ಮುಖವಾಡಗಳ ರೋಚಕ ತಿರುವಿನ ಕಥಾನಕ “ರಿಪ್ಪನ್ ಸ್ವಾಮಿ” (ಚಿತ್ರವಿಮರ್ಶೆ- ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ರಿಪ್ಪನ್ ಸ್ವಾಮಿ
ನಿರ್ದೇಶಕ : ಕಿಶೋರ್ ಮೂಡಬಿದ್ರೆ
ನಿರ್ಮಾಣ : ಪಂಚಾಂನನ ಫಿಲಂಸ್
ಸಂಗೀತ : ಸ್ಯಾಮ್ಯುವೆಲ್ ಅಭಿ
ಛಾಯಾಗ್ರಹಣ : ರಂಗನಾಥ್
ತಾರಾಗಣ : ವಿಜಯ್ ರಾಘವೇಂದ್ರ , ಅಶ್ವಿನಿ ಚಂದ್ರಶೇಖರ್ , ಕೃಷ್ಣಮೂರ್ತಿ ಕವತಾರ್ , ಪ್ರಕಾಶ್ ತುಮ್ಮಿ ನಾಡು , ಯಮುನಾ ಶ್ರೀನಿಧಿ , ಸಂತೋಷ್ ಶೆಟ್ಟಿ , ಮೋಹನ್ ಶೇಣಿ , ಅನುಷ್ಕಾ ಆದಿರಾಘವೇಂದ್ರ ಹಾಗೂ ಮುಂತಾದವರು…
ಜೀವನದಲ್ಲಿ ಒಬ್ಬೊಬ್ಬರ ಮನಸ್ಥಿತಿಯು ಒಂದೊಂದು ರೀತಿಯ ಆಲೋಚನೆ ಮಾಡುತ್ತದೆ. ಯಾಕೆಂದರೆ ನಾವು ಎದುರಿಸುವ ಸಮಯ , ಸಂದರ್ಭ ಕೂಡ ಪ್ರಮುಖ ಕಾರಣವಾಗುತ್ತದೆ. ಪ್ರೀತಿ , ನಂಬಿಕೆ , ಗೆಳೆತನ , ವ್ಯಾಮೋಹ ಅತಿಯಾಗಿ ಮೋಸ , ವಂಚನೆ , ನಂಬಿಕೆ ದ್ರೋಹ ಕಂಡಾಗ ಮುಗ್ದತೆಯಲ್ಲೂ ಮುಖವಾಡದ ರೂಪ ಪ್ರಜ್ವಲಿಸುತ್ತಾ ಸಾಗುವ ಹಾದಿಯಲ್ಲಿ ತಂತ್ರಕ್ಕೆ ಪ್ರತಿತಂತ್ರ ಹೂಡುವ ನಿಗೂಢ ಕಥಾನಕ ಎಳೆಯೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಿಪ್ಪನ್ ಸ್ವಾಮಿ”.
ಮಲೆನಾಡಿನ ದಟ್ಟ ಅರಣ್ಯದ ನಡುವೆ ಸಣ್ಣ ಕೊಪ್ಪ ಎಂಬ ಊರಿನ ಶ್ರೀಮಂತ ಎಸ್ಟೇಟ್ ಮಾಲೀಕ ವೀರಸ್ವಾಮಿಗೆ ಇಬ್ಬರು ಮಕ್ಕಳು , ಎರಡನೆಯ ಮಗ ರಿಪ್ಪನ್ ಸ್ವಾಮಿ (ವಿಜಯ್ ರಾಘವೇಂದ್ರ). ಕಾಡು ಬೇಟೆಗೆ ಹೋದ ತಂದೆ ಸಾವಿನ ನಂತರ ಅಣ್ಣ ತಮ್ಮಂದಿರು ಎಸ್ಟೇಟ್ ನೋಡಿಕೊಂಡು ಜೀವನ ನಡೆಸುತ್ತಾರೆ. ರಿಪ್ಪನ್ ಸ್ವಾಮಿ ತನ್ನ ಸ್ನೇಹಿತ ಸಂತೋಷ್ ಹಾಗೂ ನಾಲ್ವರು ಕೆಲಸದವರ ಜೊತೆ ಜೀಪಿನಲ್ಲಿ ಓಡಾಡಿಕೊಂಡು , ಹಂದಿ ಮಾಂಸದ ಮಾರಾಟದ ನಡುವೆ ಭೇಟಿ ಮಾಡುವುದು ಅವನ ಕೆಲಸ.
ಇನ್ನು ಸ್ವಾಮಿಯ ಮಡದಿ ಮಂಗಳ (ಅಶ್ವಿನಿ ಚಂದ್ರಶೇಖರ್) ಡಾಕ್ಟರ್ ಆಗಿ ಜನರ ಸೇವೆ ಮಾಡುವುದೇ ಆಕೆಯ ಕನಸು. ಆದರೆ ತನ್ನ ಗಂಡ ಮನೆಯವರು ಹಾಗೂ ಕೆಲಸದವರ ಬಗ್ಗೆ ಗಮನಹರಿಸುತ್ತಾ ಅವರ ಆರೋಗ್ಯ ಹಾಗೂ ಅಡುಗೆ ಮಾಡಿ ಹಾಕುವುದೇ ಆಕೆಯ ನಿತ್ಯ ಕೆಲಸ. ಇನ್ನು ರಿಪ್ಪನ್ ಸ್ವಾಮಿಯ ಬದ್ಧ ವೈರಿ ಕುಪ್ಪ ಹಾಗೂ ಆತನ ಗ್ಯಾಂಗ್ ಹೇಗಾದರೂ ಸ್ವಾಮಿಯನ್ನು ಮಟ್ಟ ಹಾಕಿ ಅವನನ್ನ ಕೊಲ್ಲುವುದೇ ಅವರ ಉದ್ದೇಶ. ಆದರೆ ಸ್ವಾಮಿಯ ನಡೆ-ನುಡಿ ವರ್ಚಸ್ಸು ಕೆಂಡದಂತೆ ಕುದಿಯುತ್ತಿರುತ್ತದೆ.
ತನ್ನ ಹಾಗೂ ತನ್ನವರ ವಿರುದ್ಧ ಯಾರೇ ಎದುರಾದರೂ ಅವರನ್ನು ಕೊಲ್ಲುವುದಕ್ಕೂ ಹಿಂಜರಿಯದಂತಹ ವ್ಯಕ್ತಿ. ಇನ್ನು ಈ ಊರಿಗೆ ಅಂಜುಮಲಾ ( ಅನುಷ್ಕಾ) ಎಂಬ ಪೊಲೀಸ್ ಇನ್ಸ್ಪೆಕ್ಟರ್ ಎಂಟ್ರಿ ಆಗುತ್ತದೆ. ಸ್ಟೇಷನ್ ಉಸ್ತುವಾರಿಯನ್ನ ನೋಡಿಕೊಳ್ಳುವ ದೇಚಣ್ಣ (ಕೃಷ್ಣಮೂರ್ತಿ ಕವತಾರ್) ಹೊಸ ಇನ್ಸ್ಪೆಕ್ಟರ್ ಗೆ ಈ ಊರಿನ ಸ್ಥಿತಿಗತಿ , ವ್ಯವಹಾರ , ವ್ಯಕ್ತಿಗಳ ನಡುವಳಿಕೆ ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾ ಹೋಗುತ್ತಾನೆ. ಇದರ ನಡುವೆ ಸ್ವಾಮಿ ಹಾಗೂ ಕುಪ್ಪು ನಡುವಿನ ಗಲಾಟೆ ವಿಚಾರವಾಗಿ ವಾರ್ನಿಂಗ್ ನೀಡುವ ಅಂಜುಮಾಲ.
ಇದರ ನಡುವೆ ಕಾಡು ಜನರ ಬದುಕು , ಬವಣೆ , ಜೇನು ಕುರುಬರ ಹಾಡಿನ ಮೂಡಿ ನಿರಂತರ. ಇದರ ನಡುವೆ ಸ್ವಾಮಿ ಹೇಳಿದಂತೆ ತನ್ನ ಕೆಲಸದ ಜನರು ತಮಗೆ ತಿಳಿಯದಂತೆ ಮಣ್ಣಲ್ಲಿ ವ್ಯಕ್ತಿ ಒಬ್ಬನನ್ನ ಮುಚ್ಚುತ್ತಾರೆ. ನಂತರ ಮಾತಿನ ಚಕಮಕಿಯಲ್ಲಿ ರಿಪ್ಪನ್ ಸ್ವಾಮಿ ಕೆಲಸದವರನ್ನ ದೂರ ಇಡುತ್ತಾನೆ. ಕೋಪಗೊಳ್ಳುವ ಕೆಲಸದವರು ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಅಲ್ಲಿ ಪೊಲೀಸ್ರಿಗೆ ಮನುಷ್ಯನ ದೇಹ ಸಿಗುವುದಿಲ್ಲ , ಇನ್ನು ರಿಪ್ಪನ್ ಸ್ವಾಮಿಯ ತಂದೆಯ ಪ್ರೇಯಸಿ ಮಗ ಸಂತೋಷ್ ನಾಪತ್ತೆಯಾಗಿರುತ್ತಾನೆ.
ಇದಕ್ಕೆ ಪೂರಕವಾಗಿ ಪೊಲೀಸರಿಗೆ ಕೊಲೆಯ ವಾಸನೆ ಮೂಡಿರುತ್ತದೆ. ಇದರ ನಡುವೆ ಸ್ವಾಮಿ ನನ್ನ ಗೆಳೆಯ ಇನ್ಸ್ಪೆಕ್ಟರ್ ಆನಂದ್ ಸಹಾಯ ಕೇಳುತ್ತಾನೆ. ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ನಡೆಸಿಕೊಂಡು ಕ್ಲೈಮಾಕ್ಸ್ ಬೇರೆದೇ ಕಥೆಯನ್ನ ಹೇಳುತ್ತದೆ. ರಿಪನ್ ಸ್ವಾಮಿ ಯಾರು… ಪತ್ನಿ ಡಾಕ್ಟರ್ ಹಿನ್ನೆಲೆ ಏನು… ಸಂತೋಷ ನಾಪತ್ತೆ ಹೇಗೆ… ಕೊಲೆ ನಡೆದಿತ್ತ… ಇಲ್ವಾ… ತಂತ್ರ – ಪ್ರತಿತಂತ್ರ ಯಾರದು..? ಕ್ಲೈಮಾಕ್ಸ್ ಉತ್ತರ ಏನು ಇದಕ್ಕಾಗಿ ಒಮ್ಮೆ ಚಿತ್ರ ನೋಡಬೇಕು.
ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ ನಟ ವಿಜಯ ರಾಘವೇಂದ್ರ , ಹಿಂದೆಂದೂ ಮಾಡಿರಿದಂತಹ ಪಾತ್ರದ ಮೂಲಕ ನೋಡುಗರ ಗಮನವನ್ನು ಸೆಳೆದಿದ್ದಾರೆ. ಹಾವಭಾವ , ಮೌನದ ಮುಖ ಚಹರೆಯಲ್ಲೇ ಜೀವತುಂಬಿದ್ದು,
ಕ್ರೂರತೆಯ ನರ್ತನವನ್ನು ತೆರೆದಿಟ್ಟಿದ್ದಾರೆ. ನಾನು ಎಂಥಾ ಪಾತ್ರಕ್ಕಾದರೂ ಹೊಂದುಕೊಳ್ಳುವೆ ಎಂದು ತೋರಿಸಿದ್ದಾರೆ. ಇನ್ನು ನಟಿಯಾಗಿ ಅಭಿನಯಿಸಿರುವ ಅಶ್ವಿನಿ ಚಂದ್ರಶೇಖರ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದು , ವಿಭಿನ್ನ ಶೇಡ್ ಗಳ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಪೊಲೀಸ್ ಪೇದೆಯಾಗಿ ಕೃಷ್ಣಮೂರ್ತಿ ಕವತಾರ್ ಬಹಳ ನೈಜ್ಯವಾಗಿ ಪಾತ್ರ ಪೋಷಣೆ ಮಾಡಿದ್ದಾರೆ.
ಇನ್ಸ್ಪೆಕ್ಟರ್ ಪಾತ್ರದಲ್ಲಿ ಅನುಷ್ಕಾ ಆದಿರಾಘವೇಂದ್ರ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅಭಿನಂದರನ್ನು ಪ್ರಕಾಶ್ ತುಮ್ಮಿನಾಡು , ಯಮುನಾ ಶ್ರೀನಿಧಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಇನ್ನು ನಿರ್ದೇಶಕರು ಆಯ್ಕೆ ಮಾಡಿ ಕೊಂಡಿರುವ ಕಥಾವಸ್ತು ಕುತೂಹಲಕಾರಿಯಾಗಿದ್ದು , ಪ್ರೇಕ್ಷಕರ ಗಮನ ಸೆಳೆಯುತ್ತದೆ. ಆದರೆ ಚಿತ್ರಕಥೆಯ ವೇಗ ಇನ್ನು ಮಾಡಬಹುದಿತ್ತು.
ಇನ್ನು ಶ್ರೀಮಂತರ ದರ್ಪ , ಬಡವರ ಅಸಹಾಯಕತೆ , ಸ್ತ್ರೀ ವ್ಯಾಮೋಹಿಗಳ ವರ್ತನೆ , ಸ್ನೇಹ , ಪ್ರೀತಿ , ನಂಬಿಕೆ ದ್ರೋಹದ ಸುತ್ತ ಸಮಯ , ಸಂದರ್ಭ ಬದುಕಿನಲ್ಲಿ ಏನೆಲ್ಲಾ ಮಾಡಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದು , ಸಮಾಜದಲ್ಲಿ ಹೆಣ್ಣು ಮಕ್ಕಳ ಬದುಕು , ಆಸೆ , ಆಕಾಂಕ್ಷಿಗಳ ಸುತ್ತ ಆಗುವ ಅನಾಹುತಗಳ ಬಗ್ಗೆ ತೋರಿಸಿದ್ದು , ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಈ ಚಿತ್ರದ ಛಾಯಾಗ್ರಹಣ , ಸಂಗೀತ , ಸಾಹಸ ಹಾಗೂ ಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ಗಮನ ಸೆಳೆಯುವ ಕಂಟೆಂಟ್, ಫ್ಯಾಮಿಲಿ ಓರಿಯೆಂಟೆಡ್ ಚಿತ್ರದಲ್ಲಿ ಮುಖವಾಡಗಳ ಅನಾವರಣ ಮಾಡಿದ್ದು , ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.