Cini NewsSandalwood

ಯುವ ಪ್ರತಿಭೆಗಳ “ಪ್ಯಾರ್”ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್

Spread the love

ಬೆಳ್ಳಿ ಪರದೆಗೆ ಮತ್ತೊಂದು ಹೊಸ ತಂಡ ಪ್ರವೇಶ ಪಡೆಯುತ್ತಿದೆ. ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್. ಎಸ್. ನಾಗಶ್ರೀ ಅವರು ನಿರ್ಮಾಣ ಮಾಡುತ್ತಿರುವ ನೂತನ ಚಿತ್ರದ ಟೈಟಲ್ ಅನಾವರಣ ಸಮಾರಂಭ ನಡೆಯಿತು. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೇ ‘ಪ್ಯಾರ್’ ಎಂಬ ನೂತನ ಶೀರ್ಷಿಕೆ ಯನ್ನು ಲಾಂಚ್ ಮಾಡಿದರು.

ಈ ಚಿತ್ರದಲ್ಲಿ ಭರತ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆ್ಯನ್ ಎಮೋಷನಕ್ ಜರ್ನಿ ಆಫ್ ಲವ್ ಎಂಬ ಅಡಿಬರಹ ಈ ಚಿತ್ರಕ್ಕಿದೆ.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡುತ್ತ ಇವರೆಲ್ಲ ನಮ್ಮ ಚಿತ್ರಕ್ಕೆ ನೀವೇ ಬೇಕು ಅಂತ ಹಠ ಹಿಡಿದರು. ಇವರ ಪ್ರೀತಿಗೆ ಸೋತು ನಾನಿಲ್ಲಿಗೆ ಬಂದಿದ್ದೇನೆ. ಪ್ರೀತಿಗೆ ಇರುವ ಬೆಲೆಯೇ ಬೇರೆ ಅಂತ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ನಾನಿಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ನನಗೆ ನಾಯಕಿನೂ ಇದ್ದಾರಂತೆ. ಅದ್ಯಾರಂತ ನನಗಿನ್ನೂ ಹೇಳಿಲ್ಲ. ಇಲ್ಲಿ ನಾನು ಒಬ್ಬ ನಟ ಮಾತ್ರ. ನನ್ನನ್ನು ಹೇಗೆ ತೋರಿಸಬೇಕು ಎನ್ನುವುದು ನಿರ್ದೇಶಕ ಸುಪ್ರೀತ್ ಗೆ ಬಿಟ್ಟಿದ್ದು‌ ಎಂದು ಹೇಳಿದರು.

ನಿರ್ಮಾಪಕಿ ನಾಗಶ್ರೀ ಮಾತನಾಡುತ್ತ ರವಿ ಸರ್ ನಮ್ಮ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿದಾರೆ ಅನ್ನೋದೇ ಸಂತೋಷದ ವಿಷಯ. ನಾನು ಡೈರೆಕ್ಟ್ ಮಾಡಬೇಕೆಂದು ಚಿತ್ರರಂಗಕ್ಕೆ ಬಂದವಳು. ರವಿ ಸರ್ ಪಾತ್ರ ಎಲ್ಲರಿಗೂ ಟಚ್ ಆಗುತ್ತೆ. ಇಡೀ ಫ್ಯಾಮಿಲಿ ಕೂತು ನೋಡುವಂಥ ಚಿತ್ರವಿದು ಎಂದರು.

ನಿರ್ದೇಶಕ ಸುಪ್ರೀತ್ ಮಾತನಾಡುತ್ತ ಈಗಾಗಲೇ ಶೇ.೮೦ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ‌. ಪ್ರೀತಿ ಪ್ರೇಮದ ಕಥೆಯ ಜತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನೂ ತೆರೆದಿಡುವಂಥ ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರಕ್ಕೆ ಉತ್ತರ ಭಾರತದ ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಈಗಾಗಲೇ 70ಕ್ಕೂ ಹೆಚ್ಚು ದಿನಗಳವರೆಗೆ ಚಿತ್ರೀಕರಣ ಮಾಡಿದ್ದೇವೆ.

ತಂದೆ ಮಗಳ ನಡುವಿನ ಬಾಂಧವ್ಯ ಯಾವ ಮಟ್ಟಕ್ಕೆ ತಗೊಂಡು ಹೋಗಬಹುದು‌ ಅಂತ ಯೋಚಿಸಿ, ಈ ಸಿನಿಮಾ ಮಾಡಿದ್ದೇವೆ. ತಂದೆಗೋಸ್ಕರ ಮಗಳು ಯಾವರೀತಿ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಅಂತ ಚಿತ್ರದಲ್ಲಿ ತೋರಿಸಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಬರುತ್ತಿದೆ ಎಂದು ಹೇಳಿದರು. ನಾಯಕ ಭರತ್, ನಾಯಕಿ ರಾಶಿಕಾ ಶೆಟ್ಟಿ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.

ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ, ಪಳನಿ ಡಿ.ಸೇನಾಪತಿ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಚಿತ್ರದ ಒಂದೇ ಮಾತಲ್ಲಿ ಹೇಳೋದಾದರೆ ಎಂಬ ಹಾಡಿಗೆ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ.ಸೋನು ನಿಗಮ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮಚ್ಚಲ್ ಕೂಡ ಚಿತ್ರದಲ್ಲಿ ಹಾಡಿದ್ದಾರೆ. ಹಿರಿಯನಟ ಶ್ರೀನಿವಾಸ ಮೂರ್ತಿ, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ.

Visited 1 times, 1 visit(s) today
error: Content is protected !!