Cini NewsMovie ReviewSandalwood

ಕಂಬಳದ ಸ್ಪರ್ಧೆ , ಸಂಪ್ರದಾಯದ ಸುಳಿಯಲ್ಲಿ ಭೂಗತದ ನೆರಳು “ವೀರ ಕಂಬಳ” (ಚಿತ್ರವಿಮರ್ಶೆ-ರೇಟಿಂಗ್ : 4/5)

Spread the love

ರೇಟಿಂಗ್ : 4/5
ಚಿತ್ರ : ವೀರ ಕಂಬಳ
ನಿರ್ದೇಶಕ : ರಾಜೇಂದ್ರ ಸಿಂಗ್ ಬಾಬು
ನಿರ್ಮಾಪಕರು : ವಿನಿತ ವಿಜಯ್ ಕುಮಾರ್ ರೆಡ್ಡಿ , ಅರುಣ್ ರೈ ತೊಡಾರ್
ಸಂಗೀತ : ಮಣಿಕಾಂತ್ ಕದ್ರಿ
ಛಾಯಾಗ್ರಹಣ : ಆರ್.ಗಿರಿ
ತಾರಾಗಣ : ಆದಿತ್ಯ , ಪ್ರಕಾಶ್ ರೈ, ರವಿಶಂಕರ್, ರಾಧಿಕಾ ನಾರಾಯಣ್ , ನವೀನ್ ಪಡೀಲ್, ದಿವ್ಯ ವಿಸ್ಮಿತಾ , ಗೋಪಿನಾಥ್ ಭಟ್, ಉಷಾ ಭಂಡಾರಿ , ಭೋಜರಾಜ್ ವಾಮಂಜೂರು ಹಾಗೂ ಮುಂತಾದವರು…

ತುಳುನಾಡಿನ ಜನರ ನಂಬಿಕೆ ಹಾಗೂ ಬದುಕಿನ ಜೀವನಾಡಿಯಲ್ಲಿ ಬೆರೆತು ಹೋದಂತಹ ಆಚಾರ ವಿಚಾರ ಸಂಪ್ರದಾಯದ ನಂಬಿಕೆಯ ಸ್ಪರ್ಧೆ ಕಂಬಳ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳ ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಈ ಕಂಬಳ.

ಇದರ ಸುತ್ತ ಬೆಸೆದುಕೊಂಡು ಎರಡು ಕುಟುಂಬಗಳ ಜಿದ್ದಾಜಿದ್ದಿನ ಹೊಡೆದಾಟ ದ್ವೇಷದ ಸುತ್ತ ನಿಂತ ಹೋದ ಕಂಬಳ ಮತ್ತೆ ಆರಂಭಗೊಂಡಾಗ ಎದುರಾಗುವ ಸಮಸ್ಯೆಗಳ ನಡುವೆ ಭೂಗತ ಲೋಕದ ವೈಶ್ಯಮ್ಯದ ಸುಳಿಯಲ್ಲಿ ಬೆಟ್ಟಿಂಗ್ , ಡ್ರಗ್ಸ್ , ದನದ ಮಾಂಸ ದಂಧೆಕೋರರ ಗುಂಡಿನ ಸದ್ದಿನ ಕಥಾನಕದಲ್ಲಿ ದ್ವೇಷ ಬಿಟ್ಟು ಸ್ನೇಹ ಬೆಳೆಸಿ ಎಂದು ತಿಳಿಸಲು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ವೀರ ಕಂಬಳ”.

ದೂರದ ದುಬೈನಲ್ಲಿ ಜೀವನ ಕಟ್ಟಿಕೊಳ್ಳಲು ಹೊರಟಂತಹ ಗೆಳೆಯರಾದ ರಾಜ್ (ಶೋಭ ರಾಜ್) , ಭವಾನಿ ಹಾಗೂ ಸತ್ಯ (ಆದಿತ್ಯ) ನಡುವೆ ಬೆಟ್ಟಿಂಗ್ , ಸ್ಮಗ್ಲಿಂಗ್ ಹಾಗೂ ಕರಾವಳಿಯ ಕಂಬಳ ವಿಚಾರವಾಗಿ ದುಶ್ಮನಿ ಬೆಳೆದು ಕೊಲ್ಲಲು ಸಂಚು ರೂಪಿಸಿಕೊಳ್ಳುತ್ತಾರೆ.

ಇನ್ನೂ ಸುಮಾರು 68 ವರ್ಷಗಳ ಹಿಂದೆ ಮಂಜೂಟಿ ಗುತ್ತಾ ಹಾಗೂ ಮಿತಿಬೈಲ್ ಕುಟುಂಬಗಳ ಕಂಬಳದ ಸ್ಪರ್ಧೆಯಲ್ಲಿ ಜಗಳ, ಹೊಡೆದಾಟದಿಂದ ನಿಂತು ಹೋದ ಕಂಬಳ ಮತ್ತೆ ಆರಂಭಗೊಳ್ಳುವ ಸೂಚನೆ ಹಾಗೂ ಮನೆಯ ಸಮಸ್ಯೆಗಳ ಪರಿಹಾರಕ್ಕೆ ದಾರಿ ಮಾಡಿಕೊಡುವ ಆದೇ ಸಿಗುತ್ತದೆ.

ಕಂಬಳವನ್ನ ಆರಂಭಿಸಲು ಸತ್ಯನ ಅಣ್ಣ ರಾಮಣ್ಣ (ಗೋಪಿನಾಥ್ ಭಟ್) ಮುಂದಾಳತ್ವ ತೆಗೆದುಕೊಂಡು ಊರ ಜನರನ್ನು ಹಾಗೂ ಗಣ್ಯರನ್ನು ಒಗ್ಗೂಡಿಸಲು ಶತ ಪ್ರಯತ್ನ ಮಾಡುತ್ತಾ ಹೋಗುತ್ತಾನೆ.

ಇದಕ್ಕಾಗಿ ಕಂಬಳದ ಚಾಂಪಿಯನ್ ಕರ್ಣ(ನವೀನ್ ಡಿ ಪಡೀಲ್) ನ ಸಹಾಯ ಪಡೆದು ಸಂಜು ಎಂಬ ಕೋಣ ಖರೀದಿಸುವುದರ ಜೊತೆಗೆ ಅದನ್ನು ಓಡಿಸುವ ವೇಣು ಎಂಬ ಆಸಕ್ತ ಹುಡುಗನನ್ನು ನೇಮಕ ಮಾಡುತ್ತಾರೆ. ಅದೇ ರೀತಿ ಮತ್ತೊಂದು ತಂಡದ ಮಹಾದೇವಿ (ಉಷಾ ಭಂಡಾರಿ) ಕೂಡ ತಮ್ಮ ತಂಡಕ್ಕೆ ಚಂದು ಎಂಬ ಪರಿಣಿತನನ್ನ ಕರೆಸಿಕೊಳ್ಳುತ್ತಾರೆ. ಇದರ ನಡುವೆ ಸಂಪ್ರದಾಯ , ಆಚರಣೆಯ ವಿಚಾರವಾಗಿ ಒಂದಷ್ಟು ಗೊಂದಲ ಸೃಷ್ಟಿಯಾಗುತ್ತದೆ.

ಹಾಗೆಯೇ ದಿವ್ಯ( ದಿವ್ಯ ವಿಸ್ಮಿತ) ಭರತನಾಟ್ಯ ಪ್ರತಿಭೆ ತರಬೇತಿ ಕೇಂದ್ರದಲ್ಲಿ ವೇಣುವಿನ ಪರಿಚಯ ಆಗುತ್ತದೆ. ಅದೇ ರೀತಿ ಮತ್ತೊಬ್ಬ ಸ್ಪರ್ಧೆ ಚಂದುಗೆ ಸುಂದರ ಹುಡುಗಿ ವಿದ್ಯಾ ಒಡನಾಟ ಬೆಳೆಯುತ್ತದೆ. ಇದರ ನಡುವೆ ರಾಜಕೀಯ ನಾಯಕರ ಕಚ್ಚಾಟ , ಕಂಬಳ ನಿಲ್ಲಿಸಲು ಮಾಡುವ ರಣತಂತ್ರ ನಡುವೆ ಪೊಲೀಸ್ ಮಧ್ಯಪ್ರವೇಶ ಮಾಡುವಂತಾಗುತ್ತದೆ.

ಮುಂದೆ ಕೋರ್ಟ್ ಅಂಗಳಕ್ಕೆ ತಲುಪಿ ವಾದ ವಿವಾದ ನಡೆದು ರೋಚಕ ಘಟ್ಟಕ್ಕೆ ನಿಲ್ಲುತ್ತದೆ. ಕಂಬಳ ನಡೆಯುತ್ತಾ… ಎರಡು ಕುಟುಂಬಗಳ ವೈಶಮ್ಯ ಏನಾಗುತ್ತೆ… ಭೂಗತ ನಂಟಿನ ರಹಸ್ಯ ಏನು… ಕ್ಲೈಮಾಕ್ಸ್ ನೀಡುವ ಉತ್ತರ ಏನು… ಇದಕ್ಕಾಗಿ ಒಮ್ಮೆ ನೀವೆಲ್ಲರೂ ಚಿತ್ರ ನೋಡಬೇಕು.

ಕರಾವಳಿ ಭಾಗದಲ್ಲಿ ನಡೆಯುವ ಈ ಕಂಬಳದ ಆಚರಣೆಯ , ಸಂಪ್ರದಾಯ , ಸಮಸ್ಯೆ , ರಾಜಕೀಯ , ಭೂಗತ ಜಗತ್ತಿನ ಒಡನಾಟ ಸೇರಿದಂತೆ ಒಂದಷ್ಟು ವಿಚಾರವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನವನ್ನು ನಿರ್ದೇಶಿಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾಡಿದ್ದಾರೆ. ಚಿತ್ರಕಥೆಯಲ್ಲಿ ಒಂದಷ್ಟು ಹಿಡಿತ ಮಾಡಬೇಕಿತ್ತು ಅನಿಸುತ್ತದೆ. ನಮ್ಮ ಮಣ್ಣಿನ ಸೊಗಡಿನ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು.

ಚಿತ್ರದ ಹಾಡುಗಳು ಸೊಗಸಾಗಿ ಮೂಡಿಬಂದಿದ್ದು , ಛಾಯಾಗ್ರಹಕರ ಕೈಚಳಕವು ಅದ್ಭುತವಾಗಿದೆ. ಇನ್ನು ತಾಂತ್ರಿಕವಾಗಿ ಸಂಕಲನ, ಕಲೆ , ವಸ್ತ್ರ ವಿನ್ಯಾಸದ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಪ್ರಮುಖ ಡಾನ್ ಗಳ ಪಾತ್ರದಲ್ಲಿ ಅಭಿನಯಿಸಿರುವ ಆದಿತ್ಯ , ಶೋಭರಾಜ್ , ಲಾಯರ್ ಪಾತ್ರದಲ್ಲಿ ಪ್ರಕಾಶ್ ರಾಜ್ , ರವಿಶಂಕರ್ , ಕಮಿಷನರ್ ಪಾತ್ರದಲ್ಲಿ ರಾಧಿಕಾ ನಾರಾಯಣ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಹಾಗೂ ರಂಗಭೂಮಿ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಈ ಚಿತ್ರ ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Visited 2 times, 2 visit(s) today
error: Content is protected !!