”ಅತಿರಡಿ” ಚಿತ್ರದ ಟೈಟಲ್ ಟೀಸರ್ ಬಿಡುಗಡೆ
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕ ಬಾಸಿಲ್ ಜೋಸೆಫ್ ಅವರ ಬಾಸಿಲ್ ಜೋಸೆಫ್ ಎಂಟರ್ಟೈನ್ಮೆಂಟ್ಸ್ ಹಾಗೂ ಡಾಕ್ಟರ್ ಅನಂತು ಎಸ್ ಅವರ ಡಾಕ್ಟರ್ ಅನಂತು ಎಂಟರ್ಟೈನ್ಮೆಂಟ್ಸ್ ಸಹಯೋಗದಲ್ಲಿ ಅತಿರಡಿ ಎಂಬ ಸಿನಿಮಾ ತಯಾರಾಗುತ್ತಿದೆ.
ಈ ಚಿತ್ರದಲ್ಲಿ ಬೇಸಿಲ್ ಜೋಸೆಫ್, ಟೊವಿನೋ ಥಾಮಸ್ ಮತ್ತು ವಿನೀತ್ ಶ್ರೀನಿವಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬಾಸಿಲ್ ಜೋಸೆಫ್ ನಿರ್ದೇಶನದ ಮಿನ್ನಲ್ ಮುರಳಿ ಸಿನಿಮಾಗೆ ಚಿತ್ರಕಥೆ ಬರೆದ ಅರುಣ್ ಅನಿರುಧನ್ ನಿರ್ದೇಶಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.
ಅತಿರಡಿ ಸಿನಿಮಾದ ಶೂಟಿಂಗ್ ಅಕ್ಟೋಬರ್ ಅಂತ್ಯಕ್ಕೆ ಆರಂಭವಾಗಲಿದೆ. ಸಮೀರ್ ತಾಹಿರ್ ಮತ್ತು ಟೊವಿನೋ ಥಾಮಸ್ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಮಿನ್ನಲ್ ಮುರಳಿ ಸಿನಿಮಾ ನಂತರ ಟೋವಿನೋ ಥಾಮಸ್, ಬಾಸಿಲ್ ಜೋಸೆಫ್, ಸಮೀರ್ ತಾಹಿರ್ ಮತ್ತು ಅರುಣ್ ಅನಿರುಧನ್ ಅತಿರಡಿ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ.
ವಿನೀತ್ ಶ್ರೀನಿವಾಸನ್ ಪಾತ್ರ ಪರಿಚಯದೊಂದಿಗೆ ಅತಿರಡಿ ಟೈಟಲ್ ಟೀಸರ್ ಪ್ರಾರಂಭವಾಗುತ್ತದೆ. ನಂತರ ಬಾಸಿಲ್ ಜೋಸೆಫ್ ಮತ್ತು ಟೋವಿನೋ ಥಾಮಸ್ ಮಾಸ್ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅತಿರಡಿ ಮಾಸ್ ಆಕ್ಷನ್ ಎಂಟರ್‌ಟೈನರ್ ಆಗಿದೆ. ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. ಅತಿರಡಿ ಸಿನಿಮಾಗೆ ಸ್ಯಾಮ್ಯುಯೆಲ್ ಹೆನ್ರಿ ಛಾಯಾಗ್ರಹಣ, ವಿಷ್ಣು ವಿಜಯ್ ಸಂಗೀತ, ಚಮನ್ ಚಾಕೊ ಸಂಕಲನ, ಮಶರ್ ಹಂಸ ವಸ್ತ್ರ ವಿನ್ಯಾಸ, ಸುಹೇಲ್ ಕೋಯಾ ಸಾಹಿತ್ಯ ಒದಗಿಸುತ್ತಿದ್ದಾರೆ.