‘ಕಸ್ಟಡಿ’ ಹಾಗೂ ‘ಪಾಲ್ಗುಣಿ’ ಚಿತ್ರಗಳ ಟ್ರೇಲರ್ ಬಿಡುಗಡೆ.
ಚಂದನವನದಲ್ಲಿ ಒಂದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ, ಒಬ್ಬರೆ ನಿರ್ದೇಶಕ ನಿರ್ದೇಶಿಸಿರುವ “ಕಸ್ಟಡಿ” ಹಾಗೂ “ಪಾಲ್ಗುಣಿ ಎಂಬ ಎರಡು ಚಿತ್ರಗಳ ಟ್ರೈಲರ್ ಗಳನ್ನ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಟ್ರೈಲರ್ ಪ್ರದರ್ಶನದ ಆರಂಭದಲ್ಲಿ ಹಾಕಿರುವ ಸವಿನೆನಪಿನ ಭಾವಚಿತ್ರಗಳಲ್ಲಿ ವಿಷ್ಣುವರ್ಧನ್ ಅಂಬರೀಶ್ ಹಾಗೂ ಪುನೀತ್ ರಾಜಕುಮಾರ್ ಚಿತ್ರಗಳು ಇದ್ದು , ಪ್ರಮುಖವಾಗಿ ಇರಬೇಕಿದ್ದ ವರನಟ ಡಾ. ರಾಜಕುಮಾರ್ ಭಾವಚಿತ್ರದ ಕುರಿತು ಚರ್ಚೆ ನಡೆದು , ನಂತರ ಚಿತ್ರತಂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಸರಿಪಡಿಸುತ್ತೇವೆ ಎಂದು ಹೇಳಿದ್ದು ಎಲ್ಲರ ಗಮನವನ್ನು ಸೆಳೆಯಿತು. ನಂತರ ವೇದಿಕೆಯ ಮೇಲೆ ಮ್ಯಾಜಿಕ್ ರಮೇಶ್ ಮಾಡಿದ ಜಾದು ಎಲ್ಲರ ಮೆಚ್ಚುಗೆಯನ್ನು ಪಡೆಯಿತು.
ನಾಗೇಶ್ ಕುಮಾರ್ ಯು.ಎಸ್ & ಜೆ.ಜೆ.ಶ್ರೀನಿವಾಸ್ ನಿರ್ಮಿಸಿರುವ, ಜೆ.ಜೆ.ಶ್ರೀನಿವಾಸ್ ನಿರ್ದೇಶಿಸಿರುವ “ಕಸ್ಟಡಿ” ಹಾಗೂ “ಪಾಲ್ಗುಣಿ” ಚಿತ್ರಗಳ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರೋದ್ಯಮದ ಗಣ್ಯರ ದಂಡೆ ಸೇರಿದ್ದು, ಕನ್ನಡ ಪರ ಹೋರಾಟಗಾರ , ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಎರಡು ಚಿತ್ರಗಳ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್, ಗೌ. ಕಾರ್ಯದರ್ಶಿ ಪ್ರವೀಣ್ ಕುಮಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್, ನಿರ್ಮಾಪಕರಾದ ಭಾ.ಮ.ಹರೀಶ್, ಎಂ.ಜಿ.ರಾಮಮೂರ್ತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಕಸ್ಟಡಿ” ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೆ, “ಪಾಲ್ಗುಣಿ” ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ ಕಥಾಹಂದರ ಹೊಂದಿರುವ ಚಿತ್ರ. “ಭೀಮ” ಖ್ಯಾತಿಯ ಪ್ರಿಯಾ ಅವರು “ಕಸ್ಟಡಿ” ಚಿತ್ರದ ಪ್ರಮುಖ ಪಾತ್ರದಲ್ಲಿ, ರೇಖಾಶ್ರೀ ಅವರು “ಪಾಲ್ಗುಣಿ” ಪಾತ್ರದಲ್ಲಿ ನಟಿಸಿದ್ದಾರೆ. ನನ್ನ ನಿರ್ದೇಶನದ ಎರಡು ಚಿತ್ರಗಳನ್ನು ನಾಗೇಶ್ ಕುಮಾರ್ ಯು.ಎಸ್ ಅವರೆ ನಿರ್ಮಾಣ ಮಾಡಿದ್ದಾರೆ. ನನಗೆ ತಿಳಿದ ಹಾಗೆ ಒಬ್ಬರೆ ನಿರ್ಮಿಸಿರುವ ಹಾಗೂ ಒಬ್ಬರೆ ನಿರ್ದೇಶಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಎರಡು ಚಿತ್ರಗಳು ಆಗಸ್ಟ್ 8 ರಂದು ವರಮಹಾಲಕ್ಷ್ಮೀ ಹಬ್ಬದ ಶುಭದಿನ ಬಿಡುಗಡೆಯಾಗುತ್ತಿದೆ. ನಮ್ಮ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಜೆ.ಜೆ.ಶ್ರೀನಿವಾಸ್.
ನಮ್ಮ ಎರಡು ಚಿತ್ರಗಳ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಇಷ್ಟು ಜನ ಗಣ್ಯರು ಬಂದು ಹಾರೈಸಿದ್ದು ಬಹಳ ಖುಷಿಯಾಗಿದೆ. ಅವರಿಗೆಲ್ಲಾ ಧನ್ಯವಾದ. ಇನ್ನೂ ಈ ಎರಡು ಚಿತ್ರಗಳು ವಿಭಿನ್ನ ಜಾನರ್ ನ ಸಿನಿಮಾಗಳು. ಚಿತ್ರತಂಡದ ಸಹಕಾರದಿಂದ ಎರಡು ಚಿತ್ರಗಳು ಆಗಸ್ಟ್ 8 ರಂದು ತೆರೆಗೆ ಬರುತ್ತಿದೆ. ನಾವೇ ಕೆಲವು ಸ್ನೇಹಿತರು ಸೇರಿ ಈ ಚಿತ್ರಗಳನ್ನು ವಿತರಣೆ ಕೂಡ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ನಾಗೇಶ್ ಕುಮಾರ್ ಯು ಎಸ್ ತಿಳಿಸಿದರು.
ನನಗೆ ನಿರ್ದೇಶಕರು ಬಂದು ಕಥೆ ಹೇಳಿದ್ದು ಬೇರೆ ಚಿತ್ರದ್ದು. ಆದರೆ, ಮೂರುದಿನಗಳು ಬಳಿಕ ಮತ್ತೊಂದು ಕಥೆ ಹೇಳಿದರು. ಅದೇ “ಕಸ್ಟಡಿ” ಚಿತ್ರದ ಕಥೆ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ. ದುರ್ಗಾ ಪರಮೇಶ್ವರಿ ನನ್ನ ಪಾತ್ರದ ಹೆಸರು ಎಂದರು “ಭೀಮ” ಚಿತ್ರದ ಖ್ಯಾತಿಯ ನಟಿ ಪ್ರಿಯಾ ಹೇಳಿದರು. ನಂತರ “ಪಾಲ್ಗುಣಿ” ಚಿತ್ರದ ನಟಿ ರೇಖಾಶ್ರೀ ಮಾತನಾಡುತ್ತಾ ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. “ಪಾಲ್ಗುಣಿ” ನನ್ನ ಪಾತ್ರದ ಹೆಸರು ಎಂದು ತಿಳಿಸಿದರು.
ನಾನು “ಕಸ್ಟಡಿ” ಹಾಗೂ “ಪಾಲ್ಗುಣಿ” ಎರಡು ಚಿತ್ರಗಳಲ್ಲೂ ನಟಿಸಿದ್ದೇನೆ. “ಕಸ್ಟಡಿ” ಚಿತ್ರಕ್ಕೆ ಸಂಕಲನವನ್ನೂ ಮಾಡಿದ್ದೇನೆ ಎಂದು ನಾಗೇಂದ್ರ ಅರಸ್ ಹೇಳಿದರು. ನಿರ್ಮಾಪಕ “ಚಿಂಗಾರಿ” ಮಹದೇವು, ವಿಕ್ಟರಿ ವಾಸು, ಆರಾಧ್ಯ, ವಿನ್ಯಾ ಶೆಟ್ಟಿ, “ಚೀತಾ” ಸೀನು, ಶ್ರೀನಿವಾಸ್, ಮ್ಯಾಜಿಕ್ ರಮೇಶ್, ಅಶ್ವಿತ ಸೇರಿದಂತೆ “ಕಸ್ಟಡಿ” ಹಾಗೂ “ಪಾಲ್ಗುಣಿ” ಚಿತ್ರಗಳ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.