ಪ್ರೇಮಿಗಳಿಗೆ ಕಾಡೆ ಕರಾಳ…”ದಿ” ಚಿತ್ರವಿಮರ್ಶೆ (ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : “ದಿ”
ನಿರ್ದೇಶಕ : ವಿನಯ್ ವಾಸುದೇವ್
ನಿರ್ಮಾಣ : ವಿ.ಡಿ.ಕೆ ಸಿನಿಮಾಸ್
ಸಂಗೀತ : ಯು.ಎಂ.ಸ್ಟೀವನ್
ಛಾಯಾಗ್ರಹಣ : ಅಲೆನ್ ಭರತ್
ತಾರಾಗಣ : ವಿನಯ್ ವಾಸುದೇವ್, ದಿಶಾ ರಮೇಶ್,
ಹರಿಣಿ ಶ್ರೀಕಾಂತ್, ಬಾಲ ರಾಜವಾಡಿ , ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್ ಹಾಗೂ ಮುಂತಾದವರು…
ಪ್ರತಿಯೊಬ್ಬರಿಗೂ ಬದುಕಿನಲ್ಲಿ ಜೀವ ಹಾಗೂ ಜೀವನದ ಬೆಲೆಯ ಅರಿವು ಬಹಳ ಮುಖ್ಯ. ಇದರ ನಡುವೆ ಸಂಬಂಧ , ಸ್ನೇಹ , ಪ್ರೀತಿ , ನೋವು , ನಲಿವಿನ ಬುತ್ತಿ ತುಂಬಿಕೊಂಡಿರುತ್ತದೆ. ಇಲ್ಲೊಂದು ನಿಷ್ಕಲ್ಮಶ ಪ್ರೀತಿಯ ಜೋಡಿಯ ಬದುಕು , ಬವಣೆಯ ಪಯಣದಲ್ಲಿ ಕಾಡು ತೋರಿಸುವ ಕರಾಳ ಹಾದಿ ಏನೆಲ್ಲಾ ಸೃಷ್ಟಿ ಮಾಡುತ್ತದೆ ಎಂಬುದನ್ನು ರೋಮಾಂಚನಕಾರಿಯಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನದ ಫಲವಾಗಿ ಈ ವಾರ ಬಂದಿರುವಂತಹ ಚಿತ್ರ “ದಿ”.
ರಿಟೈರ್ಡ್ ಫಾರೆಸ್ಟ್ ರೇಂಜ್ ಆಫೀಸರ್ ನಾರಾಯಣ್ (ಬಾಲರಾಜವಾಡಿ) ಹಾಗೂ ಡಾಕ್ಟರ್ ಪದ್ಮ (ಹರಿಣಿ ಶ್ರೀಕಾಂತ್) ಸಿಕ್ಕ ಅನಾಥ ಮಗು ದೀಪಕ್ (ವಿನಯ್ ವಾಸುದೇವ್) ಅವರ ಆಸರೆಯಲ್ಲಿ ಬೆಳೆದು ವನ್ಯಪ್ರಿಯ , ಪ್ರಾಣಿ ಮನಶ್ಯಾಸ್ತ್ರಜ್ಞ , ಟ್ರಕಿಂಗ್ , ಫೋಟೋಗ್ರಾಫಿ ಮಾಡುವುದು ಆತನ ಕೆಲಸ.
ಮದುವೆಯ ವಿಚಾರವಾಗಿ ಅಪ್ಪನ ಒಪ್ಪಿಗೆ ಇಲ್ಲದಿದ್ದರೂ ಪ್ರೀತಿಸಿದ ಹುಡುಗಿ ದಿವ್ಯ (ದಿಶಾ ರಮೇಶ್) ಳನ್ನ ಮದುವೆ ಮಾಡಿಕೊಳ್ಳುತ್ತಾನೆ. ಬೇಸರದ ನಡುವೆಯೂ ಮಗನ ಇಷ್ಟಕ್ಕೆ ಒಪ್ಪುವ ತಂದೆ ತಾಯಿ.ನವ ಜೋಡಿ ವಿಹಾರಕ್ಕಾಗಿ ದಟ್ಟ ಕಾಡಿನೊಳಗೆ ಹೋಗಲು ನಿರ್ಧರಿಸುತ್ತಾರೆ. ಇವರ ಅನುಕೂಲಕ್ಕೆ ಮತ್ತೊಬ್ಬ ಫಾರೆಸ್ಟ್ ಆಫೀಸರ್ ಕಾರ್ತಿಕ್ (ನಾಗೇಂದ್ರ ಅರಸ್) ಸಹಾಯ ಪಡೆಯುವ ನಾರಾಯಣ. ಇದರ ನಡುವೆ ಕಾಡಿನೊಳಗೆ ಪ್ರಾಣಿ ಹಂತಕರ ತಂಡ ಒಂದೆಡೆಯಾದರೆ , ಕಾಡೆ ದೇವರೆಂದು ಪೂಜಿಸುವ ಕಾಡಿನ ಮಂದಿ ಬದುಕು ಮತ್ತೊಂದೆಡೆ.
ಸುಂದರ ಪರಿಸರದ ಸೊಬಗನ್ನ ಸವಿಯುತ್ತಾ ದೀಪಕ್ ತನ್ನ ಮುದ್ದಾದ ಹೆಂಡತಿ ಫೋಟೋ ತೆಗೆಯುವಾಗ ತುದಿಯಿಂದ ದಿವ್ಯ ಪ್ರಪಾತಕ್ಕೆ ಬೀಳುತ್ತಾಳೆ. ಆಕೆಯನ್ನು ರಕ್ಷಿಸಲು ತಾನು ಮೇಲಿಂದ ಬೀಳುತ್ತಾನೆ. ದಟ್ಟ ಅರಣ್ಯ, ಪ್ರಾಣಿಗಳ ಪ್ರದೇಶವಾಗಿದ್ದು , ಮುಂದೇನು ಎಂಬ ಆತಂಕದಲ್ಲಿ ಅಧಿಕಾರಿ ಮನೆಯವರಿಗೆ ವಿಷಯ ತಿಳಿಸುತ್ತಾನೆ. ಈ ಜೋಡಿಯ ಜೀವ ಇದೆಯೋ.. ಇಲ್ಲವೋ..
ಕಾಡು ಪ್ರಾಣಿಗಳಿಗೆ ಆಹಾರವೇ.. ಮನೆಯವರ ನೋವು.. ಪೊಲೀಸರ ಹುಡುಕಾಟ.. ಕ್ಲೈಮಾಕ್ಸ್ ಉತ್ತರ ಏನು… ಇದಕ್ಕೆಲ್ಲ ಉತ್ತರ “ದಿ” ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಹಾಗೂ ನಟ ಇಡೀ ಕಾಡನ್ನೇ ಪ್ರಮುಖ ಕೇಂದ್ರವಾಗಿ ಬಳಸಿಕೊಂಡಿದ್ದಾರೆ. ಅನಾಥ ಹುಡುಗನ ಸಂಬಂಧ , ಬಾಂಧವ್ಯದ ನಡುವೆ ಪ್ರೀತಿಯ ಬೆಸುಗೆಯ ಸಂಭ್ರಮದಲ್ಲಿ ವಿಧಿಯ ಆಟ ಏನು ಎಂಬುದನ್ನು ಬಹಳ ಸರಳವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಪ್ರೀತಿಗೆ ಸಾವಿಲ್ಲ ಎಂಬುದನ್ನು ಹೇಳುವುದರ ಜೊತೆಗೆ ಸ್ನೇಹ , ಸಂಬಂಧದ ಮೌಲ್ಯವನ್ನು ತೋರಿದ್ದಾರೆ. ಗ್ರಾಫಿಕ್ ನಲ್ಲಿ ಮೂಡಿ ಬರುವ ಕರಡಿ ಫೈಟ್ , ಆನೆ , ಹಾಗೂ ಸೇರಿದಂತೆ ಹಲವು ದೃಶ್ಯಗಳ ಪ್ರಯತ್ನ ಉತ್ತಮವಾಗಿದ್ದರೂ ನೈಜ್ಯತೆಯ ಕೊರತೆ ಕಾಣುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಹಾಡುಗಳಿಗೆ ಹೆಚ್ಚು ಒತ್ತು ಕೊಡಬಹುದಿತ್ತು.
ನಾಯಕನಾಗಿ ವಿನಯ್ ವಾಸುದೇವ್ ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿ ಗಮನ ಸೆಳೆದಿದ್ದಾರೆ. ನಾಯಕಿಯಾಗಿ ದಿಶಾ ರಮೇಶ್ ಬಹಳ ಲವಲವಿಕೆಯ ಪಾತ್ರದಲ್ಲಿ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ತಂದೆ ತಾಯಿ ಪಾತ್ರಧಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದು , ಪೊಲೀಸ್ ಅಧಿಕಾರಿಯಾಗಿ ನಾಗೇಂದ್ರ ಅರಸ್ ಅದ್ಭುತವಾಗಿ ನಟಿಸಿದ್ದಾರೆ. ಪ್ರಾಣಿ ಹಂತಕರಾಗಿ ಕಾಡ ಹಾಗೂ ಡಾಲ ಪಾತ್ರಗಳು ಗಮನ ಸೆಳೆಯುತ್ತಾರೆ. ಸಂಗೀತ ತಕ್ಕಮಟ್ಟಕ್ಕಿದ್ದು , ಹಿನ್ನೆಲೆ ಸಂಗೀತ, ಸಂಕಲನ , ಛಾಯಾಗ್ರಹಣ ಕೈಚಳಕ ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಒಟ್ಟಾರೆ ಯಾವುದೇ ಮಜುಗರವಿಲ್ಲದೆ ಎಲ್ಲರೂ ನೋಡುವಂತಹ ಚಿತ್ರ ಇದಾಗಿದೆ.