Cini NewsSandalwood

ಆದಿತ್ಯ ಹುಟ್ಟುಹಬ್ಬಕ್ಕೆ ಹಾಡಿನ ಉಡುಗೊರೆ ನೀಡಿದ ‘ಟೆರರ್’ ಚಿತ್ರತಂಡ

ನಟ ಆದಿತ್ಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ , ಸಿಲ್ಕ್ ಮಂಜು ಅವರ ನಿರ್ಮಾಣದ, ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ “ಟೆರರ್” ಚಿತ್ರದ “ಹರ ಹರ ಮಹದೇವ” ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಆದಿತ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಶಿವನ ಕುರಿತದಾ ಈ ಅದ್ಭುತ ಗೀತೆಯನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದು, ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಎಂ.ಆರ್.ಟಿ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನಿರ್ಮಾಪಕ ಮಂಜು ಅವರ ಸ್ನೇಹಿತರಾದ ರವಿ ವಸಿಷ್ಠ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಅನ್ನದಾತರಾದ ನಿರ್ಮಾಪಕ ಮಂಜು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಮಾತನಾಡಿದ ನಟ ಆದಿತ್ಯ, ನಮ್ಮ ನಿರ್ಮಾಪಕರು ಆರೋಗ್ಯದ ತೊಂದರೆಯಿಂದ ಇಂದಿನ ಸಮಾರಂಭಕ್ಕೆ ಬಂದಿಲ್ಲ. ಹಾಗಾಗಿ ನಾನು ಅವರಿಗೆ ನೀವಿಲ್ಲದೆ ಸಮಾರಂಭ ಮಾಡುವುದು ಬೇಡ ಅಂತ ಹೇಳಿದೆ. ಅವರು ಒಪ್ಪಲಿಲ್ಲ. ಇನ್ನೂ ಮೇ 4 ನನ್ನ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಶಿವನ ಕುರಿತಾದ “ಹರಹರ ಮಹದೇವ” ಎಂಬ ಅದ್ಭುತ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಹರ್ಷವರ್ಧನ್ ಸಂಗೀತ ನಿರ್ದೇಶನ ಹಾಗೂ ಪ್ರಸಿದ್ದ ಗಾಯಕರ ಗಾಯನದಲ್ಲಿ ಈ ಹಾಡು ಸೊಗಸಾಗಿ ಮೂಡಿ ಬಂದಿದೆ. ನಿರ್ದೇಶಕ ರಂಜನ್ ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್ ಹೀಗೆ ಹಿರಿಯ ಹಾಗೂ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ‌‌‌ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು.

ತಮಗೆ ನಿರ್ಮಾಪಕರನ್ನು ಪರಿಚಯ ಮಾಡಿಸಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿ ಮಾತು ಆರಂಭಿಸಿದ ನಿರ್ದೇಶಕ ರಂಜನ್ ಶಿವರಾಮ್ ಗೌಡ, ನಟ ಆದಿತ್ಯ ಹಾಗೂ ಚಿತ್ರತಂಡದ ಸದಸ್ಯರು ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಈಗಾಗಲೇ ನಮ್ಮ ಚಿತ್ರದ “ರಾವಣ” ಹಾಡು ಕೇಳುಗರ ಮನ ಗೆದ್ದಿದೆ. ಇಂದು “ಹರ ಹರ ಮಹದೇವ” ಹಾಡು ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಾನೇ ಕಥೆ,‌ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಸದ್ಯ ಚಿತ್ರಕ್ಕೆ ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತಿದ್ದು, ಈ ಮಾಸಾಂತ್ಯಕ್ಕೆ ಅಥವಾ ಮುಂದಿನ ತಿಂಗಳ ಮೊದಲವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಚಿತ್ರದ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಗೆಳೆಯ ಆದಿತ್ಯ ಜೊತೆಗೆ ನಟಿಸಿದ್ದು ಖುಷಿಯಾಗಿದೆ ಎಂದು ನಟ ಶ್ರೀನಗರ ಕಿಟ್ಟಿ ತಿಳಿಸಿದರು.

“ಹರಹರ ಮಹದೇವ” ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್, ರವಿ ಭಟ್ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಲಹರಿ ವೇಲು, ಕನ್ನಡವೇ ಸತ್ಯ ರಂಗಣ್ಣ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು.

error: Content is protected !!