ಸಸ್ಪೆನ್ಸ್ ಕಥಾಹಂದರ “ಪೀಟರ್” ಫಸ್ಟ್ ಲುಕ್ ರಿಲೀಸ್.
‘ದೂರದರ್ಶನ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈಗ ಪೀಟರ್ ಸಿನಿಮಾ ಮೂಲಕ ಸಸ್ಪೆನ್ಸ್ ಡ್ರಾಮಾ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಎಲ್ಲಾ ಪಾತ್ರಗಳನ್ನು ಪೋಸ್ಟರ್ ನಲ್ಲಿ ಕಟ್ಟಿಕೊಡಲಾಗಿದ್ದು, ಚಿತ್ರದ ನಾಯಕ ರಾಜೇಶ್ ಧ್ರುವ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಂಡೆ ಮೇಳ ಫಸ್ಟ್ ಲುಕ್ ಪೋಸ್ಟರ್ ಹೈಲೆಟ್ ಗಳಲ್ಲೊಂದು. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಪೋಸ್ಟರ್ ಅನಾವರಣ ಮಾಡಲಾಗಿದೆ. ಚಿತ್ರದಲ್ಲಿ ರಾಜೇಶ್ ಧ್ರುವ ಜೊತೆಗೆ ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ವೃದ್ಧಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರವಿ ಹಿರೇಮಠ್ ಮತ್ತು ರಾಕೇಶ್ ಹೆಗ್ಗಡೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಪ್ರತಿ ಹಂತದಲ್ಲೂ ಈ ತಂಡ ಹೊಸ ಸಾಹಸಕ್ಕೆ ಕೈ ಹಾಕುತ್ತ ಸದ್ದು ಮಾಡಿತ್ತು ,ಇತ್ತೀಚೆಗಷ್ಟೇ ಪ್ರತಿಷ್ಠಿತ “ಥಿಂಕ್ ಮ್ಯೂಸಿಕ್” ಪೀಟರ್ ಆಡಿಯೋ ಹಕ್ಕುಗಳನ್ನ ಪಡೆದದ್ದು ಸುದ್ಧಿ ಆಗಿತ್ತು, ಸುಕೇಶ್ ಶೆಟ್ಟಿ ಈಗಾಗಲೇ ಪೀಟರ್ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಸೆನ್ಸಿಟಿವ್ ಸಸ್ಪೆನ್ಸ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಚೆಂಡೆ ಮೇಳದ ಕಂಟೆಂಟ್ ಕೂಡ ಇರಲಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಕನ್ನಡ, ಮಲಯಾಳಂ, ತೆಲುಗು ತಮಿಳಿನಲ್ಲಿ ಸಿನಿಮಾ ಮೂಡಿ ಬರಲಿದೆ.