ಬಹು ನಿರೀಕ್ಷಿತ “s/o ಮುತ್ತಣ್ಣ” ಚಿತ್ರದ ಟ್ರೇಲರ್ ರೀಲಿಸ್
ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 12 ರಂದು ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ . ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕನಾಗಿ ಹಾಗೂ “ದಿಯಾ” ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ “S/O ಮುತ್ತಣ್ಣ” ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಚಿತ್ರತಂಡದ ಸದಸ್ಯರು ಹಾಗೂ ಸಾಕಷ್ಟು ಕನ್ನಡ ಸಿನಿಮಾಸಕ್ತರು ಉಪಸ್ಥಿತರಿದ್ದರು. ನಂತರ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು.
ಈ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ಈ ಚಿತ್ರದಲ್ಲಿ ನನ್ನ ಮಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಜ್ವಲ್ ಜೊತೆಗೆ ಅವರ ಮೊದಲ ಚಿತ್ರ “ಸಿಕ್ಸರ್” ನಲ್ಲಿ ಅಭಿನಯಿಸಿದ್ದೆ. ಇನ್ನೂ, ಖುಷಿ ರವಿ ಅವರ ಕನ್ನಡ ಬಹಳ ಚಂದ. ನಿರ್ದೇಶಕ ಶ್ರೀಕಾಂತ್ ಹುಣಸೂರು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಉಳಿಯುವ ಲಕ್ಷಣಗಳು ಇದೆ. ನಿರ್ಮಾಣ ಸಂಸ್ಥೆ ಪುರಾತನ ಫಿಲಂಸ್ ನಿಂದ ಇನ್ನಷ್ಟು ಉತ್ತಮ ಚಿತ್ರಗಳು ನಿರ್ಮಾಣವಾಗಲಿ. ಈ ಚಿತ್ರ ಯಶಸ್ವಿಯಾಗಲಿ ಎಂದು ನಟ ರಂಗಾಯಣ ಹಾರೈಸಿದರು.
“S/O ಮುತ್ತಣ್ಣ” ಒಂದು ಸುಂದರ ಅನುಭವ. ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರದಲ್ಲಿ ನಟಿಸಿರುವ ಹಿರಿಯನಟ ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ನನ್ನ ತಂದೆ ಇದ್ದ ಹಾಗೆ. ನಿರ್ದೇಶಕರಂತೂ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಖುಷಿ ರವಿ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸ್ಕೇಟಿಂಗ್ ಕೃಷ್ಣ ಅವರು ಈ ಚಿತ್ರದಲ್ಲಿ ಕಾಶಿಯನ್ನೂ ತೋರಿಸಿರುವ ಪರಿ ಚೆನ್ನಾಗಿದೆ. ಪುರಾತನ ಫಿಲಂಸ್ ಸಂಸ್ಥೆ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದೆ. ಚಿತ್ರ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.
ನಮ್ಮ ಚಿತ್ರ ಆಗಸ್ಟ್ 22 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ನಮ್ಮ ಚಿತ್ರ ನೋಡಿದ ಮಲಯಾಳಂ ವಿತರಕ ಶಾನ್, “S/O ಮುತ್ತಣ್ಣ” ಚಿತ್ರವನ್ನು ಮಲಯಾಳಂ ನಲ್ಲೂ ತೆರೆಗೆ ತರಲು ಮುಂದಾಗಿದ್ದಾರೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರವನ್ನು ಸೆಪ್ಟೆಂಬರ್ 12ರಂದು ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹಾಡುಗಳು ಹಾಗೂ ಟೀಸರ್ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿದೆ. ಟ್ರೇಲರ್ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶ್ರೀಕಾಂತ್ ಹುಣಸೂರು.
ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಗಳು ಕನ್ನಡದಲ್ಲಿ ಇತ್ತೀಚೆಗೆ ಕಡಿಮೆಯಾಗಿತ್ತು. ಈಗ ಮತ್ತೆ ಕೌಟುಂಬಿಕ ಕಥೆಯುಳ್ಳ ಚಿತ್ರಗಳು ಬಿಡುಗಡೆಯಾಗಲು ಶುರುವಾಗಿದೆ. ಪ್ರೇಕ್ಷಕರು ಸಹ ಆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ಚಿತ್ರ ಕೂಡ ಎಲ್ಲರ ಮನ ಗೆಲ್ಲಲ್ಲಿದೆ ಎನ್ನುತ್ತಾರೆ ನಟಿ ಖುಷಿ ರವಿ.
ಪುರಾತನ ಫಿಲಂಸ್ ನಿರ್ಮಾಣದ ಸಿನಿಮಾಗೆ ಎಸ್ ಆರ್ ಕೆ ಫಿಲ್ಮ್ಸ್ ಸಾಥ್ ನೀಡಿದೆ, ಕನ್ನಡದ ವಿತರಕ ಬೆಂಗಳೂರು ಕುಮಾರ್, ಮಲಯಾಳಂ ವಿತರಕ ಶಾನ್, ಛಾಯಾಗ್ರಾಹಕ ಸ್ಕೇಟಿಂಗ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಚಿನ್ ಬಸ್ರೂರ್ “s/o ಮುತ್ತಣ್ಣ” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.