Cini NewsMovie ReviewSandalwood

ಸಂಬಂಧಗಳ ಹುಡುಕಾಟದಲ್ಲಿ ಪಶ್ಚಾತಾಪದ ಸೆಳೆತ “ತೀರ್ಥರೂಪ ತಂದೆಯವರಿಗೆ” (ಚಿತ್ರವಿಮರ್ಶೆ -ರೇಟಿಂಗ್ : 4 /5)

Spread the love

ರೇಟಿಂಗ್ : 4 /5
ಚಿತ್ರ : ತೀರ್ಥರೂಪ ತಂದೆಯವರಿಗೆ
ನಿರ್ದೇಶಕ : ರಾಮೇನಹಳ್ಳಿ ಜಗನ್ನಾಥ್
ನಿರ್ಮಾಣ : ಜೈ ಚಾಮುಂಡೇಶ್ವರಿ
ಸಂಗೀತ : ಜೋ ಕಾಸ್ಟ್
ಛಾಯಾಗ್ರಹಣ : ದೀಪಕ್ ಯರಗೇರಾ
ತಾರಾಗಣ : ನಿಹಾರ್ ಮುಕೇಶ್‌ , ರಚನಾ ಇಂದರ್, ರಾಜೇಶ್ ನಟರಂಗ , ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ , ಅಶ್ವಿತ ಹೆಗಡೆ ಗಿರಿ ಹಾಗೂ ಮುಂತಾದವರು…

ಜೀವನದಲ್ಲಿ ಸಂಬಂಧಗಳ ಬೆಸುಗೆ , ಪ್ರೀತಿ , ವಿಶ್ವಾಸ , ಮಾನವೀಯತೆಯ ಮೌಲ್ಯದ ನಡುವೆ ಬದುಕು ಕಟ್ಟಿಕೊಂಡು ಸಾಗುವುದು ಸರ್ವೆ ಸಾಮಾನ್ಯ . ಇದರ ನಡುವೆ ಯಾವುದಾದರೂ ಒಂದು ಏರುಪೇರು , ಸಮಸ್ಯೆ ಎದುರಾದಾಗ ಪಯಣದ ಬಂಡಿ ದಿಕ್ಕಾಪಾಲಾಗಿ ನುಗ್ಗಿ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತಾ ಹೋಗುತ್ತದೆ.

ಅಂತದ್ದೇ ಒಂದು ಮನವಿಡಿಯುವ ಕೌಟುಂಬಿಕ ಸುಳಿಯಲ್ಲಿ ನಡೆಯುವ ತಪ್ಪೊಂದಿನಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಕುತೂಹಲಕಾರಿ ಕಾಡುವ ಕಥಾನಕದ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ತೀರ್ಥರೂಪ ತಂದೆಯವರಿಗೆ”. ನನ್ನ ಅರ್ಥಪೂರ್ಣ ವಿಡಿಯೋ ಬ್ಲಾಗ್ಸ್ ಗಳ ಮೂಲಕ ಅಭಿಮಾನಿ ವರ್ಗವನ್ನು ಸಾಮಾಜಿಕ ಜಾಲತಾಣದಲ್ಲಿ ಗಿಟ್ಟಿಸಿಕೊಂಡಂತಹ ಪೃಥ್ವಿ (ನಿಹಾರ್ ಮುಖೇಶ್) ತನ್ನಿಷ್ಟದಂತೆ ಗೆಳೆಯರೊಟ್ಟಿಗೆ ಓಡಾಡಿಕೊಂಡು ಇರುತ್ತಾನೆ. ತನ್ನ ಮಗನೇ ಜೀವ ಎಂದುಕೊಂಡು ಬದುಕು ನಡೆಸುವ ಜಾನಕಿ (ಸಿತಾರ) ಯನ್ನ ಕಂಡರೆ ಪೃಥ್ವಿಗೆ ಸಹಿಸಲಾಗದಷ್ಟು ಕೋಪ ,

ಯಾಕೆಂದರೆ ಜಾನಕಿಗೆ ಶಿವಶಂಕರ (ರಾಜೇಶ್ ನಟರಂಗ) ಜೊತೆ ಇರುವ ಸಂಬಂಧ. ಇದು ಪೃಥ್ವಿಯ ಬದುಕು ಹಾಗೂ ವೃತ್ತಿಗೂ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇದರ ನಡುವೆ ಪೃಥ್ವಿಯ ವಿಡಿಯೋಸ್ ಗೆ ಅಭಿಮಾನಿಯಾದ ಅಕ್ಷರ (ರಚನಾ ಇಂದರ್)ಗೆ ಭೇಟಿಯಾಗುವ ಸಂದರ್ಭ ಎದುರಾಗಿ , ಒಮ್ಮೆ ಮನೆಗೆ ಕರೆದುಕೊಂಡು ಹೋದಾಗ ಹೆಸರಾಂತ ಪತ್ರಕರ್ತ ರವಿ ರಾಮನಾಥಪುರ (ಅಜಿತ್ ಹಂಡೆ) ರವರ ಮಗಳೆಂದು ತಿಳಿಯುವ ಪೃಥ್ವಿ ಆಕೆಯಿಂದ ದೂರ ಉಳಿಯುವ ನಿರ್ಧಾರ ಮಾಡುತ್ತಾನೆ.

ಇನ್ನೂ ಬರವಣಿಗೆಯೇ ಜೀವನವಾಗಿಸಿಕೊಂಡ ಖ್ಯಾತ ಪತ್ರಕರ್ತ ರವಿ ತಮ್ಮ ಕರುನಾಡ ಸಮಾಚಾರ ವಾರಪತ್ರಿಕೆಯಲ್ಲಿ ಕಾಲೇಜ್ ಒಂದರ ಹೆಸರಾಂತ ಭೌತಶಾಸ್ತ್ರ ( physics teacher ) ಶಿವಶಂಕರ್ (ರವೀಂದ್ರ ವಿಜಯ್) ಮುದ್ದಿನ ಮಗಳು ರಮ್ಯಾಳ ಲವ್ವಿ ಡೌವ್ವಿಯ ಕಾಮ ಪುರಾಣದ ಸುದ್ದಿ ಪ್ರಕಟವಾಗುತ್ತಿದ್ದಂತೆ ಮನೆಯವರ ಕಂಗಾಲು , ಸಮಾಜದಲ್ಲಿ ತಲೆ ಎತ್ತಿ ಬದುಕಲಾಗದೆ ಅವಮಾನದಿಂದ ಮಡದಿ ಮಕ್ಕಳನ್ನ ಬಿಟ್ಟು ದೇಶಾಂತರ ಹೋಗುವ ಶಿವಶಂಕರ್. ಸತ್ಯ ಸಂಗತಿ ತಿಳಿಯುವ ರವಿ ಪಶ್ಚಾತಾಪದಿಂದ ಶಿವಶಂಕರ ರನ್ನ ಹುಡುಕುವ ಪ್ರಯತ್ನ ಮಾಡುತ್ತಾರೆ. ಆದರೆ ರವಿ ಸಾಯುವ ಮುನ್ನ ಬರೆದ ಪತ್ರ ಅಕ್ಷರ ಕೈ ಸೇರುತ್ತದೆ. ಹಾಗೆಯೇ ಪೃಥ್ವಿ ತಾನು ಶಿವಶಂಕರ ಮಗ ಎಂಬ ಸತ್ಯ ತಿಳಿಸುತ್ತಾನೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಹುಡುಕಾಟದ ಹಾದಿಯಲ್ಲಿ ಬೇರೆ ಬೇರೆ ವಿಚಾರಗಳ ಸೆಳೆತದ ಮೂಲಕ ಮನಮುಟ್ಟುವ ಹಂತಕ್ಕೆ ಬಂದು ನಿಲ್ಲುತ್ತದೆ. ಅದು ಏನು… ಹೇಗೆ… ಯಾವ ರೀತಿ… ಎಂಬುದನ್ನ ನೀವು ತೆರೆಯ ಮೇಲೆ ನೋಡಬೇಕು.

ಇಡೀ ಕಥೆಯನ್ನ ಕಟ್ಟಿಕೊಂಡಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಆಲೋಚನೆ ಅದ್ಭುತವಾಗಿದೆ. ಸಂಬಂಧಗಳ ನಂಟು , ಪ್ರೀತಿಯ ಸೆಳೆತ , ಸಣ್ಣ ತಪ್ಪು , ಪಶ್ಚಾತಾಪದ ಕೊರಗು ಹೀಗೆ ಒಂದಷ್ಟು ಸೂಕ್ಷ್ಮವಿಚಾರಕದ ಸುತ್ತ ಬೆಸೆದುಕೊಂಡು ಸಾಗಿರುವ ಈ ಕಥಾನಕ ಮನಸೆಳೆಯುತ್ತದೆ. ಆದರೆ ಚಿತ್ರಕಥೆಯ ಸುದೀರ್ಘ ಪಯಣ ಆಯಾಸ ಮಾಡುವಂತಿದೆ. ಇನ್ನಷ್ಟು ಹಿಡಿತ ಮಾಡಬಹುದಿತ್ತು. ಒಂದು ಉತ್ತಮ ಚಿತ್ರವನ್ನು ಮಾಡಿದೆ ನಿರ್ಮಾಣದ ತಂಡ. ಇನ್ನು ಅದ್ಭುತವಾದ ಛಾಯಾಗ್ರಹಣ , ಅರ್ಥಪೂರ್ಣ ಹಾಡುಗಳಿಗೆ ಸುಮಧುರ ಸಂಗೀತ ಹಾಗೂ ಸಂಕಲನ ಕೆಲಸ ಗಮನ ಸೆಳೆಯುತ್ತದೆ.

ಯು ನಟ ನಿಹಾರ್ ಮುಕೇಶ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜೀವ ತುಂಬಿದ್ದಾರೆ. ನಟಿ ರಚನಾ ಇಂದರ್ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಇನ್ನು ಹಿರಿಯ ನಟಿ ಸೀತಾರ ಕೂಡ ಬಹಳ ಅದ್ಭುತವಾಗಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಹಾಗೆಯೇ ನಟ ರಾಜೇಶ ನಟರಂಗ ಕೂಡ ಎಂದಿನಂತೆ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಇನ್ನು ಇಡೀ ಚಿತ್ರದ ಹೈಲೈಟ್ ಎಂದರೆ ರವೀಂದ್ರ ವಿಜಯ್ ಪಾತ್ರ ಅದ್ಭುತವಾಗಿ ಮೂಡಿಬಂದಿದೆ.

ಉಳಿದಂತೆ ಅಭಿನಯಿಸಿರುವ ಅಜಿತ್ ಹಂಡೆ , ಗಿರಿ ಶಿವಣ್ಣ , ಅಶ್ವಿತಾ .ಆರ್. ಹೆಗ್ಡೆ ಸೇರಿದಂತೆ ಎಲ್ಲಾ ಪಾತ್ರಗಳು ಉತ್ತಮ ಸಾಥ್ ನೀಡಿದ್ದು , ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಮನ ಸೆಳೆಯುವ ಚಿತ್ರ ಇದಾಗಿದೆ.

Visited 1 times, 1 visit(s) today
error: Content is protected !!