ಪ್ರೇಮಿಗಳಿಗೆ ಕಾಡೆ ಕಂಟಕ.. “ಜಂಗಲ್ ಮಂಗಲ್” (ಚಿತ್ರವಿಮರ್ಶೆ- ರೇಟಿಂಗ್ : 3.5/5)b
ರೇಟಿಂಗ್ : 3.5/5
ಚಿತ್ರ : ಜಂಗಲ್ ಮಂಗಲ್
ನಿರ್ದೇಶಕ : ರಕ್ಷಿತ್ ಕುಮಾರ್
ನಿರ್ಮಾಪಕ : ಪ್ರಜೀತ್ ಹೆಗಡೆ
ಸಂಗೀತ : ಪ್ರಸಾದ್ ಕೆ ಶೆಟ್ಟಿ , ಪೂರ್ಣ ಚಂದ್ರ ತೇಜಸ್ವಿ
ಛಾಯಾಗ್ರಹಣ : ವಿಷ್ಣು ಪ್ರಸಾದ್
ತಾರಾಗಣ : ಯಶ್ ಶೆಟ್ಟಿ , ಹರ್ಷಿತಾ ರಾಮಚಂದ್ರ , ಉಗ್ರಂ ಮಂಜು , ಬಲ ರಾಜವಾಡಿ, ದೀಪಕ್ ರೈ ಪಾಣಾಜೆ ಹಾಗೂ ಮುಂತಾದವರು…
ಸಾಮಾನ್ಯವಾಗಿ ಬದುಕಿನಲ್ಲಿ ಯಾರು ಏನೇ ಪ್ಲಾನ್ ಮಾಡಿದರೂ ವಿಧಿಯ ಆಟದ ಮುಂದೆ ಏನು ನಡೆಯುವುದಿಲ್ಲ. ನಮ್ಮ ಇಷ್ಟಾನುಸಾರ ಆಲೋಚನೆ ಮಾಡುತ್ತಾ ಹೋದರೂ ಕೂಡ ಸಮಯ , ಸಂದರ್ಭ ಎಲ್ಲದಕ್ಕೂ ಉತ್ತರ ನೀಡುತ್ತಾ ಹೋಗುತ್ತದೆ. ಕರೋನ ಸಂದರ್ಭ ಇಡೀ ದೇಶವೇ ಲಾಕ್ ಡೌನ್ ಎದುರಿಸಿದ್ದ ಪರಿಸ್ಥಿತಿ ತಿಳಿದೇ ಇದೆ.
ಅಂತದ್ದೇ ಸಮಯದಲ್ಲಿ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ನಡುವೆ ಇಬ್ಬರು ಪ್ರೇಮಿಗಳು ಕಾಡಿನೊಳಗೆ ಸಿಲುಕಿ ಎದುರಿಸುವ ಗಂಡಾಂತರದ ಸುತ್ತ ಕೊಲೆಯ ನಿಗೂಢ ರಹಸ್ಯವೇ ಇಡೀ ಚಿತ್ರದ ಕೇಂದ್ರಬಿಂದುವಾಗಿ ಗಮನ ಸೆಳೆಯುವ ನಿಟ್ಟಿನಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜಂಗಲ್ ಮಂಗಲ್”. ದಟ್ಟ ಅರಣ್ಯದ ಊರಿನ ಶಾಲೆ ಒಂದರ ಶಿಕ್ಷಕಿ ದಿವ್ಯ (ಹರ್ಷಿತಾ).
ಕುಡುಕ ತಂದೆ , ಪ್ರೀತಿಯ ತಾಯಿ , ಮೂವರು ತಂಗಿಯರ ಜೊತೆ ಬದುಕು ನಡೆಸುವ ಹುಡುಗಿ. ತನ್ನದೇ ಸ್ವಂತ ಉದ್ಯೋಗ ಮಾಡಲು ಐಸ್ ಕ್ರೀಮ್ ಪಾರ್ಲರ್ ವ್ಯಾಪಾರ ಮಾಡುವ ಪ್ರವೀಣ (ಯಶ್ ಶೆಟ್ಟಿ). ಕರೋನ ಹಾವಳಿ , ಇಡೀ ದೇಶದ ಮೂಲೆ ಮೂಲೆ ಊರುಗಳು ಕೂಡ ಲಾಕ್ಡೌನ್ ಸಂಕಷ್ಟ. ವ್ಯಾಪಾರವಿಲ್ಲದೆ ಕಂಗಾಲಾಗುವ ಪ್ರವೀಣ ತನ್ನ ಪ್ರೀತಿಯ ಗೆಳತಿ ಆಮ್ಮಿ ”ದಿವ್ಯ”ಳನ್ನ ಭೇಟಿ ಮಾಡಲು ಪರದಾಡುತ್ತಾನೆ.
ಹೇಗೋ ಒಪ್ಪಿಸಿ ಬೈಕ್ ನಲ್ಲಿ ಅಮ್ಮಿಯನ್ನ ಕಾಡಿನೊಳಗೆ ಕರೆದುಕೊಂಡು ಹೋಗುತ್ತಾನೆ ಪ್ರವೀಣ. ಇನ್ನು ಕಾಡಿನೊಳಗೆ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಪ್ರಾಣಿಗಳ ಬೇಟೆ , ಮರಗಳತನ ಮಾಡುವ ಬಾಬು (ಉಗ್ರಂ ಮಂಜು) ಗೆ ಆಮ್ಮಿಯ ಮೇಲೆ ಕಣ್ಣು , ಬಲವಂತವಾಗಿ ಮದುವೆ ಆಗಲು ನಿರ್ಧಾರ ಮಾಡುತ್ತಾನೆ. ಇದರ ನಡುವೆ ಆಮ್ಮಿಯ ಸೋದರ ಮಾವ ಜಗ್ಗು (ಬಲ ರಾಜವಾಡಿ) ಗೂ ಬಾಬು ಗೂ ಕಳ್ಳ ಸಾಗಾಣಿಕೆಯ ವಿಚಾರದಲ್ಲಿ ಕೊಲ್ಲುವಷ್ಟು ದ್ವೇಷ.
ಮಗಳ ನೋವು , ಕಷ್ಟ ತಿಳಿದರೂ ಏನು ಮಾಡಲಾಗದಂತಹ ಕುಡುಕ ತಂದೆಗೆ ಬಾಬು ಮೇಲೆ ಇನ್ನಿಲ್ಲದ ಕೋಪ. ಇನ್ನು ಕಾಡಿನೊಳಗೆ ಹೋದ ಪ್ರೇಮಿಗಳನ್ನ ನೋಡಿದ ವ್ಯಕ್ತಿ ಒಬ್ಬ ಗ್ರಾಮದ ಹುಡುಗರಿಗೆ ತಿಳಿಸುತ್ತಾನೆ. ಇದರಿಂದ ಹೊರಬರಲು ಪ್ರವೀಣ ಮಾಡುವ ಪ್ಲಾನ್ ಒಂದಡೆಯಾದರೆ , ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಆಮ್ಮಿಯ ಎದುರು ವ್ಯಕ್ತಿ ಒಬ್ಬ ಪ್ರತ್ಯಕ್ಷವಾಗಿ ಬಲತ್ಕಾರ ಮಾಡಲು ಮುಂದಾದಾಗ ಗುಂಡೇಟಿನಿಂದ ಆ ವ್ಯಕ್ತಿ ಸಾಯುತ್ತಾನೆ. ಸತ್ತವನು ಯಾರು… ಗುಂಡು ಹೊಡೆದಿದ್ದು ಯಾರು… ಪ್ರೇಮಿಗಳ ಪಾಡು ಏನು…
ಕ್ಲೈಮಾಕ್ಸ್ ಸತ್ಯ ಏನು… ಇದಕ್ಕೆಲ್ಲ ಉತ್ತರ ಜಂಗಲ್ ಮಂಗಲ್ ಚಿತ್ರ ನೋಡಬೇಕು.
ನಿರ್ದೇಶಕ ರಕ್ಷಿತ್ ಕುಮಾರ್ ಲಾಕ್ಡೌನ್ ಸಮಯದ ನಡುವೆ ಪ್ರೇಮಿಗಳ ಪರದಾಟ , ಕಾಡಿನ ದಂದೆಯ ನಡುವೆ ನಿಗೂಢ ಕೊಲೆಯ ಹಿಂದಿರುವ ರಹಸ್ಯವನ್ನು ರೋಚಕವಾಗಿ ತೆರೆ ಮೇಲೆ ತಂದಿರುವ ಪ್ರಯತ್ನ ಉತ್ತಮವಾಗಿದೆ. ಪಾತ್ರಧಾರಿಗಳನ್ನು ಹಾಗೂ ತಂತ್ರಜ್ಞ ವರ್ಗವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ಕಮರ್ಷಿಯಲ್ ಸಾಂಗ್ , ಫೈಟ್ ಇಲ್ಲದಿದ್ದರೂ ಮರ್ಡರ್ ಕಥಾನಕವನ್ನು ಕುತೂಹಲಕಾರಿಯಾಗಿ ಹೇಳುತ್ತಾ ವಿಧಿಯ ಆಟದ ಮುಂದೆ ಏನು ಇಲ್ಲ ಎಂಬುದನ್ನು ತಿಳಿಸಿದ್ದಾರೆ.
ನಿರ್ಮಾಪಕರನ್ನ ಅಚ್ಚುಕಟ್ಟಾಗಿ ಬಳಸಿಕೊಂಡಂತಿದೆ. ಇನ್ನು ಛಾಯಾಗ್ರಾಹಣ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ಗಳು. ನಟ ಯಶ್ ಶೆಟ್ಟಿ ನೈಜಕ್ಕೆ ಹತ್ತಿರವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ ಊರಿನ ಪರಿಸರ ವೇಶಭೂಷಣಕ್ಕೆ ಸೂಕ್ತ ವ್ಯಕ್ತಿಯಾಗಿ ಮಿಂಚಿದ್ದಾರೆ. ಇನ್ನು ನಟಿ ಹರ್ಷಿತಾ ರಾಮಚಂದ್ರ ಕೂಡ ಬಹಳ ಅದ್ಭುತವಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತಷ್ಟು ಉತ್ತಮ ಅವಕಾಶ ಸಿಗುವ ಲಕ್ಷಣ ಕಾಣುತ್ತದೆ.
ಇನ್ನು ಉಗ್ರಂ ಮಂಜು ಸಿಕ್ಕ ಅವಕಾಶವನ್ನ ಸಮರ್ಥವಾಗಿ ನಿರ್ವಹಿಸಿ , ಆರ್ಭಟಿಸುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆಯೇ ನಾಯಕಿಯ ತಂದೆಯ ಪಾತ್ರಧಾರಿ ಹಾಗೂ ಮಾವನ ಪಾತ್ರದಲ್ಲಿ ಬಾಲ ರಾಜವಾಡಿ ಚಿತ್ರದ ತಿರುವಿಗೆ ಪ್ರಮುಖ ಅಸ್ತ್ರವಾಗಿದ್ದಾರೆ. ಜ್ಯೋತಿಷಿ ಪಾತ್ರ ಸೇರಿದಂತೆ ಉಳಿದ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಲವ್, ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿ ಇಷ್ಟಪಡುವ ಸಿನಿಪ್ರಿಯರ ಜೊತೆ ಕುತೂಹಲಕಾರಿ ಕಥಾನಕವಾದ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.