ಕಾಲಿವುಡ್ ಗೆ ಎಂಟ್ರಿ ಕೊಟ್ಟ ಸಾಕ್ಷಿ ಮೇಘನಾ..
ಸ್ಯಾಂಡಲ್ವುಡ್ ಪ್ರತಿಭೆ ಕಾಲಿವುಡ್ ನಲ್ಲಿ ತನ್ನ ಹವಾ ಕ್ರಿಯೆಟ್ ಮಾಡಲು ಸಜ್ಜಾಗಿದೆ.ಸರಿ ಸುಮಾರು 15 ವರ್ಷಗಳ ಕಾಲ ಚಿತ್ರರಂಗದಲ್ಲಿ ತನ್ನ ಪ್ರತಿಭೆಯನ್ನ ಹೊರಹಾಕಿದ್ದು , ಬಾಲ ನಟಿಯಾಗಿ ಜೋಗಯ್ಯ , ಜೈ ಭಜರಂಗ ಬಲಿ, ಆದರ್ಶ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಾಕ್ಷಿ ಮೇಘನಾ ಪೂರ್ಣ ಪ್ರಮಾಣದ ನಾಯಕಿಯಾಗಿಯೂ ಕೂಡ ಲೋಫರ್ಸ್, ಲೀಸಾ, ಪದ್ಮಾವತಿ, ಬೆಸ್ಟ್ಫ್ರೆಂಡ್ಸ್ ಚಿತ್ರಗಳಲ್ಲಿ ಬಹಳ ವಿಭಿನ್ನ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದು ಯಾವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ತೋರಿಸಿರುವಂತಹ ನಟಿ ಸಾಕ್ಷಿ ಮೇಘನಾ. ಈಗಾಗಲೇ ಒಂಬತ್ತು ಚಿತ್ರಗಳಲ್ಲಿ ಅಭಿನಯಿಸಿದ್ದು , ಬಿಡುಗಡೆಗೆ ಸಿದ್ಧವಿರುವಂತಹ ಸಿಂಬಲ್ ಆಫ್ ಕರ್ಮ , ವರ್ಣತರಂಗ, ಕುರುಡು ಕಾಂಚಾಣ ಚಿತ್ರಗಳು ಬಿಡುಗಡೆಗೆ ಸಿದ್ಧವಿದೆ.
ಸೀರಿಯಲ್ ಆಡಿಶನ್ ಗೆ ಹೋಗಿ ಸಿನಿಮಾಗೆ ಆಯ್ಕೆ ಆದ ನಟಿ ಸಾಕ್ಷಿ ಮೇಘನಾ.
ಇನ್ನು ನಟಿ ಸಾಕ್ಷಿ ಮೇಘನಾಗೆ ಪರಭಾಷೆಯಲ್ಲೂ ಮಿಂಚಲು ಅದೃಶ್ಯದ ಬಾಗಿಲು ತೆರೆದಿದ್ದು, ಇದೀಗ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಸಾಕ್ಷಿ ಮಾತನಾಡುತ್ತಾ ನಾನು ಬೆಂಗಳೂರಿನಲ್ಲಿ ಕಲರ್ಸ್ ತಮಿಳು ಧಾರವಾಹಿಯ ಆಡಿಷನ್ ನೀಡಲು ಹೋಗಿದ್ದೆ. ಆ ಸೀರಿಯಲ್ ನಲ್ಲಿ ನನಗೆ ಅವಕಾಶ ಸಿಗಲಿಲ್ಲ. ಆದರೆ ಅದೇ ಧಾರಾವಾಹಿ ನಿರ್ದೇಶಕರಾದ ರವಿ ಪ್ರಿಯನ್ ನನ್ನನ್ನು ನೋಡಿ ನೀನು ಸೀರಿಯಲ್ ಗಿಂತ ಸಿನಿಮಾಗೆ ಹೆಚ್ಚು ಸೂಕ್ತ ಎಂದಿದ್ದರು. ಅದರಂತೆ ಅವರ ಒಂದು ವರ್ಷದ ಬಳಿಕ ನನ್ನನ್ನು ಸಂಪರ್ಕಿಸಿ “ಮಗಾಬಲಿ” ಚಿತ್ರಕ್ಕೆ ಅವಕಾಶ ನೀಡಿದರು.
ಇದೊಂದು ಮೂಢನಂಬಿಕೆ , ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಹಿನ್ನೆಲೆಯ ಕಥಾನಕ ಹೊಂದಿರುವಂತಹ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಆಯಿಜಾಜ್ ಮಜೀದ್ ಎಂಬ ನಾಯಕನ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಜೊತೆ ಇನ್ನೋರ್ವ ಹೀರೋಯಿನ್ ಟೀನಾ ಕೂಡ ಅಭಿನಯಿಸುತ್ತಿದ್ದು , ಆರ್ ಡಿ ಎಲ್ ಕ್ರಿಯೇಶನ್ಸ್ ಮೂಲಕ ರವಿ. ಎ ರವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಕೊಯಮತ್ತೂರಿನ ಸಮೀಪದ ಹಳ್ಳಿಯಲ್ಲಿ 15 ದಿನ ಹಾಗೂ ಚೆನ್ನೈನಲ್ಲಿ 5 ದಿನ ಶೂಟಿಂಗ್ ಮಾಡಿದ್ದೇವೆ. ನಾನು ಈ ಚಿತ್ರದಲ್ಲಿ ಹಳ್ಳಿ ಒಂದರ ನಿಗೂಢ ಆಚಾರ ವಿಚಾರಗಳ ಡಾಕ್ಯುಮೆಂಟರಿ ಮಾಡುವ ನಿರ್ಮಾಪಕಿಯಾಗಿ ಕಾಣಿಸಿಕೊಂಡಿದ್ದೇನೆ ಮತ್ತು ಹಲವು ವಿಚಾರಗಳ ವಿರುದ್ಧ ಹೋರಾಟಕ್ಕೆ ನಿಲ್ಲುತ್ತೇನೆ. ನನಗೆ ಸ್ಪಷ್ಟವಾಗಿ ತಮಿಳು ಬಾರದ ಕಾರಣ ಡಬ್ಬಿಂಗ್ ಮಾಡಲಿಲ್ಲ. ಆದರೆ, ಈಗೀಗ ತಮಿಳು ಅರ್ಥ ಮಾಡಿಕೊಂಡು, ಅಲ್ಪ-ಸ್ವಲ್ಪ ಮಾತನಾಡುತ್ತಿದ್ದೇನೆ. ಈ ಚಿತ್ರ ಅಲ್ಲದೆ ಹಲವಾರು ತಮಿಳು ಚಿತ್ರಗಳ ಅವಕಾಶಗಳು ಕೂಡ ಬರುತ್ತಿದೆ. ಹಾಗೆಯೇ ಇದೇ “ಮಗಾಬಲಿ” ನಿರ್ದೇಶಕರು ಬೈ ಲ್ಯಾಂಗ್ವೇಜ್ ನಲ್ಲಿ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದು , ಆ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದೇನೆ. ನನಗೆ ಸೌತ್ ಇಂಡಿಯನ್ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಬಹಳಷ್ಟು ಆಸಕ್ತಿ ಇದೆ. ಉತ್ತಮ ಅವಕಾಶ ಬಂದರೆ ಖಂಡಿತ ನಾನು ನಟಿಸಲು ಸಿದ್ಧ ಎನ್ನುತ್ತಾರೆ. ನಮ್ಮ ಕನ್ನಡ ಚಿತ್ರರಂಗದ ನಟಿ ಸಾಕ್ಷಿ ಮೇಘನಾ ಅಭಿನಯಿಸಿರುವ ಈ ತಮಿಳು ಭಾಷೆಯ “ಮಗಾಬಲಿ” ಚಿತ್ರ ಇದೇ ತಿಂಗಳ 12ರಂದು ರಿಲೀಸ್ ಆಗಲಿದೆ.
