ಸಿನಿಮಾ ಬದುಕಿನ ಕಥಾನಕ “ಟೈಮ್ ಪಾಸ್” ಟ್ರೈಲರ್ ಬಿಡುಗಡೆ…ಅಕ್ಟೋಬರ್ 17ಕ್ಕೆ ಚಿತ್ರ ತೆರೆಗೆ.
ಬಣ್ಣದ ಬದುಕು ಎಲ್ಲರನ್ನ ಆಕರ್ಷಿಸುತ್ತದೆ. ಆದರೆ ಕೆಲವರನ್ನ ಮಾತ್ರ ತನ್ನತ್ತ ಸೆಳೆಯುತ್ತದೆ. ಸಿನಿಮಾನೆ ಜೀವನ.. ಸಿನಿಮಾನೆ ಉಸಿರು… ಎಂದು ನಂಬಿದ ಯುವ ಪ್ರತಿಭೆ ಕೆ. ಚೇತನ್ ಜೋಡಿದಾರ್ ತನ್ನದೇ ಒಂದು ತಂಡವನ್ನು ಕಟ್ಟಿಕೊಂಡು ಸಿನಿಮಾ ಬದುಕಿನ ಸುತ್ತ ಒಂದು ವಿಭಿನ್ನ ಕಥೆಯನ್ನ ರೆಡಿ ಮಾಡಿಕೊಂಡು “ಟೈಮ್ ಪಾಸ್” ಎಂಬ ಶೀರ್ಷಿಕೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 17ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಈ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.
ನಿರ್ದೇಶಕ ಚೇತನ್ ಜೋಡಿದಾರ್, ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞಸರ ಸಮ್ಮುಖದಲ್ಲಿ ಈ ಟ್ರೈಲರ್ ಬಿಡುಗಡೆಗೊಂಡಿದೆ. ಇದೇ ಹೊತ್ತಿನಲ್ಲಿ ನಿರ್ದೇಶಕರು ಈ ಚಿತ್ರದ ಕಥಾ ಹಂದರದ ಬಗೆಗಿನ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ ಮಾಡೋ ಕನಸಿಟ್ಟುಕೊಂಡವರ ಏಳುಬೀಳಿನ ಕಥನ ಹೊಂದಿರುವ ಈ ಸಿನಿಮಾದೊಳಗೆ ಮತ್ತೊಂದು ಸಿನಿಮಾ ಕಥೆ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆಯಂತೆ. ಕಾಂತಾರ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಈ ಸಂದರ್ಭದಲ್ಲಿ ತಮ್ಮ ಚಿತ್ರಕ್ಕೂ ಕೂಡಾ ಅಂಥಾದ್ದೇ ಉತ್ತೇಜನ ಕೊಡಬೇಕೆಂದು ನಿರ್ದೇಶಕರು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮ್ಮದೇ ಬದುಕಿನಲ್ಲಿ ನಡೆದ ಘಟನೆಗಳಿಗೂ, ಈ ಸಿನಿಮಾ ಕಥೆಗೂ ಇರುವ ನಂಟಿನ ಸುಳಿವನ್ನೂ ಕೂಡಾ ನಿರ್ದೇಶಕರು ತೆರೆದಿಟ್ಟಿದ್ದಾರೆ. ಇದು ಚೇತನ್ ಜೋಡಿದಾರ್ ನಿರ್ದೇಶನದ ಚೊಚ್ಚಲ ಸಿನಿಮಾ. ಸಾಮಾನ್ಯವಾಗಿ ಹೀಗೆ ನಿರ್ದೇಶನಕ್ಕಿಳಿಯುವವರ ಹಿಂದೆ ಒಂದಷ್ಟು ಅನುಭವಗಳ ಹಿನ್ನೆಲೆ ಇರುತ್ತದೆ. ಆದರೆ ಚೇತನ್ ಜೋಡಿದಾರ್ ಈವರೆಗೆ ಯಾವ ನಿರ್ದೇಶಕರ ಬಳಿಯಲ್ಲಿಯೂ ಕಸುಬು ಕಲಿತಿಲ್ಲ. ಯೂಟ್ಯೂಬ್ ಮೂಲಕವೇ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡು, ತಮ್ಮ ಜೀವಮಾನದ ಕನಸನ್ನು ಟೈಮ್ ಪಾಸ್ ಮೂಲಕ ನನಸು ಮಾಡಿಕೊಂಡಿದ್ದಾರೆ. ಅದು ಪ್ರೇಕ್ಷಕರಿಗೂ ರುಚಿಸುತ್ತದೆಂಬ ವಿಶ್ವಾಸ ಅವರ ಮಾತುಗಳಲ್ಲಿ ಧ್ವನಿಸುತ್ತಿತ್ತು.
ಎಂ.ಹೆಚ್ ಕೃಷ್ಣಮೂರ್ತಿ, ಕಿರಣ್ ಕುಮಾರ್ ಶೆಟ್ಟಿ ಮತ್ತು ಗುಂಡೂರ್ ಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಈ ಚಿತ್ರವನ್ನು ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಎಂ.ಹೆಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕಥೆಯೇ ಪ್ರಧಾನವಾಗಿದ್ದು , ಎಲ್ಲಾ ಪಾತ್ರಗಳು ಬಹಳ ಸೊಗಸಾಗಿ ಅಭಿನಯಿಸಿದ್ದಾರಂತೆ. ಅಂದುಕೊಂಡಂತೆ ಚಿತ್ರ ಮೂಡಿ ಬಂದಿದ್ದು, ಇದೆ ಸೆಪ್ಟಂಬರ್ 17ರಂದು ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗತ್ತಿದೆ.