“ರೋಣ” ಚಿತ್ರದ ಟೀಸರ್ ಬಿಡುಗಡೆ ಮಾಡಿದ ಹಿರಿಯ ನಟ ಶರತ್ ಲೋಹಿತಾಶ್ವ.
ಚಂದನವನಕ್ಕೆ ಮತ್ತೊಂದು ಯುವ ಪ್ರತಿಭೆಗಳ ತಂಡ ಒಂದು ವಿಭಿನ್ನ ಕಥಾನಕದ ಮೂಲಕ ಬರಲು ಸಜ್ಜಾಗಿದೆ.”ರೋಣ” ಚಿತ್ರದೊಂದಿಗೆ ರಂಗಭೂಮಿ ಪ್ರತಿಭೆಗಳಾದ ನಟ ರಘು ರಾಜ ನಂದ ಹಾಗೂ ನಿರ್ದೇಶಕ ಸತೀಶ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಬಿ. ಆರ್. ಕೆ ಪ್ರೊಡಕ್ಷನ್ಸ್ ಮೂಲಕ ಗೆಳೆಯರು ಸೇರಿ ನಿರ್ಮಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿ ಬಹಳಷ್ಟು ಸದ್ದನ್ನ ಮಾಡಿತ್ತು. ಈಗ ಈ ಚಿತ್ರದ ಅಧಿಕೃತ ಟೀಸರ್ ಅನ್ನು ಚಿತ್ರದ ಪ್ರಮುಖ ಕಲಾವಿದ , ಹಿರಿಯ ನಟ ಶರತ್ ಲೋಹಿತಾಶ್ವ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಈ ಚಿತ್ರದ ನಿರ್ದೇಶಕ ಸತೀಶ್ ಕುಮಾರ್ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಚಿತ್ರ , ನಾನು ಚಿತ್ರರಂಗದಲ್ಲಿ ಒಂಬತ್ತು ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು , ನಂತರ ಕೆಲವು ಡಾಕ್ಯೂಮೆಂಟರಿ ಗಳನ್ನು ಮಾಡಿ ಈಗ ನನ್ನ ಮೊದಲ ಚಿತ್ರ, ಎರಡು ವರ್ಷಗಳ ನಿರಂತರ ಶ್ರಮದಿಂದ ಈ ಚಿತ್ರ ಪೂರ್ಣವಾಗಿದ್ದು , ಇದು ಅಪ್ಪ-ಮಗನ ಕಥೆಯನ್ನು ಒಳಗೊಂಡಿದ್ದು , ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ , ಧಾರ್ಮಿಕ, ರಾಜಕೀಯ, ಸ್ನೇಹ , ಪ್ರೀತಿ ಸೇರಿದಂತೆ ಹಲವು ವಿಚಾರಗಳು ಈ ಸಿನಿಮಾದಲ್ಲಿ ಸಿಗಲಿದೆ. ಹಾಗೆ ಟೆಕ್ನಿಕಲಿ ನಮ್ಮ ಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ.
ಈ ನಮ್ಮ “ರೋಣ” ಚಿತ್ರವನ್ನು 65 ದಿನಗಳ ಕಾಲ ಹೊಸಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ನಿರ್ದೇಶಕರ ಪ್ರಕಾರ ಚಿತ್ರದ ಕಲಾವಿದರು , ತಂತ್ರಜ್ಞಾನರು ಎಲ್ಲರೂ ಸಕ್ಕತ್ತಾಗಿ ಮಾಡಿದ್ದಾರಂತೆ. ಹಾಗಾಗಿ ನಿರ್ದೇಶಕರನ್ನ ವೇದಿಕೆ ಮೇಲೆ ನಿರೂಪಕಿ ಸಕ್ಕತ್ ಸತೀಶ್ ಕುಮಾರ್ ಎಂದು ಹೇಳಿದ್ದು ಎಲ್ಲರನ್ನ ನಗುವಂತೆ ಮಾಡಿತು.
ಈ ಚಿತ್ರದ ನಟ ಹಾಗೂ ನಿರ್ಮಾಪಕ ರಘು ರಾಜ ನಂದ ಮಾತನಾಡುತ್ತಾ ನನ್ನ ಐವರು ಗೆಳೆಯರು ಸೇರಿ ಬಿ. ಆರ್. ಕೆ. ಪ್ರೊಡಕ್ಷನ್ ಮೂಲಕ ಈ ಚಿತ್ರವನ್ನು ಸಿದ್ದ ಮಾಡುತಿದ್ದೇವೆ. ನಾನು ಮೂಲತಹ ರಂಗಭೂಮಿ ಪ್ರತಿಭೆ, ಸರಿ ಸುಮಾರು ನಾಲ್ಕು ವರ್ಷಗಳಿಂದ ನಾಟಕಗಳನ್ನು ಮಾಡುತ್ತ ಮಲ್ಲೂರು ವಿಜಯ ತಂಡದಲ್ಲಿ ತರಬೇತಿಯನ್ನು ಪಡೆದುಕೊಂಡೆ. ಈ ಚಿತ್ರಕ್ಕಾಗಿ ನನ್ನ ಗುರುಗಳು ಸದಾಶಿವ ನೀನಾಸಂ ಅವರಿಂದ ತರಬೇತಿ ಪಡೆದೆ. ಈಗಾಗಲೇ ಸಣ್ಣ ಪುಟ್ಟ ಪಾತ್ರಗಳಲ್ಲಿ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಕೆರೆ ಬೇಟೆಯಲ್ಲಿ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ ನಂತರ , ನಾನೇ ಒಂದು ಚಿತ್ರವನ್ನು ಮಾಡಬೇಕೆಂದು ತೀರ್ಮಾನ ಮಾಡಿಕೊಂಡೆ. ಅದರಂತೆ ಚಿತ್ರ ಕೂಡ ಬಹಳ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಎಲ್ಲಾ ರೀತಿಯ ಅಂಶಗಳು ಒಳಗೊಂಡಿದೆ. ಈಗ ಟೀಸರ್ ಬಿಡುಗಡೆ ಮಾಡಿದೀವಿ , ಒಂದೊಂದೇ ರೀತಿ ಪ್ರಚಾರದ ಕೆಲಸನ ಮಾಡುತ್ತೇವೆ. ನಮಗೆ ಈ ವಿಚಾರವಾಗಿ ಏನು ಗೊತ್ತಿಲ್ಲ “ಕ ಪಿಚ್ಚರ್” ಪ್ರವೀಣ್ ಸರ್ ನಮಗೆ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ನವೆಂಬರ್ ತಿಂಗಳಲ್ಲಿ ಚಿತ್ರವನ್ನ ತೆರಿಗೆ ತರುತ್ತೇವೆ. ನನಗೆ ರಂಗಭೂಮಿ ಹಾಗೂ ಸಿನಿಮಾ ಬಿಟ್ಟು ಬೇರೇನು ಗೊತ್ತಿಲ್ಲ , ನಮ್ಮಂತ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ , ಬೆಳೆಸಿ ಎನ್ನುತ್ತಾ ಚಿತ್ರದಲ್ಲಿ ಅಭಿನಯಿಸಿದಂತ ಎಲ್ಲಾ ಕಲಾವಿದರು , ತಂತ್ರಜ್ಞರನ್ನು ವೇದಿಕೆ ಮೇಲೆ ಕರೆದಿದ್ದು ವಿಶೇಷವಾಗಿತ್ತು. ಈ ಚಿತ್ರದ ನಾಯಕಿ ಮೈಸೂರಿನ ಬೆಡಗಿ ಪ್ರಕೃತಿ ಪ್ರಸಾದ್ ಮಾತನಾಡುತ್ತಾ ನಾನು ಸೀರಿಯಲ್ ಗಳನ್ನ ಮಾಡುತ್ತಾ ಸಿನಿಮಾರಂಗಕ್ಕೆ ಬಂದವಳು , ಇತ್ತೀಚಿಗೆ ನನ್ನ ಆಸ್ಟಿನ್ ಮಹಾನ್ಮೌನ ಚಿತ್ರ ಬಿಡುಗಡೆಗೊಂಡಿತ್ತು , ಇದು ನನ್ನ ಎರಡನೇ ಚಿತ್ರ. ಇದೊಂದು ರೀತಿ ದೊಡ್ಡ ಸಿನಿಮಾ , ಈ ಚಿತ್ರದಲ್ಲಿ ಅಪ್ಪ ಮಗಳ ಬಾಂಧವ್ಯದ ಕುರಿತು ಹೇಳುವುದರ ಜೊತೆಗೆ ಧಾರ್ಮಿಕ , ವೈಜ್ಞಾನಿಕ ಅಂಶಕ್ಕೂ ಕಥೆ ಪೂರಕವಾಗಿದೆ. ನನ್ನ ಪಾತ್ರವೂ ವಿದ್ಯಾವಂತ ಹುಡುಗಿ ಸಿಟಿಯಿಂದ ಹಳ್ಳಿಗೆ ಹೋಗಿ ಅಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನು ಹೇಗೆ ಎದುರಿಸುತ್ತಾಳೆ , ಏನೆಲ್ಲಾ ನಡೆಯುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವಂತಹ ಕಥೆ ಇದೆ. ಖಂಡಿತ ಇದು ಎಲ್ಲರಿಗೂ ಇಷ್ಟವಾಗುವ ಚಿತ್ರ ಎಂದರು.
ಹಿರಿಯ ನಟ ಶರತ್ ಲೋಹಿತಾಶ್ವ ಮಾತನಾಡುತ್ತಾ ನಾನು ಬರೀ ಟೀಸರ್ ಬಿಡುಗಡೆ ಮಾಡಿದ ನಂತರ ನನ್ನ ಕೆಲಸ ಮುಗಿತು ಎಂದುಕೊಂಡೆ ಎಂದು ತಮಾಷೆಯಾಗಿ ಹೇಳುತ್ತಲೇ ಸಾಮಾನ್ಯವಾಗಿ ನನ್ನ ಪಾತ್ರಗಳು ಬಹಳ ಸದ್ದು ಮಾಡುತ್ತದೆ ಆದರೆ ಈ ಚಿತ್ರದಲ್ಲಿ ಸೌಮ್ಯ ಸ್ವಭಾವದ ತಂದೆಯ ಪಾತ್ರ. ಹದಿನೈದು ದಿನ ತಂಡದೊಟ್ಟಿಗೆ ಕೆಲಸ ಮಾಡಿದ್ದೇನೆ. ನೋಡಲು ಟೀಮ್ ಹೊಸದು ಆದರೆ ಕೆಲಸದಲ್ಲಿ ದೈತ್ಯ ಪ್ರತಿಭೆಗಳು , ಅವರಿಗೆ ಏನು ಬೇಕೋ ಅದನ್ನ ಅಷ್ಟೇ ಶಾಂತ ರೀತಿಯಲ್ಲಿ ನಮ್ಮಿಂದ ಪಡೆದುಕೊಂಡಿದ್ದಾರೆ. ಇದೊಂದು ಗೌರವದ ಟೀಮ್. ತಂದೆ ಮಗನ ಕಥೆ ಒಳಗೊಂಡಿದ್ದು , ರಾಜಕೀಯದ ನಂಟಿರುವ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಈ ತಂಡದ ಶ್ರಮಕ್ಕೆ ಯಶಸ್ಸು ಸಿಗಬೇಕೆಂದು ಶುಭ ಹಾರೈಸಿದರು. ಹಾಗೆಯೇ ಮಾಲೂರು ವಿಜಯ ಮಾತನಾಡುತ್ತಾ ನನ್ನ ತಂಡದಿಂದ ರಘು ರಾಜ ನಂದ ಸಿನಿಮಾ ರಂಗಕ್ಕೆ ನಾಯಕನಾಗಿ ಬರುತ್ತಿದ್ದಾನೆ. ಬಹಳಷ್ಟು ಶ್ರಮ ಪಟ್ಟಿದ್ದಾನೆ.
ನಾವು ನಮ್ಮ ಕೆಲಸದಲ್ಲಿ ಸಮಯ ಪ್ರಜ್ಞೆಯನ್ನ ಮರೆಯಬಾರದು , ಅದು ಬಹಳ ಮುಖ್ಯ, ನಾನು ಕಲಿತಿದ್ದನ್ನ ನನ್ನ ಶಿಷ್ಯಂದಿರಿಗೂ ಹೇಳಿಕೊಟ್ಟಿದ್ದೇನೆ ಎಂದರು. ಈ ಚಿತ್ರದಲ್ಲಿ ಅಭಿನಯಿಸಿರುವಂತಹ ರಂಗಭೂಮಿ ಪ್ರತಿಭೆ ಗೀತಾ ಹಾಗೂ ಕಿರುತೆರೆ ಕಾಮಿಡಿ ಕಲಾವಿದ ಚಿಲ್ಲರ್ ಮಂಜು , ಯುವ ಪ್ರತಿಭೆಗಳಾದ ಹಿತೇಶ್ ಅಭಿಷೇಕ್ ಆರ್ಯ, ವಿನೋದ್, ದರ್ಶನ್ ಶೆಟ್ಟಿ , ಮನೋಜ್ ಕುಮಾರ್ ಸೇರಿದಂತೆ ತಂದೆ ಮಗನ ಬಾಂಧವ್ಯದ ಹಾಡು ಬರೆದಿರುವ ಕಿನ್ನಾಳ ರಾಜ್ , ಹಾಗೂ ರಮೇಶ್ ಬರೆದಿರುವ ಕಥೆಗೆ ಚಿತ್ರಕಥೆ ಸಂಭಾಷಣೆ ಬರೆದಂತಹ ಆದೇಶ್ವರ್ , ಛಾಯಾಗ್ರಹಕ ಅರುಣ್ ಕುಮಾರ್ , ಸಹಾಯಕ ನಿರ್ದೇಶಕರಾದ ಚೇತನ್ ಎಂ.ಆರ್. , ಜೈ , ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ತಂಡದ ಬೆನ್ನೆಲುಬಾಗಿ ನಿಂತಿರುವಂತಹ ಕ ಪಿಚ್ಚರ್ಸ್ ನ ಪ್ರವೀಣ್ ಮಾತನಾಡುತ್ತಾ ನಾನು ಈ ಚಿತ್ರಕ್ಕೆ ಪ್ರಸೆಂಟ್ ಮಾಡುತ್ತಿದ್ದೇನೆ. ಈ ಹಿಂದೆ ನಾನು ಮತ್ಸ್ಯಗಂಧ ಅನ್ನೋ ಚಿತ್ರ ತಂಡಕ್ಕೂ ಬೆಂಬಲವಾಗಿ ನಿಂತಿದ್ದೆ , ಇದು ನನ್ನ ಎರಡನೆಯ ಚಿತ್ರ. ಹೊಸಬರ ಪ್ರಯತ್ನಕ್ಕೆ ಸಾತ್ ನೀಡಬೇಕು , ಸಿನಿಮಾ ಮಾಡುವುದು ಎಷ್ಟು ಕಷ್ಟವೋ , ಬಿಡುಗಡೆಗೂ ಅಷ್ಟೇ ಜವಾಬ್ದಾರಿ ಇರಬೇಕು , ಅದರಲ್ಲೂ ಮಾರ್ಕೆಟಿಂಗ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು, ನಾನು ಮಾಧ್ಯಮದಲ್ಲಿ ಇದ್ದಾಗ ನೋಡಿದ ಅನುಭವ ತುಂಬಾ ಇದೆ. ಶ್ರದ್ದೆ , ನಿಷ್ಠೆಯಿಂದ ಯಾರೇ ಸಿನೆಮಾ ಮಾಡಿದರೂ ಅವರಿಗೆ ಸಪೋರ್ಟ್ ಮಾಡಬೇಕು , ಹಾಗಾಗಿ ಈ ತಂಡ ಜೊತೆ ನಾನು ಇದ್ದೇನೆ ನೀವೆಲ್ಲರೂ ಈ ತಂಡಕ್ಕೆ ಬೆಂಬಲವನ್ನ ನೀಡಿ ಎಂದು ಕೇಳಿಕೊಂಡರು.
ಈ ರೋಣ ಚಿತ್ರ ಸತೀಶ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ. ಬಿ.ಕೆ.ಆರ್ ಪ್ರೊಡಕ್ಷನ್ಸ್ ಅಂಡ್ ಟೀಮ್ ನಿರ್ಮಾಣದಲ್ಲಿ ಕನ್ನಡ ಪಿಚ್ಚರ್ ಅರ್ಪಿಸ್ತಿದೆ. ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬದೇರಿಯ ಸಂಗೀತ ಸಂಯೋಜಿಸಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್,ಕಿನ್ನಾಳ ರಾಜ್ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ರಘುರಾಜನಂದ ನಾಯಕಿಯಾಗಿ ಪ್ರಕೃತಿ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ ತಂದೆಯ ಪಾತ್ರದಲ್ಲಿದ್ದು, ಮಾಲೂರು ವಿಜಯ್ , ಚಿಲ್ಲರ್ ಮಂಜು , ಬಲರಾಜವಾಡಿ, ಸಂಗೀತ ಅನೀಲ್ ಪ್ರಮುಖ ಪಾತ್ರಗಳನ್ನ ನಿಭಾಯಿಸಿದ್ದಾರೆ. ಈಗ ಬಿಡುಗಡೆಯಾಗಿರುವ ರೋಣ ಚಿತ್ರದ ಟೀಸರ್ ಭರವಸೆ ಹುಟ್ಟಿಸುವಂ ಕಥಾವಸ್ತುವನ್ನ ಹೊಂದಿರುವಂತೆ ಕಾಣ್ತಿದೆ. ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ , ಧಾರ್ಮಿಕ, ರಾಜಕೀಯ ವಿಚಾರಗಳು ಈ ಸಿನಿಮಾದಲ್ಲಿ ಬೆರೆತಂತೆ ಕಾಣ್ತಿದೆ. ಇಡಿ ತಂಡ ಈಗ ಪ್ರಚಾರದ ಕಾರ್ಯವನ್ನ ಆರಂಭಿಸಿದ್ದು , ಹಂತ ಹಂತವಾಗಿ ಮಾಹಿತಿಯನ್ನು ನೀಡುವುದರ ಜೊತೆಗೆ ನವೆಂಬರ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.