Cini NewsSandalwood

“ಉತ್ತರಕಾಂಡ”ಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ

Spread the love

ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಉತ್ತರಕಾಂಡ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.ಈ ಘೋಷಣೆಯ ಮೂಲಕ ಬಹು ನಿರೀಕ್ಷಿತ ಹಾಗೂ ತಾರಾಗಣದ ಚಿತ್ರ “ಉತ್ತರಕಾಂಡ” ಎಲ್ಲೆಡೆ ಸದ್ದು ಮಾಡುತ್ತಿದೆ. ಅಂತರ ರಾಷ್ಟ್ರೀಯ ಖ್ಯಾತಿಯ ಸಂಗೀತ ಸಂಯೋಜಕ ಅಮಿತ್ “ಉತ್ತರಕಾಂಡ”ಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.

ಅಮಿತ್ ತ್ರಿವೇದಿ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ಸಂಗೀತ ಸಂಯೋಜಕ ಹಾಗೂ ಗಾಯಕ. ಕೇವಲ ಹಿಂದಿ ಚಿತ್ರಗಳಷ್ಟೇ ಅಲ್ಲದೆ,‌ ತೆಲುಗು, ಮಲಯಾಳಂ ಚಿತ್ರಗಳಲ್ಲಿ ತಮ್ಮ ವಿಭಿನ್ನ ಸಂಗೀತ ಸಂಯೋಜನೆ ಶೈಲಿಯ ಮೂಲಕ ಛಾಪನ್ನು ಮೂಡಿಸಿದ್ದಾರೆ. ದೇವ್ ಡಿ, ಕ್ವೀನ್, ವೇಕ್ ಅಪ್ ಸಿಡ್, ಇಂಗ್ಲಿಷ್ ವಿಂಗ್ಲಿಷ್, ಕೈ ಪೋ ಚೆ, ಲೂಟೇರಾ, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ಸಿಕ್ರೆಟ್ ಸೂಪರ್ ಸ್ಟಾರ್, ಮನ್ಮರ್ಜಿಯಾನ್, ಅಂಧಾದುನ್, ಸೈ ರಾ‌ ನರಸಿಂಹ ರೆಡ್ಡಿ, ಜೂಬಿಲಿ ಎಂಬ ವೆಬ್ ಸೀರಿಸ್ ಮತ್ತು ಇತ್ತೀಚಿನ ಶೈತಾನ್ ಮುಂತಾದವುಗಳು ಇವರು ಸಂಗೀತ ಸಂಯೋಜನೆ ಮಾಡಿರುವ ಚಿತ್ರಗಳು.

“ಉತ್ತರಕಾಂಡ”ದ ಪ್ರೋಮೋಗೆ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು,‌ ಸಂಪೂರ್ಣ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಕುರಿತು ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, “ಉತ್ತರಕಾಂಡ ಚಿತ್ರದ ಮೂಲಕ ನಾವು ಉತ್ತರಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆಯನ್ನು ಹೇಳಬಯಸುತ್ತೇವೆ.

ಇಂತಹಾ ಸ್ಥಳೀಯ ಭಾವನೆಯನ್ನು ಉಂಟು ಮಾಡುವ ಕಥೆಗೆ ಅಮಿತ್ ತ್ರಿವೇದಿ ಅವರ ಸಂಗೀತ ಸಾಥ್ ನೀಡಲಿದೆ. ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಚಿತ್ರದ ಮೆರುಗನ್ನು ಹೆಚ್ಚಿಸಲಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಅಮಿತ್ ತ್ರಿವೇದಿ ಮಾತನಾಡಿ, ” ಈ ಚಿತ್ರದ ಕಥಾವಸ್ತು ಮತ್ತು ಭಾವನೆ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ‌. ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಉತ್ಸುಕನಾಗಿದ್ದೇನೆ” ಎಂದು ತಿಳಿಸಿದರು.

“ಉತ್ತರಕಾಂಡ” ಕೆ.ಆರ್.ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಾಣದ ಮತ್ತು ರೋಹಿತ್ ಪದಕಿ ನಿರ್ದೇಶನದ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು,‌ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ತಂಡ ಈಗಾಗಲೇ ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದು, ಇದೇ ಏಪ್ರಿಲ್ 15ರಿಂದ ಚಿತ್ರೀಕರಣ ಆರಂಭಿಸಲಿದೆ.

Visited 1 times, 1 visit(s) today
error: Content is protected !!