ಷಕರನ್ನ ಬಹಳ ಬೇಗ ಸೆಳೆಯುತ್ತದೆ. ಅದರಲ್ಲೂ ಗರ್ಭಿಣಿಯರ ನಿಗೂಢ ಕೊಲೆಗಳ ಸುತ್ತ ಅನುಮಾನಗಳ ಹುತ್ತ ಎನ್ನುವ ಹಾಗೆ ಮೂರು ಜೋಡಿಗಳ ಕಥಾನಕದೊಳಗೆ ಎದುರಾಗುವ ಅನಾಮಧೇಯ ವ್ಯಕ್ತಿ ನೀಚ ಮನೋಭಾವದ ಕರಾಳ ಸತ್ಯದ ಒಳಗೆ ನೋವಿನ ಗುಟ್ಟು , ದ್ವೇಷದ ಕಿಚ್ಚು , ಕ್ರೂರತೆಯ ನರ್ತನದ ನಡುವೆ ಮುಗ್ಧರ ಸಾವು ನೋವಿನ ಸುಳಿಯಲ್ಲಿ ಕಳ್ಳ ಪೋಲಿಸ್ ಆಟಕ್ಕೆ ಸೂಕ್ತ ರಣತಂತ್ರವನ್ನು ರಚಿಸುವ ಹಾದಿಯಲ್ಲಿ ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜ ತಿಳಿಯುವುದು ಎಂಬ ಕಥಾನಕ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಉಸಿರು”.
ಜೀವನದಲ್ಲಿ ಓದಿ ಬೆಳೆಯುವ ವಯಸ್ಸಿನಲ್ಲಿ ತನ್ನ ಕುಟುಂಬಕ್ಕೆ ಎದುರಾಗುವ ತೊಂದರೆಗೆ ಸಿಲುಕಿ ಜೈಲು ಸೇರುವ ಯುವಕನಿಗೆ ಪೊಲೀಸ್ ಅಧಿಕಾರಿ (ಬಾಲ ರಾಜವಾಡಿ) ಎಚ್ಚರಿಕೆಯ ಜೊತೆ ಬುದ್ಧಿ ಮಾತನ್ನು ಹೇಳುತ್ತಾನೆ. ಹಲವು ವರ್ಷಗಳ ನಂತರ ಹೊರಬರುವ ಸೂರ್ಯ (ಅರುಣ್ ಕುಮಾರ್) ಒಬ್ಬ ವ್ಯಕ್ತಿಯ ಫೋಟೋ ಹಿಡಿದು ಅವನನ್ನು ಹುಡುಕಲು ಮುಂದಾಗುತ್ತಾನೆ. ಇದರ ನಡುವೆ ತನ್ನ ಅಪ್ಪ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಪರದಾಡುತ್ತಾನೆ. ಇದೆಲ್ಲದಕ್ಕೂ ಒಂದು ಫ್ಲಾಶ್ ಬ್ಯಾಕ್ ಕತೆಯು ಇರುತ್ತದೆ. ಇನ್ನು ಇನ್ಸ್ಪೆಕ್ಟರ್ ಮಗಳು ಸಿರಿ (ಅಪೂರ್ವ) ಕೂಡ ಸಾಥ್ ನೀಡುತ್ತಾ , ಸೂರ್ಯನನ್ನ ಪ್ರೀತಿಸಲು ಮುಂದಾಗುತ್ತಾಳೆ.
ಮಡಿಕೇರಿಯ ದಟ್ಟ ಅರಣ್ಯದ ಪರಿಸರಕ್ಕೆ ಬರುವ ನೂತನ ಇನ್ಸ್ಪೆಕ್ಟರ್ ರಾಜೀವ್ (ತಿಲಕ್) ಹಾಗೂ ಅವನ ಮಡದಿ ಐಶು (ಪ್ರಿಯ ಹೆಗಡೆ). ಆ ಪ್ರದೇಶದಲ್ಲಿ ಯಾವುದೇ ಕೊಲೆ , ದರೋಡೆ , ಡ್ರಗ್ಸ್ ದಂಧೆ ನಡೆದರೂ ಮೊದಲು ವಿಷಯ ತಿಳಿಯುವುದು , ಪೊಲೀಸ್ ಪೇದೆ ನಾರಾಯಣ (ರಘು ರಾಮನಕೊಪ್ಪ). ಹೊಸ ಇನ್ಸ್ಪೆಕ್ಟರ್ ಜೊತೆಗೆ ತನ್ನ ಪೊಲೀಸ್ ಸ್ಟೇಶನ್ ನ ಸರಹದ್ದಿನಲ್ಲಿ ಯಾವುದೇ ಘಟನೆ ನಡೆದರೂ , ತಾತ್ಸಾರದಿಂದ ಸುಮ್ಮನೆ ಇರುತ್ತಾ. ಇದರ ನಡುವೆ ಕೊಲೆ , ಡ್ರೆಸ್ ಮಾಫಿಯಾ ನಿರಂತರವಾಗಿ ಸಾಗುತ್ತದೆ.
ಇನ್ನು ಆ ಊರಿನಲ್ಲಿ ಯಾವುದಕ್ಕೂ ಜಗ್ಗದೆ ಬಾಲ್ಯದಿಂದಲೂ ಕ್ರೂರತೆಯಲ್ಲೇ ಬೆಳೆದ ರಾಕೆಟ್ ಹಾಗೂ ಸೈಮನ್ ಎಂಬ ಇಬ್ಬರು ಗೆಳೆಯರ ಚಟ , ಆರ್ಭಟ ಅತಿರೇಖಾವಾಗಿ ರುತ್ತದೆ. ಇದರ ನಡುವೆ ಸೈಮನ್ ಪ್ರೀತಿಸುವ ಹುಡುಗಿಯನ್ನ ಒತ್ತಾಯ ಮಾಡಿ ರಾಕೆಟ್ ಮುಂದೆ ನಿಂತು ಮದುವೆ ಮಾಡ್ಸುತ್ತಾನೆ. ಆಕೆ ಗರ್ಭಿಣಿಯಾದಾಗ ಅವನ ಸಂಭ್ರಮವೇ ಜೋರು, ನಂತರ ಎದುರಾಗುವ ಕರಾಳ ಸತ್ಯ ಬೇರೆದೇ ರೂಪ ನೀಡುತ್ತದೆ.
ಇನ್ನು ಇನ್ಸ್ಪೆಕ್ಟರ್ ರಾಜ್ ತನ್ನ ಪತ್ನಿ ಗರ್ಭಿಣಿಯಾದ ಸಂಭ್ರಮದಲ್ಲಿ ಇರುವಾಗಲೇ ಮತ್ತೊಂದು ಗರ್ಭಿಣಿಯ ಕೊಲೆ ಬಹಳ ಘೋರವಾಗಿ ನಡೆದಿರುತ್ತದೆ. ಇದೇ ಸಮಯಕ್ಕೆ ಇನ್ಸ್ಪೆಕ್ಟರ್ ರಾಜೀವ್ ಗೆ ತನ್ನ ಹೆಂಡತಿಯ ಬಗ್ಗೆ ನಿಮ್ಮ ಹೆಚ್ಚಾಗಿ ಆತಂಕ ಮೂಡುತ್ತದೆ. ಈ ಸರಣಿ ಗರ್ಭಿಣಿಯರ ಕೊಲೆ ರಹಸ್ಯ ಭೇದಿಸಲು ಹೊರಟಾಗ ಒಂದು ಪ್ರಬಲವಾದ ಸಂಖ್ಯೆಗಳು ಕೇಂದ್ರವಾಗಿ ಕಾಣುತ್ತದೆ. ಒಂದಕ್ಕೊಂದು ಕೊಂಡಿಯಂತೆ ಸಾಗುವ ಮೂರು ಜೋಡಿಗಳ ಕಥಾನಕವೂ ರೋಚಕ ತಿರುವುಗಳನ್ನ ತೆರೆದುಕೊಳ್ಳುತ್ತದೆ. ಅದು ಏನು… ಯಾಕೆ… ಎಂಬ ಪ್ರಶ್ನೆಗೆ ಉತ್ತರ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಒಂದು ಉತ್ತಮ ಚಿತ್ರವನ್ನು ನೀಡಲು ಹಣವನ್ನು ಹಾಕಿರುವ ನಿರ್ಮಾಪಕರ ಕರ್ಚು ತೆರೆಯ ಮೇಲೆ ಕಾಣುತ್ತದೆ. ಹೇಳಿಕೊಳ್ಳುವಂತಹ ಹೊಸತನ ಕಥೆಯಲ್ಲಿ ಏನು ಕಾಣುತ್ತಿಲ್ಲ , ಈ ಹಿಂದೆ ಬಂದಂತ ರಂಗಿತರಂಗ ಚಿತ್ರದ ಛಾಯೆ ನೆನಪಿಗೆ ಬರುತ್ತದೆ. ಇನ್ನು ನಿರ್ದೇಶಕ ಚಿತ್ರಕಥೆಯಲ್ಲಿ ಬಹಳಷ್ಟು ಹಿಡಿತ ಮಾಡಬೇಕಿತ್ತು , ದ್ವಿತೀಯ ಭಾಗ ಕುತೂಹಲದೊಂದಿಗೆ ನೋಡುವಂತಿದೆ. ಹಾಸ್ಯ ಸಂದರ್ಭಗಳು ಅನಗತ್ಯ ಎನ್ನುವಂತಿದೆ. ಗರ್ಭಿಣಿ ಸ್ತ್ರೀಯರ ಕೊಲೆಗಳ ಹಿಂದೆ ಅನಾಮಧೇಯನ ನೋವಿನ ಕಥೆ ವ್ಯಥೆ ಗಮನ ಸೆಳೆಯುತ್ತದೆ.
ತಾಯಿ ಮಗನ ಬಾಂಧವ್ಯ , ಗೆಳೆತನ , ಪ್ರೀತಿ , ದ್ವೇಷದ ಸುಳಿಯ ಜೊತೆಗೆ ಮುಂದಿನ ಅಧ್ಯಾಯಕ್ಕೂ ಕಥೆ ಸಾಗುವಂತೆ ಮಾಡಿದ್ದಾರೆ. ಇನ್ನು ಈ ಚಿತ್ರದ ಹೈಲೈಟ್ ಅಂದರೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಕರ ಕೈಚಳಕ , ಸಂಕಲನದ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ತಿಲಕ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಎರಡು ಶೇಡ್ ಗಳಲ್ಲಿ ನಟಿ ಪ್ರಿಯಾ ಹೆಗಡೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಹಾಗೆಯೇ ಯುವನಟ ಅರುಣ್ ಕುಮಾರ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಅನಾಮದೇಯನ ಪಾತ್ರ ಕೂಡ ಗಮನ ಸೆಳೆಯುವಂತೆ ಮೂಡಿ ಬಂದಿದೆ. ಇನ್ನು ಉಳಿದಂತೆ ಅಭಿನಯಿಸಿರುವ ಎಲ್ಲಾ ಯುವ ಪ್ರತಿಭೆಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಈ ಉಸಿರು ಚಿತ್ರವನ್ನು ಒಮ್ಮೆ ನೋಡುವಂತಿದೆ.