ಕನ್ನಡದ ಖ್ಯಾತ ಹಿರಿಯ ನಟಿ ಬಿ. ಸರೋಜಾ ದೇವಿ ವಿಧಿವಶ
ಚಂದನವನದ ಹಿರಿಯ ನಟಿ ಬಿ .ಸರೋಜಾ ದೇವಿ (87) ವರ್ಷ ವಯಸ್ಸಾಗಿದ್ದು , ವಯೋಸಹಜ ಕಾಯಿಲೆ ಯಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಪ್ರತಿನಿತ್ಯ ದಂತೆ ಬೆಳಗ್ಗೆ ಪೇಪರ್ ಓದಿದ ನಂತರ ಸ್ನಾನ, ಪೂಜೆ ಮಾಡಿ ತಿಂಡಿ ತಿಂದು ಟಿವಿ ನೋಡುತ್ತಿರುವಾಗಲೇ ತುಂಬಾ ಸುಸ್ತಾಗಿದ್ದರಂತೆ. ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದರು ಚಿಕಿತ್ಸೆ ನೀಡುವ ಮೊದಲೇ ಅವರು ಮೃತಪಟ್ಟಿರುವ ವಿಚಾರ ವೈದ್ಯರಿಂದ ತಿಳಿದು ಬಂದಿದೆ.
ಈ ಹಿರಿಯ ನಟಿಯ ಅಗಲಿಕೆಯಿಂದ ಚಿತ್ರರಂಗಕ್ಕೆ ಇದ್ದ ದೊಡ್ಡ ಕೊಂಡಿ ಒಂದು ಕಳಚಿದಂತಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ನಿವಾಸದಲ್ಲಿ ಬಿ ಸರೋಜಾದೇವಿ ರವರ ಮೃತದೇಹದ ದರ್ಶನವನ್ನ ಪಡೆಯಲು ಚಿತ್ರರಂಗದ ಕಲಾವಿದರು , ತಂತ್ರಜ್ಞರು , ಅಭಿಮಾನಿಗಳು ಸೇರಿದಂತೆ ರಾಜಕೀಯದ ಗಣ್ಯರು ಸೇರಿದಂತೆ ಜನಸಾಮಾನ್ಯರ ಕೂಡ ದರ್ಶನವನ್ನು ಪಡೆಯುತ್ತಿದ್ದಾರೆ. ನಾಳೆ ನಡೆಯಲಿರುವ ಅಂತ್ಯಕ್ರಿಯೆ ವರೆಗೂ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಹಿರಿಯ ನಟಿಯ ಅಂತಿಮ ದರ್ಶನಕ್ಕೆ ಸಕಲ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸಿದಂತ ಬಹುಭಾಷಾ ನಟಿ ಬಿ . ಸರೋಜಾ ದೇವಿ ತಮ್ಮದೇ ಆದ ಸ್ಥಾನಮಾನಗಳನ್ನು ಪಡೆದಂತವರು. ಜನವರಿ 7, 1938 ರಲ್ಲಿ ಜನಿಸಿದ್ದ ಸರೋಜಾದೇವಿ ಅವರು ತಮ್ಮ 17ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಬಿ. ಸರೋಜೀವಿ ರವರು ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಫಾದರ್ಪಣೆ ಮಾಡಿದ್ದರು. ಸರಿಸುಮಾರು 70 ವರ್ಷಗಳ ಚಿತ್ರ ಪ್ರಯಾಣವನ್ನು ಮಾಡಿದ್ದಾರೆ.
ಮುದ್ದಾದ , ಅಪ್ರತಿಮ್ಮ ನಟಿಯಾದ ಬಿ .ಸರೋಜಾ ದೇವಿ ರವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಿಗ್ಗಜ ನಟರುಗಳಾದ ಡಾ. ರಾಜಕುಮಾರ್ , ಹೊನ್ನಪ್ಪ ಭಾಗವತರ್ ,ಎಂ. ಜಿ. ಆರ್ , ಅಕಿನೇನಿ ನಾಗೇಶ್ವರ್ ರಾವ್ , ಎನ್ . ಟಿ.ಆರ್, ಜೆಮಿನಿ ಗಣೇಶನ್ , ರಾಜೇಂದ್ರ ಕುಮಾರ್ , ಶಮ್ಮಿ ಕಪೂರ್ , ಕಲ್ಯಾಣ್ ಕುಮಾರ್ , ಉದಯ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರೊಂದಿಗೆ ನಟಿಸಿರುವ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನ್ನಡ , ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರ ನಟನೆಯನ್ನು ಗುರುತಿಸಿ 1969 ರಲ್ಲಿ ಪದ್ಮಶ್ರೀ , 1992 ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಗಿದ್ದರು. ಹಲವಾರು ಬಾರಿ ಸನ್ಮಾನ ಗೌರವವನ್ನು ಪಡೆದಂತ ಈ ನಟಿ ಅಭಿನಯ ಸರಸ್ವತಿ ಎಂಬ ಬಿರುದು ಪಡೆದುಕೊಂಡರು.
ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಹಿರಿಯ ನಟಿ ಬಣ್ಣದ ಬದುಕನ್ನು ಅಪಾರವಾಗಿ ಪ್ರೀತಿಸಿದವರು, ನಟಿಯರು ಹೇಗೆ ಇರಬೇಕು , ಕಾಣಬೇಕು ಎಂಬುದನ್ನು ಇವರ ನೋಡಿ ಕಲಿಯಬೇಕು ಎಂಬ ಮಾತಿದೆ. ಹಿರಿಯ ನಟಿ ಬಿ .ಸರೋಜಾ ದೇವಿ ರವರು ಅಮರಶಿಲ್ಪಿ ಜಕಣಾಚಾರಿ, ಶ್ರೀನಿವಾಸ ಕಲ್ಯಾಣ , ಬಬ್ರುವಾಹನ , ಕಥಾಸಾಗರ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್ ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ , ಯಾರಿವನು , ಇತ್ತೀಚೆಗೆ ಬಂದಂತಹ ನಟಸಾರ್ವಭೌಮ ಚಿತ್ರಗಳಲ್ಲಿ ನಟಿಸಿದ್ದು , ಎಲ್ಲಾ ಭಾಷೆಯ ಕಲಾವಿದರು , ತಂತ್ರಜ್ಞರ ಪ್ರೀತಿಯನ್ನು ಗಳಿಸಿದಂತಹ ಮಹಾನ್ ನಟಿಯಾಗಿ ಗುರುತಿಸಿಕೊಂಡಿದ್ದವರು.
ಕನ್ನಡ ಚಿತ್ರರಂಗದ ಈ ಹಿರಿಯ ಸುರದ್ರೂಪಿ ನಟಿ , ಪಂಚ ಬಾಷ ಕಲಾವಿದೆ , ಅಭಿನಯ ಸರಸ್ವತಿ , ಹಿರಿಯ ನಟಿ ಬಿ . ಸರೋಜಾ ದೇವಿಯ ಅಗಲಿಕೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದ್ದು, ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಚಿತ್ರರಂಗ ಹಾಗೂ ರಾಜಕೀಯದ ಎಲ್ಲಾ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ. ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಹರ್ಷ ಅವರನ್ನು ವಿವಾಹವಾಗಿದ್ದರು. ಇಬ್ಬರು ಮಕ್ಕಳನ್ನು ದತ್ತು ಪಡೆದು ಸಾಕಿ ಬೆಳೆಸಿದ್ದಾರೆ. ಹಿರಿಯ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರ ನಾಳೆ ಚನ್ನಪಟ್ಟಣದ ದಶಾವರ ಗ್ರಾಮದಲ್ಲಿರುವ ಬಿ. ಸರೋಜಾ ದೇವಿ ಗಾರ್ಡನ್ ನಲ್ಲಿರುವ ಅವರ ತಾಯಿಯ ಸಮಾಧಿಯ ಪಕ್ಕದಲ್ಲಿ ಅಂತಿಮ ವಿಧಿ ವಿಧಾನದ ಮೂಲಕ ಒಕ್ಕಲಿಗ ಸಂಪ್ರದಾಯದಂತೆ ಸಂಸ್ಕಾರ ನಡೆಸಲು ನಿರ್ಧರಿಸಿದ್ದಾರೆ.