ಆತ್ಮದ ಪಾಪ ಪುಣ್ಯದ ಫಲ : 45 ಚಿತ್ರ ವಿಮರ್ಶೆ (ರೇಟಿಂಗ್ : 4 /5)
ರೇಟಿಂಗ್ : 4 /5
ಚಿತ್ರ : 45
ನಿರ್ದೇಶಕ : ಅರ್ಜುನ್ ಜನ್ಯ
ನಿರ್ಮಾಪಕ : ಎಂ ರಮೇಶ್ ರೆಡ್ಡಿ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಸತ್ಯ ಹೆಗಡೆ
ತಾರಾಗಣ : ಶಿವರಾಜ್ ಕುಮಾರ್ , ಉಪೇಂದ್ರ , ರಾಜ್ ಬಿ ಶೆಟ್ಟಿ , ಕೌಸ್ತುಭ ಮಣಿ , ಪ್ರಮೋದ್ ಶೆಟ್ಟಿ ಹಾಗೂ ಮುಂತಾದವರು…
ಈ ಭೂಮಿಯ ಮೇಲೆ ಹುಟ್ಟು ಸಾವು ಜಗದ ನಿಯಮದಂತೆ ಸಾಗಲೇಬೇಕು. ನಾವು ಮಾಡಿದಂತಹ ಪಾಪ , ಪುಣ್ಯದ ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಲೇಬೇಕು. ನಮ್ಮ ಹಿಂದೂ ಧರ್ಮದ 18 ಪುರಾಣಗಳಲ್ಲಿ ಗರುಡ ಪುರಾಣವು ಒಂದಾಗಿದೆ. ಬಹಳಷ್ಟು ವಿಚಾರವನ್ನು ಒಳಗೊಂಡಿರುವ ಈ ಪುರಾಣದ ಒಂದು ಭಾಗದಲ್ಲಿ ಮನುಷ್ಯ ಮರಣ ನಂತರ ಆತ್ಮಕ್ಕೆ ಏನಾಗುತ್ತೆ , ಸಜ್ಜನರಿಗೆ ಏನು ಪುರಸ್ಕಾರ… ದುಷ್ಟರಿಗೆ ಏನು ಶಿಕ್ಷೆ… ಇದೆಲ್ಲವನ್ನ ಗರುಡ ಪುರಾಣದಲ್ಲಿ ಬೆಳಕು ಚೆಲ್ಲಲಾಗಿದೆ.
ಇಂತದ್ದೇ ಒಂದು ಸೂಕ್ಷ್ಮ ವಿಚಾರವನ್ನು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಒಬ್ಬ ವ್ಯಕ್ತಿಯ ಮೂಲಕ ಸಾವು ಹಾಗೂ ಸಾವಿನ ನಂತರದ ಅನುಭವಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಹಾದಿಯಲ್ಲಿ ಯಮ ಹಾಗೂ ಶಿವನ ಶಕ್ತಿಯ ಮಹಿಮೆಯ ಜೊತೆ ಮನುಷ್ಯತ್ವ , ದಯೆ , ಪ್ರೀತಿ , ವಿಶ್ವಾಸ , ಸಂಬಂಧಗಳ ನಡುವೆ ಜೀವಿಸುವ ಗುಣಗಳನ್ನು ಜಾಗೃತಿ ಮೂಡಿಸುವ ಅಂಶದ ರೂಪದಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “45”.
ಜೀವನದಲ್ಲಿ ಒತ್ತಡದ ಬದುಕೆ ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುತ್ತಾ ಹೋಗುತ್ತದೆ. ಸಾಫ್ಟ್ ವೇರ್ ಉದ್ಯೋಗಿ ವಿನಯ್ (ರಾಜ್ ಬಿ ಶೆಟ್ಟಿ) ತಾಯಿಯ ಜೊತೆ ಮಾತನಾಡುತ್ತಲೇ ಆತುರವಾಗಿ ಬೈ ಏರಿ ಕೆಲಸಕ್ಕೆ ಹೊರಡುತ್ತಾನೆ. ಮಾರ್ಗ ಮಧ್ಯೆ 45 ಸೆಕೆಂಡ್ ಸಿಗ್ನಲ್ ಇದ್ದರು ಫೋನಲ್ಲಿ ಮಾತನಾಡುತ್ತಾ ವೇಗವಾಗಿ ಸಾಗಿ ನಾಯಿ (ರೋಜಿ) ಗೆ ಗುದ್ಧಿ ಸಾಯಿಸಿದರೂ , ನಿಲ್ಲಿಸಿದೆ ಪಶ್ಚಾತಾಪವೂ ಪಡೆದೆ ಮುಂದೆ ಸಾಗುವಾಗ ವಿನಯ್ ಲಾರಿಗೆ ಡಿಕ್ಕಿ ಹೊಡೆದು ಆಕ್ಸಿಡೆಂಟ್ ಮಾಡಿಕೊಳ್ಳುತ್ತಾನೆ. ಇನ್ನು ತನ್ನ ಮನಸ್ಸಿನೊಳಗೆ ಆಗುವ ಒಂದಷ್ಟು ತಳಮಳಮಳಗಳ ನಡುವೆ ಸರಿ ತಪ್ಪು ಹುಡುಕಾಟದ ನಡುವೆ ಕಚೇರಿಯಲ್ಲಿ ತನ್ನ ಲ್ಯಾಪ್ಟಾಪ್ ಮೂಲಕ ಗರುಡ ಪುರಾಣದಲ್ಲಿರುವ ಸಾವಿನ ನಂತರದ ಬದುಕಿನ ಬಗ್ಗೆ ಹುಡುಕುತ್ತಾ ಹೋಗುತ್ತಾನೆ.
ಇನ್ನು ತನ್ನ ನಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಾಯಪ್ಪ (ಉಪೇಂದ್ರ) ತನ್ನ ತಂಡದ ಹುಡುಗರ ಮೂಲಕ ವಿನಯ್ ಕರೆಸಿ ತನ್ನ ತಪ್ಪಿಗೆ ಶಿಕ್ಷೆ ನೀಡುವುದಾಗಿ ತಿಳಿಸಿ 45 ದಿನಗಳ ಗಡವು ನೀಡಿ ಕೊಲ್ಲುವುದಾಗಿ ಎಚ್ಚರಿಕೆ ನೀಡುತ್ತಾನೆ. ಇದೇ ಆತಂಕದಲ್ಲಿರುವಾಗ ವಿನಯ್ ಪ್ರೇಯಸಿ ಮೇಘನಾ (ಕೌಸ್ತುಭ ಮಣಿ)ಗೆ ವಿಚಾರ ತಿಳಿಸಿದ ನಂತರ , ಆಕೆಯ ಪರಿಚಯದ ಡಾನ್ ಮತ್ತು ಮಣಿ (ಮೊಟ್ಟೆ ರಾಜೇಂದ್ರನ್) ಮೂಲಕ ರಾಯಪ್ಪನನ್ನ ಕೊಲ್ಲಲು ಪ್ಲಾನ್ ಮಾಡಿದರು ಪ್ರಯೋಜನವಾಗುವುದಿಲ್ಲ , ಬೇರೆ ಬೇರೆ ಹಾದಿ ಹಿಡಿದು ವಿನಯ್ ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಾ ಹೋಗುತ್ತದೆ.
ತಾಯಿ(ಮಾಲತಿ ಸುಧೀರ್) ಯ ಬಳಿಯೂ ತನ್ನ ಕಷ್ಟವನ್ನು ಹೇಳಿಕೊಂಡಾಗ ಆಕೆಯ ಪೂಜೆಯ ಫಲವಾಗಿ ಒಂದು ಶಕ್ತಿ ಬೆಂಬಲವಾಗಿ ನಿಲ್ಲುತ್ತದೆ. 45ರ ಗಡುವ ಮುಗಿಯುತ್ತ ಸಾವಿನ ಸಮೀಪ ಹತ್ತಿರವಾಗುತ್ತಂತೆ ಶಿವಪ್ಪ (ಶಿವರಾಜ್ ಕುಮಾರ್) ವಿನಯ್ ಗೆ ಬೆಂಬಲವಾಗಿ ನಿಂತು ತಪ್ಪಿನ ಅರಿವು , ಜ್ಞಾನದ ಬೆಳಕು , ಎದುರಿಸುವ ಶಕ್ತಿಯನ್ನು ನೀಡುತ್ತಾ ಎಲ್ಲಾ ತಾರ್ಕಿಕ ಗೊಂದಲಕ್ಕೆ ಮುಕ್ತಿ ನೀಡುವ ಹಂತಕ್ಕೆ ತಂದು ನಿಲ್ಲಿಸುತ್ತಾರೆ. ಅದು ಏನು… ಶಿವಪ್ಪ ಯಾರು… ರಾಯಪ್ಪ ಯಾರು… ನವೀನನ ಬದುಕು ಯಾವುದು… ಕರ್ಮ ಫಲ ನೀಡುವ ಉತ್ತರ ಏನು? ಇದೆಲ್ಲದಕ್ಕೂ ನೀವು ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.

ಇಡೀ ಚಿತ್ರವನ್ನು ಮೂರು ಕಲಾವಿದರು ಆವರಿಸಿಕೊಂಡಿದ್ದಾರೆ. ವಿಶೇಷವಾಗಿ ನಟ ಶಿವರಾಜ್ ಕುಮಾರ್ ಮನಸ್ಸಿನಲ್ಲಿ ಉಳಿಯುವಂತಹ ಸಂದೇಶ ನೀಡುವ ವಿಚಾರಗಳ ಶಿವಪ್ಪ ನಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಶಿವನ ಅವತಾರಗಳ ಗೆಟಪ್ ನಲ್ಲಿ ಭರ್ಜರಿ ಸ್ಟೆಪ್ಸ್ ಮೂಲಕ ಮಿಂಚಿದ್ದಾರೆ. ಅದೇ ರೀತಿ ನಟ ಉಪೇಂದ್ರ ಕೂಡ ರಾಯಪ್ಪ ನಾಗಿ ಅದ್ಭುತವಾಗಿ ಮತ್ತೊಮ್ಮೆ ಬಹುಮುಖ ಪ್ರತಿಭೆ ಎಂದು ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹಾಗೆಯೇ ನಟ ರಾಜ್ ಬಿ ಶೆಟ್ಟಿ ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ , ಬದುಕಿನ ಸರಿ ತಪ್ಪುಗಳ ಏರಿಳಿತದ ಸುಳಿಯ ನಡುವೆ ಸಿಲುಕಿರುವ ವ್ಯಕ್ತಿಯಾಗಿ ಜೀವ ತುಂಬಿದ್ದಾರೆ. ಇನ್ನು ಸೌಮ್ಯ ಸ್ವಭಾವದ ಮುದ್ದಾದ ಹುಡುಗಿಯಾಗಿ ಗಮನ ಸೆಳೆಯುವಂತ ಪಾತ್ರವನ್ನು ನಿರ್ವಹಿಸಿರುವ ಕೌಸ್ತುಭ ಮಣಿ ಕೂಡ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಇನ್ನು ನಾಯಕನ ತಾಯಿಯ ಪಾತ್ರ ಮಾಡಿರುವ ಮಾಲತಿ ಸುಧೀರ್ , ಮೊಟ್ಟೆ ರಾಜೇಂದ್ರ , ಪ್ರಮೋದ್ ಶೆಟ್ಟಿ , ಸುಧಾರಾಣಿ , ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಜೀವ ತುಂಬಿದ್ದಾರೆ.
ಈ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಎಂ. ರಮೇಶ್ ರೆಡ್ಡಿ ರವರ ಸಾಹಸವನ್ನು ಮೆಚ್ಚಲೇಬೇಕು. ಯಾವುದೇ ಖರ್ಚು ವೆಚ್ಚವನ್ನು ಲೆಕ್ಕಿಸದೆ ತೆರೆಯ ಮೇಲೆ ಕಾಣುವ ಪ್ರತಿಯೊಂದು ದೃಶ್ಯವೂ ಅದ್ದೂರಿತನಕ್ಕೆ ಸಾಕ್ಷಿಯಾಗಿದೆ. ಇಂತಹ ನಿರ್ಮಾಪಕರು ಉಳಿಯಬೇಕು. ಮೂವರು ಸ್ಟಾರ್ ಕಲಾವಿದರ ಜೊತೆಗೆ ಸಂಗೀತ ನಿರ್ದೇಶಕನಿಗೆ ನಿರ್ದೇಶನದ ಜವಾಬ್ದಾರಿಯನ್ನ ನೀಡುವುದರ ಜೊತೆಗೆ ಉತ್ತಮ ತಾಂತ್ರಿಕ ತಂಡವನ್ನು ಕಟ್ಟಿಕೊಂಡು ಒಂದು ಉತ್ತಮ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಆದರೆ ಈ ಕಥೆಗೆ ಇಷ್ಟು ಖರ್ಚು ಅಗತ್ಯವೇ ಅನಿಸುತ್ತದೆ. ಇನ್ನು ನಿರ್ದೇಶಕ ಅರ್ಜುನ್ ಜನ್ಯ ಗೆ ಆಧ್ಯಾತ್ಮಿಕದಲ್ಲಿ ಹೆಚ್ಚು ಒಲವಿದ್ದ ಕಾರಣ ಈ ಕಥೆ ಹೊರಬಂದಿರಬಹುದು , ತಮ್ಮ ಪ್ರಥಮ ಪ್ರಯತ್ನದಲ್ಲಿ ಸಾವಿನ ನಂತರದ ಬದುಕಿನ ಸುಳಿಯಲ್ಲಿ ಕಟ್ಟಿಕೊಂಡಿರುವ ಕಥಾನಕ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಹೇಳಿರುವ ಪ್ರಯತ್ನ ಗಮನ ಸೆಳೆದರೂ , ಪರಿಣಾಮಕಾರಿಯಾಗಿ ಕಾಣುತ್ತಿಲ್ಲ ಎನಿಸುತ್ತದೆ. ಹೊಡಿ , ಬಡಿ , ಅಬ್ಬರ, ಸದ್ದುಗಳ ನಡುವೆ ಚಿತ್ರ ಆವರಿಸಿಕೊಂಡಂತಿದೆ. ಇದರ ಹೊರತಾಗಿ ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಅಬ್ಬರಿಸಿದ್ದು , ವಿಎಫ್ಎಕ್ಸ್ ಕೆಲಸ ಉತ್ತಮವಾಗಿದೆ. ತಾಂತ್ರಿಕವಾಗಿ ಚಿತ್ರ ಗಮನ ಸೆಳೆಯುವಂತಿದ್ದು , ಯಾವುದೇ ಮುಜುಗರವಿಲ್ಲದೆ ಎಲ್ಲರೂ ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.