Cini NewsSandalwood

ನಿಷ್ಕಲ್ಮಶ ಪ್ರೀತಿಯ ಶಿಖರ Love ಲಿ” (ಚಿತ್ರವಿಮರ್ಶೆ – ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : Love ಲಿ”
ನಿರ್ದೇಶಕ : ಚೇತನ್ ಕೇಶವ್
ನಿರ್ಮಾಪಕ : ರವೀಂದ್ರ ಕುಮಾರ್
ಸಂಗೀತ : ಅನೂಪ್ ಸೀಳಿನ್ ಛಾಯಾಗ್ರಹಣ: ಅಶ್ವಿನ್ ಕೆನ್ನೆಡಿ
ತಾರಾಗಣ : ವಸಿಷ್ಠ ಸಿಂಹ , ಸ್ಟೆಫಿ ಪಟೇಲ್ , ಅಚ್ಯುತ್ ಕುಮಾರ್ , ಮಾಳವಿಕ ಅವಿನಾಶ್ , ಸಾಧುಕೋಕಿಲ, ದತ್ತಣ್ಣ , ಸಮೀಕ್ಷ , ಬೇಬಿ ವಂಶಿಕ , ಹಾಗೂ ಮುಂತಾದವರು…

 

ಪ್ರೀತಿಗಿರುವ ಶಕ್ತಿಯನ್ನು ತಿಳಿದುಕೊಳ್ಳುವುದು ಬಹಳ ಕಷ್ಟ ಎಂದೇ ಹೇಳಬಹುದು. ಯಾವಾಗ , ಯಾರಿಗೆ , ಯಾರ ಮೇಲೆ ಪ್ರೀತಿ ಶುರುವಾಗುತ್ತೆ. ಅದು ಹೇಗಲ್ಲ ಬದುಕಿನ ದಿಕ್ಕನ್ನ ಬದಲಿಸುತ್ತೆ , ಸ್ನೇಹ , ನೋವು , ನಲಿವು , ಕಷ್ಟಗಳ ನಡುವೆ ಮಾರಣಾಂತಿಕ ಕಾಯಿಲೆ ಎದುರಾದಾಗ ಜೀವನ ಹೇಗೆ ಸಾಗಿಸುತ್ತದೆ ಎಂಬುದನ್ನು ಹೇಳುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “Love ಲಿ”.

ತನ್ನ ಹೆಸರೇ ಕೇಳುತ್ತಿದ್ದಂತೆ ಇಡೀ ಏರಿಯಾದಲ್ಲಿರುವ ರೌಡಿಗಳು ಬೆಚ್ಚಿ ಬೀಳುವಂತಹ ವ್ಯಕ್ತಿ ಜೈ (ವಶಿಷ್ಟ ಸಿಂಹ). ರಿಯಲ್ ಎಸ್ಟೇಟ್ ಹಣದ ವೈವಾಟು ನಡೆಸುವ ಜೈ ಪ್ರೇಯಸಿ ಜನನಿ. ಅವಳ ಕಡೆ ಯಾರಾದರೂ ಕಣ್ಣು ಹಾಕಿದರು ಅವರನ್ನು ಸದೆ ಬಡಿಯುವ ಜೈ ತನ್ನ ಜೀವದ ಉಸಿರಂತೆ ಪ್ರೀತಿಸುತ್ತಾನೆ. ಇವರೊಬ್ಬರ ಪ್ರೀತಿಗೂ ಒಂದು ಹಿನ್ನೆಲೆ ಇದೆ. ತಂದೆ ತಾಯಿಯ ವಿರೋಧದ ನಡುವೆಯೂ ಜನನಿ ತನ್ನ ಪ್ರೇಮಿಯನ್ನು ಮದುವೆಯಾಗಿ ಮಂಗಳೂರಿನ ಕಡಲ ಕಿನಾರೆಯಲ್ಲಿ ವಾಸ ಮಾಡುತ್ತಾಳೆ.

ಜೈ ತನ್ನ ಹಳೆ ಆರ್ಭಟಗಳನ್ನೆಲ್ಲ ಬಿಟ್ಟು ಜನನಿಗಾಗಿ ಅವಳ ನಿಷ್ಕಲ್ಮಶ ಪ್ರೀತಿಗೆ ಮನಸೋತು ಫ್ಯಾಶನ್ ಡಿಸೈನರ್ ಕಂಪನಿ ಕೆಲಸ ಮಾಡುತ್ತಾ ಒಂದು ಸುಂದರ ಬದುಕನ್ನ ಕಟ್ಟಿಕೊಂಡಿರುತ್ತಾನೆ. ಕಂಪನಿ ಮಾಲೀಕ (ಸಾಧುಕೋಕಿಲ) ಚಪಲ ಚೆನ್ನಿಗರಾಯನಾದರೂ ಜೈ ಕಾರ್ಯವೈಕರಿ , ಕೆಲಸದಲ್ಲಿರುವ ಶ್ರದ್ಧೆಯನ್ನು ಮೆಚ್ಚಿಕೊಂಡಿರುತ್ತಾನೆ. ಇದೆಲ್ಲದರ ಹೊರತಾಗಿ ಜೈ ಜನನಿಗೆ ಕಿಂಚಿತ್ತು ನೋವಾಗದಂತೆ ನೋಡಿಕೊಳ್ಳುವ ಸಮಯಕ್ಕೆ ತಾಯಿಯಾಗುವ ಜನನಿ.

ಮನೆಗೆ ಮುದ್ದಾದ ಮಗು ಬಂದರು, ಜನನಿಯನ್ನ ಕಣ್ ರೆಪ್ಪೆಯಂತೆ ಕಾಯುವ ಜೈ ಗೆ ಒಂದು ಮಾರಣಾಂತಿಕ ಕಾಯಿಲೆ(HIV)ಯಿಂದ ಜನನಿ ಬಳಲುತ್ತಿರುವ ವಿಚಾರ ತಿಳಿಯುತ್ತದೆ. ಈ ಕಾಯಿಲೆಗೆ ಒಬ್ಬ ದೃಷ್ಟ ವ್ಯಕ್ತಿ ಕಾರಣ , ಅವನ ಹಿನ್ನೆಲೆಯು ಒಂದು ಕಠೋರ ಸತ್ಯ ಕಾಡುತ್ತಿರುತ್ತದೆ. ಈ ವಿಚಾರ ತಿಳಿಯುವ ಜೈ ಇತ್ತ ತನ್ನ ಹೆಂಡತಿಯನ್ನು ಕಾಪಾಡಿಕೊಳ್ಳಲು ಪರದಾಡುವ ರೀತಿ ಒಂದೆಡೆಯಾದರೆ , ದುಷ್ಟ ವ್ಯಕ್ತಿಯಿಂದ ಹೆಣ್ಣು ಮಕ್ಕಳ ಜೀವನ ರಕ್ಷಿಸುವ ಗುರಿ ಮತ್ತೊಂದೆಡೆ. ಇವೆರಡರ ನಡುವೆ ಸಾಗುವ ಕಥೆ ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.

ಕಾಯಿಲೆಗೆ ಕಾರಣ ಯಾರು…
ಜೈ ಹುಡುಕುವ ದಾರಿ ಏನು…
ಜನನಿ ಬದುಕು ಏನಾಗುತ್ತೆ…
ಹುಚ್ಚು ಪ್ರೀತಿಗೆ ಸಿಗುವ ಉತ್ತರಕ್ಕೆ ನೀವು “Love ಲಿ” ಚಿತ್ರ ನೋಡಬೇಕು.

ಈ ಚಿತ್ರದ ನಿರ್ದೇಶಕ ಚೇತನ್ ಕೇಶವ್ ಆಯ್ಕೆ ಮಾಡಿಕೊಂಡಿರುವ ಕಥೆ ಸೂಕ್ಷ್ಮವಾಗಿದ್ದು, ಬದುಕಿನಲ್ಲಿ ಜಾಗೃತಿ ಬಹಳ ಅಗತ್ಯ , ನಿಷ್ಕಲ್ಮಶ ಪ್ರೀತಿಯ ಶಕ್ತಿ , ನೋವು ನಲಿವಿನ ಜೊತೆಗೆ ಹಾಸ್ಯದ ಮಿಶ್ರಣವು ಗಮನ ಸೆಳೆಯುವಂತೆ ಮೂಡಿದೆ. ಚಿತ್ರಕಥೆಯ ಮತ್ತಷ್ಟು ವಿಭಿನ್ನವಾಗಿ ಮೂಡಿಸಬಹುದಿತ್ತು ಜೊತೆಗೆ ಚಿತ್ರದ ಓಟವು ವೇಗ ಮಾಡಬೇಕಿತ್ತು ಅನಿಸುತ್ತದೆ. ಆದರೂ ಚಿತ್ರದಲ್ಲಿ ಹೇಳುವ ವಿಚಾರ ಗಮನ ಸೆಳೆಯುವಂತಿದೆ.

ನಿರ್ಮಾಪಕರ ಖರ್ಚು ಬೆಳ್ಳಿ ಪರದೆಯ ಮೇಲೆ ಮೇಲೆ ಕಾಣುತ್ತಿದೆ. ಇನ್ನು ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಹೆಚ್ಚು ಅಬ್ಬರಿಸಿದೆ. ಛಾಯಾಗ್ರಹಕರ ಕೈಚಳಕವು ಉತ್ತಮವಾಗಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ವಸಿಷ್ಟ ಸಿಂಹ ತನ್ನ ಮಾತಿನ ವರ್ಚಸ್ಸು , ಆಕ್ಷನ್ ಆರ್ಭಟ ಹಾಗೂ ಬಿಲ್ಡಪ್ ಎಂಟ್ರಿಗಳ ಮೂಲಕ ಗಮನ ಸೆಳೆಯುತ್ತಾರೆ. ಪ್ರೀತಿಯ ಸೆಳೆತ, ಮನಮಿಡಿಯುವ ದೃಶ್ಯಗಳಲ್ಲಿ ಬಹಳ ಶ್ರಮ ಪಟ್ಟಿರುವುದು ಕಾಣುತ್ತದೆ.

ನಾಯಕಿಯಾಗಿ ಅಭಿನಯಿಸಿರುವ ಸ್ಟೆಫಿ ಪಟೇಲ್ ನೋಡಲು ಮುದ್ದು ಮುದ್ದಾಗಿ ಕಾಣುತ್ತಲೇ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದಾರೆ. ಇನ್ನು ಡಾಕ್ಟರ್ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ಜೀವ ತುಂಬಿದ್ದು , ಇಡೀ ಚಿತ್ರದ ಹೈಲೈಟ್ ಆಗಿ ಸಾಧುಕೋಕಿಲ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಮನಸ್ಸನ್ನು ಗೆದ್ದಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರದಾರಿಗಳು ಚಿತ್ರಕ್ಕೆ ಪೂರಕವಾಗಿ ಸಾಗಿದ್ದಾರೆ. ಒಟ್ನಲ್ಲಿ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.

Visited 1 times, 1 visit(s) today
error: Content is protected !!