ಚಂದನವನದಲ್ಲಿ ಮತ್ತೊಂದು ಪ್ರೀತಿ -ಪ್ರೇಮದ ಸಿನಿಮಾ, “ಓಂ ಶಿವಂ” ಚಿತ್ರದ ಹಾಡುಗಳು ರೀಲಿಸ್
ಚಂದನವನದಲ್ಲಿ ಮತ್ತೊಂದು ಪ್ರೀತಿ , ಪ್ರೇಮದ ಕಥಾನಕ ಚಿತ್ರ ತೆರೆಯ ಮೇಲೆ ಬರಲು ಸಜ್ಜಾಗಿದೆ. ಹೊಸ ಪ್ರತಿಭೆಗಳು ಅಭಿನಯಿಸಿರುವ “ಓಂ ಶಿವಂ” ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಕಲಾವಿದರ ಭವನದಲ್ಲಿ ಅಚ್ಚುಕಟ್ಟಾಗಿ ಆಯೋಜನೆಗೊಂಡಿತ್ತು. ಈ ಚಿತ್ರದ ಸಿಡಿ ಬಿಡುಗಡೆ ಶುಭಾರಂಭಕ್ಕೆ ನಿರ್ಮಾಪಕರ ತಂದೆ ನಾಗರಾಜ್ , ತಾಯಿ ಲಕ್ಷ್ಮಿ ರವರು ಸೇರಿದಂತೆ ಅನೇಕ ಗಣ್ಯರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ತದನಂತರ ಚಿತ್ರದ ನಾಲ್ಕು ಹಾಡುಗಳನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಹಾಡುಗಳನ್ನು ವೀಕ್ಷಿಸಿದ ಚಿತ್ರರಂಗದ ಯುವ ಕಲಾವಿದರುಗಳಾದ ಗೌರಿಶಂಕರ್ , ಸೀರುಂಡೆ ರಘು, ದಿಶಾ ಪೂವಯ್ಯ, ನಿಕಿತಾ ಸ್ವಾಮಿ, ಸೇರಿದಂತೆ ಗಣ್ಯರು , ಸ್ನೇಹಿತರು ಹಾಗೂ ಸಂಬಂಧಿಕರು ಯುವ ಪ್ರತಿಭೆಗಳ ಕೆಲಸವನ್ನ ನೋಡಿ ಮೆಚ್ಚಿ ಸಂತೋಷವನ್ನು ವ್ಯಕ್ತಪಡಿಸಿದರು. ತದನಂತರ ಚಿತ್ರದ ಕುರಿತು ಮಾಹಿತಿ ನೀಡಲು ಚಿತ್ರತಂಡ ಮುಂದಾದರು.
ಈ ಚಿತ್ರದ ನಿರ್ಮಾಪಕ ಕೃಷ್ಣ ಕೆ. ಎನ್. ಮಾತನಾಡುತ್ತಾ ನನ್ನ 25 ವರ್ಷಗಳ ಕನಸು ಈಗ ನನಸಾಗಿದೆ. ನಾನು ಚಿತ್ರದಲ್ಲಿ ಅಭಿನಯಿಸಬೇಕು ಎಂದು ಆಸೆ ಪಟ್ಟಿದ್ದೆ. ಆಗ ಅದು ಈಡೇರಲಿಲ್ಲ , ಈಗ ನನ್ನ ಮಗ ಭಾರ್ಗವ ಕೃಷ್ಣ ನಾಯಕನಾಗಿ ಬೆಳ್ಳಿ ಪರದೆಗೆ ಬರುತಿದ್ದು , ನನ್ನ ಆಸೆ ಈಡೇರಿದೆ. ನಾನು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದೇನೆ. ಚಿತ್ರವನ್ನ ಬಹಳ ಅದ್ದೂರಿಯಾಗಿ ಮಾಡಿದ್ದು , ನಮ್ಮ ದೀಪಾ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದೇನೆ.
ಇಂದು ನಮ್ಮದೇ ಕ್ರಿಶ್ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಹೊರ ಬಂದಿದೆ. ನಮ್ಮ ಈ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ರವರು ಬರಬೇಕಿತ್ತು, ಕಾರಣಾಂತರಗಳಿಂದ ಬರ್ಲಿಲ್ಲ ಆದರೂ ಅವರ ಸಹಕಾರ ಆಶೀರ್ವಾದ ಸದಾ ನಮ್ಮ ತಂಡಕ್ಕೆ ಇದೆ. ಇದೆ ಸೆಪ್ಟೆಂಬರ್ 5ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೀತಿ , ಸಹಕಾರ ನಮ್ಮ ಮೇಲೆ ಇರಲಿ. ನಿರಂತರವಾಗಿ ಚಿತ್ರ ಮಾಡುವ ಉದ್ದೇಶ ನಮಗಿದೆ ಎಂದರು.
ನಾಯಕ ಭಾರ್ಗವ್ ಕೃಷ್ಣ ಮಾತನಾಡುತ್ತಾ ನಿರ್ದೇಶಕರು ಕಥೆ ಹೇಳಿದ ರೀತಿ ಬಹಳ ಇಷ್ಟವಾಯಿತು ಈ ಚಿತ್ರದಲ್ಲಿ ಲವ್ , ಆಕ್ಷನ್ , ಎಮೋಷನ್ ಸೇರಿದಂತೆ ಎಲ್ಲವೂ ಇದೆ. ಈ ಚಿತ್ರ ಆರಂಭಕ್ಕೂ ಮುನ್ನ ಎರಡು ತಿಂಗಳು ತರಬೇತಿಯನ್ನ ಪಡೆದು ಕೊಂಡು ಚಿತ್ರೀಕರಣಕ್ಕೆ ಮುಂದಾದೆ. ಇದೊಂದು ಡಿಫ್ರೆಂಟ್ ಜಾನರ್ ಚಿತ್ರ , ಆಕ್ಷನ್ ಸನ್ನಿವೇಶ ಬಹಳ ಸೊಗಸಾಗಿ ಬಂದಿದೆ. ನನ್ನ ಸಹ ನಟಿ , ಕಲಾವಿದರು ಹಾಗೂ ತಂತ್ರಜ್ಞರು ತುಂಬ ಸಹಕಾರ ನೀಡಿದ್ದಾರೆ. ನಮ್ಮ ತಂದೆ ಈ ಚಿತ್ರವನ್ನು ನಿರ್ವಹಿಸಿದ್ದಾರೆ. ನಮ್ಮಂತ ಯುವ ಪ್ರತಿಭೆಗಳನ್ನ ಹರಿಸಿ, ಬೆಳೆಸಿ ಎಂದು ಕೇಳಿಕೊಂಡರು.
ಹಾಗೆಯೇ ನಾಯಕಿ ವಿರಾನಿಕಾ ಶೆಟ್ಟಿ ಮಾತನಾಡುತ್ತಾ ಈ ಚಿತ್ರಕ್ಕೆ ನಾನು ಆಡಿಶನ್ ಮೂಲಕ ಸೆಲೆಕ್ಟ್ ಆದೆ. ಇದೊಂದು ಕ್ಯೂಟ್ ಲವ್ ಸ್ಟೋರಿ. ಅಂಜಲಿ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೀತಿಯ ವಿಚಾರದಲ್ಲಿ ಸಮಸ್ಯೆ ಆದಾಗ ನಾಯಕನಿಗೆ ಸಾಥ್ ನೀಡುತ್ತೇನೋ ಇಲ್ಲವೋ ಅನ್ನುವುದನ್ನು ಬಹಳ ಚೆನ್ನಾಗಿ ಚಿತ್ರಿಕರಿಸಿದ್ದಾರೆ. ಎರಡು ಸುಮಧುರ ಹಾಡು ನನ್ನ ಮೇಲೆ ಚಿತ್ರೀಕರಣ ಮಾಡಿರುವುದು ಬಹಳ ಖುಷಿಯಾಗಿದೆ. ನನ್ನ ನಟನೆಯನ್ನು ಸಮರ್ಥವಾಗಿ ನಿರ್ವಹಿಸಲು ಅವಕಾಶ ನೀಡಿದರು ನಿರ್ದೇಶಕರು. ನಿರ್ಮಾಪಕರು ನಮ್ಮನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ನಮ್ಮ ಚಿತ್ರವನ್ನು ನೋಡಿ ಸಪೋರ್ಟ್ ಮಾಡಿ ಎಂದರು.
ರಂಗಭೂಮಿ ಪ್ರತಿಭೆ ಸುಮಾರು 50 ನಾಟಕಗಳಲ್ಲಿ ಅಭಿನಯಿಸಿ 20 ನಾಟಕಗಳನ್ನು ನಿರ್ದೇಶನದ ಜೊತೆಗೆ ಚಿತ್ರರಂಗದಲ್ಲಿ 13 ವರ್ಷ ಅನುಭವ ಹೊಂದಿರುವ ಯುವ ನಿರ್ದೇಶಕ ಆಲ್ವಿನ್ ಮಾತನಾಡುತ್ತಾ ಓಂ ಶಿವಂ ಅನ್ನೋ ಟೈಟಲ್ಲೇ ಇಟ್ಟಿರುವುದು ಒಂದು ಕಾರಣ ಇದೆ. ಯಾಕಂದ್ರೆ ಈ ಚಿತ್ರದ ನಾಯಕನ ಹೆಸರು ಶಿವ. ಈ ಚಿತ್ರದ ಶೀರ್ಷಿಕೆ ಗೀತೆ ಶಿವನ ಕುರಿತಾದ ಸಂಸ್ಕೃತ ಪದಗಳಲ್ಲಿ ಹೊರಬಂದಿದ್ದು ಎಲ್ಲರೂ ಇಷ್ಟಪಟ್ಟಿದ್ದಾರೆ. ಒಂದೊಂದು ಹಾಡು ಒಂದೊಂದು ರೀತಿ ವಿಭಿನ್ನವಾಗಿದೆ. ಇದೊಂದು ಲವ್ , ಆಕ್ಷನ್ ಕಂಟೆಂಟ್ ಇರುವ ಚಿತ್ರವಾಗಿದ್ದು , ಇದರಲ್ಲಿ ಆನ್ಲೈನ್ ಮಾಫಿಯಾ ಹಾಗೂ ಡ್ರಗ್ಸ್ ದಂಧೆಯ ಸೂಕ್ಷ್ಮ ವಿಚಾರವು ಇರಲಿದೆಯಂತೆ. ಈ ಚಿತ್ರವನ್ನು ಬೆಂಗಳೂರು , ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ.
ನಿರ್ಮಾಪಕರ ಸಹಕಾರ ಇಂದು ಈ ಚಿತ್ರ ಇಷ್ಟು ಉತ್ತಮವಾಗಿ ಮೂಡಿ ಬಂದಿದೆ. ಮೊದಲು ನಾವು ಕನ್ನಡದಲ್ಲಿ ರಿಲೀಸ್ ಮಾಡಿ ನಂತರ ತಮಿಳು , ತೆಲುಗು ಭಾಷೆಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ. ಈಗ ಬಿಡುಗಡೆ ಆಗಿರುವ ನಮ್ಮ “ಓಂ ಶಿವಂ” ಚಿತ್ರದ ಎಲ್ಲಾ ಹಾಡುಗಳನ್ನು ನೋಡಿ ಪ್ರೋತ್ಸಾಹಿಸಿ , ನಿಮ್ಮ ಸ್ನೇಹಿತರಿಗೂ ತಿಳಿಸಿ, ಸೆಪ್ಟಂಬರ್ 5 ರಂದು ನಮ್ಮ ಚಿತ್ರ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ವಿಜಯ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಈ ಚಿತ್ರದ ನಾಲ್ಕು ಹಾಡುಗಳಿಗೆ ವಿಜಯ್ ಯಾರ್ಡ್ಲೆ ಸಂಗೀತ ನೀಡಿದ್ದು ಸಾಹಿತ್ಯವನ್ನು ವಿ. ನಾಗೇಂದ್ರ ಪ್ರಸಾದ್ , ಕವಿರಾಜ್ , ಗೌಸ್ ಬೀರ್ ಹಾಗೂ ಸಂಸ್ಕೃತ ಶಿವನ ಹಾಡನ್ನು ತೆಲುಗಿನ ಸಾಹಿತಿ ಶ್ರೀ ರಾಮ್ ಬರೆದಿದ್ದಾರೆ. ಅದೇ ರೀತಿ ಯುವ ಪ್ರತಿಭೆಗಳಿಗೆ ಹಾಡಲು ಅವಕಾಶವನ್ನು ನೀಡಿದ್ದಾರೆ. ಹಾಗೆ ಈ ಚಿತ್ರಕ್ಕೆ ಕೌರವ ವೆಂಕಟೇಶ್ ಹಾಗೂ ವೈಲೆಂಟ್ ವೇಲು ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದಾರೆ.
ಇನ್ನು ಛಾಯಾಗ್ರಾಹಕ ವೀರೇಶ್ ಹಾಗೂ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿರುವಂತಹ ವರ್ಧನ್ ತೀರ್ಥಳ್ಳಿ , ಉಗ್ರಂ ರವಿ, ಚೇತನ , ರಜನಿ ಸಾಹಿತ್ಯ , ಗಾಯಕರಾದ ಸಾಯಿ ರಾಮ್ , ನಜೀರ್ ಬಾನು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಚಿತ್ರತಂಡ ಎಲ್ಲರಿಗೂ ಪುಟ್ಟ ಕಿರು ಕಾಣಿಕೆ ನೀಡುವ ಮೂಲಕ ಸನ್ಮಾನಿಸಿತು. ಇನ್ನು ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿದ್ದು ನಟರಾದ ಕಾಕ್ರೋಜ್ ಸುಧೀ, ರವಿ ಕಳೆ, ಯಶ್ ಶೆಟ್ಟಿ , ನಟಿಯರಾದ ಅಪೂರ್ವ, ಲಕ್ಷ್ಮೀ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಂಕಲನ ಸತೀಶ್ ಚಂದ್ರ , ಮೇಕಪ್ ಕುಮಾರ್ ವಸ್ತ್ರಲಂಕಾರ , ಮಲ್ಲಿಕಾರ್ಜುನ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಅದ್ದೂರಿ ಪ್ರಚಾರದ ಮೂಲಕ ಸೆಪ್ಟೆಂಬರ್ 5 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.