Cini NewsMovie ReviewSandalwood

ನಿಷ್ಕಲ್ಮಶ ಪ್ರೀತಿಯಲ್ಲಿ ಬಾಂಧವ್ಯದ ಸೆಳೆತ : ‘ಕಾಲೇಜ್ ಕಲಾವಿದ’ ಚಿತ್ರವಿಮರ್ಶೆ (ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಕಾಲೇಜ್ ಕಲಾವಿದ
ನಿರ್ದೇಶಕ : ಸಂಜಯ್ ಮಳವಳ್ಳಿ
ನಿರ್ಮಾಪಕ : ತರುಣ್ ಶರ್ಮ
ಸಂಗೀತ : ಸೂರಜ್ ಜೋಯಿಸ್
ಛಾಯಾಗ್ರಹಣ : ಆನಂದ್ ಸುಂದರೇಶ
ತಾರಾಗಣ : ಆರಾವ್ ಸೂರ್ಯ, ಚೈತ್ರ ಲೋಕನಾಥ್ , ಹರಿಣಿ ಶ್ರೀಕಾಂತ್, ರಮೇಶ್ ಭಟ್, ಹುಲಿ ಕಾರ್ತಿಕ್ ಹಾಗೂ ಮುಂತಾದವರು…

ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಅಂತದ್ದೇ ಸ್ಟೂಡೆಂಟ್ಸ್ ಲೈಫ್ ಕಥೆಯ ಮೂಲಕ ಕಾಲೇಜ್ ವಿದ್ಯಾರ್ಥಿಗಳ ತುಂಟಾಟ , ತರಲೆ , ಗಲಾಟೆ , ಪ್ರೀತಿ , ಸ್ನೇಹದ ನಡುವೆ ಗಾಂಜಾ ಚಟಕ್ಕೆ ಸಿಲುಕಿದವರ ಗತಿ, ಮನೆಯವರ ಪರದಾಟ ಹೀಗೆ ಒಂದಷ್ಟು ಘಟನೆಗಳ ರೋಚಕ ತಿರುವುನೊಂದಿಗೆ ಪ್ರೀತಿ , ಸಂಬಂಧಗಳ ಬೆಸುಗೆಯೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕಾಲೇಜ್ ಕಲಾವಿದ”.

ತಾಯಿಯ (ಹರಣಿ ಶ್ರೀಕಾಂತ್) ಮುದ್ದಿನ ಮಗ ಆರ್ಯ (ಆರವ್ ಸೂರ್ಯ) ತನ್ನ ಚಿತ್ರಕಲೆ ಜೊತೆ ಕಾಲೇಜಿನಲ್ಲಿ ತನ್ನದೇ ಗೆಳೆಯರ ಬಳಗದ ಜೊತೆ ಒಡನಾಟ. ಅದೇ ಕಾಲೇಜಿಗೆ ದೂರದ ಊರಿಂದ ಬರುವ ಸುಂದರ ಬೆಡಗಿ ಸಾರಿಕಾ (ಚೈತ್ರ ಲೋಕನಾಥ್). ಮೊದಲ ನೋಟದಲ್ಲಿ ಆರ್ಯ ನನ್ನ ಸೆಳೆಯುವ ಸಾರಿಕಾ. ಇನ್ನು ಗೆಳೆಯ ಹುಲಿ ಕಾರ್ತಿಕ್ ಹಾಗೂ ಸ್ನೇಹಿತರೆ ಮೂಲಕ ಇವರಿಬ್ಬರ ಸ್ನೇಹ , ಸಲುಗೆ , ಪ್ರೀತಿಯ ಕಡೆ ವಾಲುತ್ತದೆ.

ತಂದೆ(ರಮೇಶ್ ಭಟ್ )ನ ಪ್ರೀತಿಯ ಮಗಳು ಸಾರಿಕಾಗೆ ಕೋಪಿಷ್ಟ ಅಣ್ಣ (ತರುಣ್ ಕುಮಾರ್ ಶರ್ಮಾ) ನ ಬೆಂಬಲ. ಇನ್ನು ಕಾಲೇಜಿನಲ್ಲಿ ಮತ್ತೊಂದು ಸೀನಿಯರ್ ಗ್ಯಾಂಗ್ ಡ್ರಗ್ಸ್ ಸಪ್ಲೈ ಮಾಡುತ್ತಾ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುತ್ತಾರೆ. ಇದರ ನಡುವೆ ಈ ಎರಡು ಜೋಡಿಗಳು ತಮ್ಮ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಹಂತದಲ್ಲಿ ಕಾಣದ ತಿರುವು ಎದುರಾಗಿ ಆರ್ಯ ಡ್ರಗ್ಸ್ ಜಾಲದಲ್ಲಿ ಪೊಲೀಸ್ ಕಸ್ಟಡಿ ಸೇರುವಂತಾಗುತ್ತದೆ.

ಇದರಿಂದ ಆರ್ಯ ಹಾಗೂ ಸಾರಿಕಾ ದೂರವಾಗುತ್ತಾರೆ. ವಿಧಿಯ ಆಟದಲ್ಲಿ ಸಾರಿಕಾ ಒಂದು ಕಣ್ಣನ್ನ ಕಳೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಏರಿಳಿತಗಳು ಇವರಿಬ್ಬರ ಬದುಕಿನಲ್ಲಿ ಹೇಗೆ ಆಟವಾಡುತ್ತದೆ. ಇದರಿಂದ ಸತ್ಯದ ಸಂಗತಿ ಹೊರಬರುತ್ತಾ… ಇಲ್ಲವಾ.. ಇವರ ಭವಿಷ್ಯ ಏನು..? ಸಂಬಂಧದ ನಂಟು ಏನಾಗುತ್ತೆ ಎಂಬ ವಿಚಾರ ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನ ನೋಡಬೇಕು.

ಈ ಚಿತ್ರದ ನಿರ್ದೇಶಕ ಸಂಜಯ್ ತನ್ನ ಪ್ರಥಮ ಪ್ರಯತ್ನದಲ್ಲಿ ಕಾಲೇಜ್ ಲೈಫ್ ನ ತುಂಟಾಟ , ತರ್ಲೆ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಡ್ರಗ್ಸ್ ವಿಚಾರವನ್ನು ಸೂಕ್ಷ್ಮವಾಗಿ ಹೇಳುವುದರ ಜೊತೆಗೆ ಸಂಬಂಧಗಳ ಮೌಲ್ಯ , ತಂದೆ ತಾಯಿಯ ಪ್ರೀತಿಯ ಸೆಳೆತವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಿಬೇಕಿತ್ತು ಅನಿಸುತ್ತದೆ.

ಆದರೂ ಚಿತ್ರ ಜೋಶ್ ನಿಂದ ಕೂಡಿದೆ. ನಿರ್ಮಾಪಕ ತರುಣ್ ಕುಮಾರ್ ಶರ್ಮ ಹಣ ಹಾಕೋದರ ಜೊತೆಗೆ ನಾಯಕಿಯ ಅಣ್ಣನ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದಾರೆ. ಸಂಗೀತ ಗಮನಸೆಳೆದಿದ್ದು, ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಛಾಯಾಗ್ರಾಹಕರ ಕೈಚಳಕ ಸೊಗಸಾಗಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ. ನಟ ಅರವ್ ಸೂರ್ಯ ಒಬ್ಬ ಸ್ಕೆಚ್ ಆರ್ಟಿಸ್ಟ್ ಆಗಿದ್ದು , ಕಾಲೇಜು ವಿದ್ಯಾರ್ಥಿಯ ಪಾತ್ರಕ್ಕೂ ಜೀವ ಕೊಟ್ಟಿದ್ದಾರೆ. ಸ್ಕ್ರೀನ್ ಮೇಲೆ ಲವಲವಿಕೆಯಿಂದ ಸುಂದರವಾಗಿ ಕಾಣುವ ಈ ಯುವ ಪ್ರತಿಭೆಗೆ ಮುಂದೆ ಉಜ್ವಲ ಭವಿಷ್ಯವಿದೆ ಅನಿಸುತ್ತದೆ.

ಇನ್ನು ನಾಯಕಿಯ ಪಾತ್ರದಾರಿ ಚೈತ್ರ ಲೋಕನಾಥ್ ಕೂಡ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಇನ್ನು ನಾಯಕನ ತಾಯಿಯ ಪಾತ್ರದಾರಿ ಹರಿಣಿ ಶ್ರೀಕಾಂತ್ ಚಿಕ್ಕ ಪಾತ್ರವಾದರೂ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಅದೇ ರೀತಿ ನಾಯಕಿಯ ತಂದೆಯ ಪಾತ್ರಧಾರಿ ರಮೇಶ್ ಭಟ್ ಮನ ಸೆಳೆಯುವಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಗೆಳೆಯನಾಗಿ ಹುಲಿ ಕಾರ್ತಿಕ್ ಕಾಮಿಡಿ ಪಂಚಿಂಗ್ ಡೈಲಾಗ್ ಸೆಳೆಯುತ್ತದೆ. ಗೆಳತಿಯ ಪಾತ್ರಧಾರಿ ದೊಡ್ಡಮ್ಮ (ಪುಟ್ಟಿ) ಪಾತ್ರ ಕೂಡ ಗಮನ ಸೆಳೆಯುತ್ತದೆ. ಇನ್ನು ಬಹಳಷ್ಟು ಯುವ ಪ್ರತಿಭೆಗಳು ಈ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇದೊಂದು ಪ್ರೇಮಮಯ ಚಿತ್ರವಾಗಿದ್ದು, ಮ್ಯೂಸಿಕಲ್ ಜರ್ನಿರುವ ಈ ಚಿತ್ರದಲ್ಲಿ ಡ್ರಗ್ಸ್ ವಿಚಾರ , ಕಾಲೇಜು ವಿದ್ಯಾರ್ಥಿಗಳ ಸ್ನೇಹ , ಪ್ರೀತಿ , ಸಂಬಂಧ , ಹಾಸ್ಯ , ಫೈಟ್ ಸೇರಿದಂತೆ ಎಲ್ಲಾ ಅಂಶಗಳು ಒಳಗೊಂಡಿದ್ದು, ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದೆ.

error: Content is protected !!