ನಂಬಿಕೆ, ಪ್ರೀತಿ , ಚಟಕ್ಕೆ ಉತ್ತರ… ಟಕಿಲಾ (ಚಿತ್ರವಿಮರ್ಶೆ – ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಟಕಿಲಾ
ನಿರ್ದೇಶನ : ಕೆ. ಪ್ರವೀಣ್ ನಾಯಕ್
ನಿರ್ಮಾಪಕ : ಮರಡಿಹಳ್ಳಿ ನಾಗಚಂದ್ರ
ಸಂಗೀತ : ಟಾಪ್‌ಸ್ಟಾರ್ ರೇಣು
ಛಾಯಾಗ್ರಹಣ : ಪಿ.ಕೆ.ಹೆಚ್. ದಾಸ್
ತಾರಾಗಣ : ಧರ್ಮ ಕೀರ್ತಿರಾಜ್ , ನಿಖಿತಾಸ್ವಾಮಿ , ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್ ಶರ್ಮ, ಅರುಣ್ ಮೇಸ್ಟ್ರು ಹಾಗೂ ಮುಂತಾದವರು…
ಜೀವನದಲ್ಲಿ ಸಮಯ ಸಂದರ್ಭಗಳೆ ಆಯಾ ಕಾಲಘಟ್ಟಕ್ಕೆ ತಕ್ಕ ಪಾಠವನ್ನು ಕಲಿಸುತ್ತಾ ಸಾಗುತ್ತದೆ. ಎಲ್ಲಿ ನಂಬಿಕೆ , ಪ್ರೀತಿ , ಸ್ನೇಹಕ್ಕೆ ದ್ರೋಹ ಆಗುತ್ತೋ ಅದಕ್ಕೆ ಉತ್ತರವು ಕಟ್ಟಿಟ್ಟ ಬುತ್ತಿಯಾಗಿ ಸಿಕ್ಕೇ ಸಿಗುತ್ತದೆ.
ಅಂತದ್ದೇ ಮುದ್ದಾದ ಜೋಡಿಯ ಸರಸ ಸಲ್ಲಾಪದ ಬದುಕಿನಲ್ಲಿ ಮೋಹ , ದಾಹ , ಚಟ ಏನೆಲ್ಲಾ ಅವಾಂತರಗಳನ್ನ ಸೃಷ್ಟಿಸುತ್ತೆ , ಹೇಗೆ ಸಮಸ್ಯೆಗಳಿಗೆ ದಾರಿ ಸಿಗುತ್ತದೆ ಎಂಬುದನ್ನು ರೋಮಾಂಚನಕಾರಿ ದೃಶ್ಯ ವೈಭವದ ಮೂಲಕ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಟಕಿಲಾ”. ನನ್ನ ಶ್ರಮದಿಂದ ಬೆಳೆದು ಉದ್ಯಮಿಯಾಗಿರುವ ವ್ಯಕ್ತಿ ರವಿ (ಧರ್ಮ ಕೀರ್ತಿರಾಜ್) ತನ್ನ ಮುದ್ದಾದ ಮಡದಿ ಅಪ್ಸರ (ನಿಖಿತಾ ಸ್ವಾಮಿ) ಳನ್ನ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ.
ಅವಳ ಸೌಂದರ್ಯ, ನೋಟ , ಮೈ ಮಾಟಕ್ಕೆ ಸೋತು ಅವಳ ಸ್ಪರ್ಶ ಸುಖವನ್ನು ಅನುಭವಿಸುತ್ತಾ ಭವ್ಯ ಬಂಗಳೆಯಲ್ಲಿ ಸ್ವತಂತ್ರವಾಗಿ ಇರುತ್ತಾರೆ. ಇದರ ನಡುವೆ ಯಾರೋ ತನ್ನನ್ನ ನೋಡುತ್ತಿದ್ದಾರೆ ಎಂಬ ಆತಂಕದಲ್ಲಿ ಅಪ್ಸರ ತನ್ನ ಪತಿ ರವಿಗೆ ತಿಳಿಸಿದರು ಆತ ಭ್ರಮೆ ಎಂದು ಸಮಾಧಾನ ಪಡಿಸುತ್ತಾನೆ. ಇವರ ಪಕ್ಕದ ಮನೆಯ ಹುಡುಗ ವರುಣ್ ಈ ಜೋಡಿ ಕುಟುಂಬದ ಜೊತೆ ಒಳ್ಳೆ ವಿಶ್ವಾಸ ಹೊಂದಿದ್ದರೂ ರೋಡ್ ರೋಮಿಯಂತೆ ಹುಡುಗಿಯರನ್ನ ಪಟಾಯಿಸುತ್ತಾ ತನ್ನ ಬಲೆಗೆಬಿಳಿಸಿಕೊಳ್ಳುತ್ತಿರುತ್ತಾನೆ. ಇದರ ನಡುವೆ ಗೆಳೆಯರೆಲ್ಲ ಒಮ್ಮೆ ಟ್ರಕ್ಕಿಂಗ್ ಹೋದಾಗ ರವಿ ಹಾಗೂ ಆತನ ಸ್ನೇಹಿತ ಬೆಟ್ಟದಿಂದ ಕಾಲು ಜಾರಿ ಬೀಳುತ್ತಾರೆ.
ಪೊಲೀಸ್ ಇನ್ಸ್ಪೆಕ್ಟರ್ ತನ್ನ ತನಿಖೆಯಲ್ಲಿ ಅನುಮಾನವಿದ್ದರೂ ಉದ್ಯಮಿ ರವಿ ಸತ್ತ ವಿಷಯ ತಿಳಿಸುತ್ತಾನೆ. ಇದರಿಂದ ಅಪ್ಸರ ಕಂಗಾಲಾಗುತ್ತಾಳೆ. ಒಂಟಿತನದ ಬದುಕಿನಲ್ಲಿ ಅಪ್ಸರಾ ಟಕಿಲಾ ದುಶ್ಚಟಕ್ಕೆ ದಾಸಿಯಾಗುತ್ತಾಳೆ. ಇದರ ಹಿಂದೆ ಕಾಣದ ಕೈ ನಿರಂತರ ಕೆಲಸ ಮಾಡುತ್ತಿರುತ್ತದೆ. ಗಂಡನ ಆತ್ಮ ದೆವ್ವದ ರೂಪದಲ್ಲಿ ಕಂಡಾಗ ಡಾಕ್ಟರ್ ಕೂಡ ಭ್ರಮೆ ಇಂದು ದೈರ್ಯ ತುಂಬುತ್ತಾರೆ. ಆದರೆ ಮತ್ತೊಂದು ಕಠೋರ ಸತ್ಯ ಹೊರಬರಲು ಸಮಯ ಕಾಯುತ್ತಿರುತ್ತದೆ. ಅದು ಏನು ಎಂಬುದನ್ನು ನೀವು ಚಿತ್ರ ನೋಡಿಕೊಳ್ಳಬೇಕು.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಯುವ ಪೀಳಿಗೆಯ ಮನಸ್ಥಿತಿಯ ಸೂಕ್ಷ್ಮತೆಯನ್ನು ಹೊಂದಿಕೊಂಡಿದೆ. ಸುಖ , ದುಃಖ , ಕಷ್ಟ ಏನೇ ಬಂದರೂ ಅನ್ಯೋನ್ಯತೆಯಿಂದ ಬದುಕು ನಡೆಸಲು ಇಚ್ಚಿಸುವ ಗಂಡ ಹೆಂಡತಿಯ ನಡುವೆ ಮಾನಸಿಕ ಹಾಗೂ ದೈಹಿಕ ಸಂಬಂಧ ಉತ್ತಮವಾಗಿರಬೇಕು , ಒಮ್ಮೆ ಏರುಪೇರಾದರೆ ಅದರ ಸಂಚಲನ ದ್ವೇಷ , ಮೋಸ , ಚಟ ಹೀಗೆ ಬೇರೆಯದೇ ದಿಕ್ಕನ್ನು ತೋರಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಅತಿಯಾದ ಹಸಿ ಬಿಸಿ ದೃಶ್ಯಗಳು ಇಡೀ ಚಿತ್ರವನ್ನು ಆವರಿಸಿಕೊಂಡಂತಿದೆ. ಮೇಕಿಂಗ್ ಹಾಗೂ ಚಿತ್ರಕಥೆಯಲ್ಲಿ ಹೆಚ್ಚು ಹೊತ್ತು ಕೊಡಬೇಕಿತ್ತು ಅನಿಸುತ್ತದೆ. ಇನ್ನು ಸಂಬಂಧಗಳ ಹಿನ್ನೆಲೆಯಲ್ಲಿ ದುಶ್ಚಟಗಳ ಸುಳಿಗೆ ಸಿಕ್ಕವರ ಬಗ್ಗೆ ಒಂದು ಜಾಗೃತಿ ನೀಡುವ ನಿಟ್ಟಿನಲ್ಲಿ ನಿರ್ಮಾಪಕರು ನಿರ್ಮಿಸಿರುವ ಈ ಚಿತ್ರದ ಹಾಡುಗಳು ಉತ್ತಮವಾಗಿದ್ದು , ಸಂಗೀತ ಗಮನ ಸೆಳೆಯುತ್ತದೆ. ಛಾಯಾಗ್ರಾಹಕರ ಕೈಚಳಕವು ಉತ್ತಮವಾಗಿದೆ.
ಇನ್ನು ನಾಯಕನಾಗಿರುವ ಧರ್ಮ ಕೀರ್ತಿರಾಜ್ ಕೊಂಚ ಮೈ ಚಳಿ ಬಿಟ್ಟು ಅಭಿನಯಿಸಿದ್ದು, ವಿಭಿನ್ನ ಪಾತ್ರಕ್ಕೂ ತಾನು ಸಹಿ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ನಟಿ ನಿಖಿತಾ ಸ್ವಾಮಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ನೋಡುಗರ ಹೃದಯವನ್ನು ಸೆಳೆಯುವಂತೆ ತೆರೆಯ ಮೇಲೆ ಮಿಂಚಿದ್ದಾರೆ. ಅದೇ ರೀತಿ ವರುಣ್ ಪಾತ್ರಧಾರಿ ಹಾಗೂ ಇನ್ಸ್ಪೆಕ್ಟರ್ ಪಾತ್ರವೂ ಕೂಡ ಉತ್ತಮವಾಗಿ ಮೂಡಿ ಬಂದಿದ್ದು, ಉಳಿದಂತೆ ಬರುವ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ರೋಮಾಂಚನಕಾರಿ , ಸಸ್ಪೆನ್ಸ್ ಚಿತ್ರವಾದ ಈ ಟಕಿಲಾ ಚಿತ್ರವನ್ನು ನೋಡಬಹುದು.