Cini NewsSandalwood

“ಪೆನ್ ಡ್ರೈವ್” ಚಿತ್ರದ ಟೀಸರ್ ಬಿಡುಗಡೆ ಸಾ.ರಾ.ಗೋವಿಂದು

Spread the love

ಆರ್ ಹೆಚ್ ಎಂಟರ್ ಪ್ರೈಸಸ್ ಮತ್ತು ಶ್ರೀತಿರುಮಲ ಸಿನಿ ಎಂಟರ್ಟೈನ್ಮೆಂಟ್ ಅರ್ಪಿಸುವ, ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ, ಕಿಶನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ “ಪೆನ್ ಡ್ರೈವ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವಾಣಿಜ್ಯ ಮಂಡಳಿ ಕಾರ್ಯದರ್ಶಿ ಪ್ರವೀಣ್ ಕುಮಾರ್, ಜೆ.ವೆಂಕಟೇಶ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಪೆನ್ ಡ್ರೈವ್” ಕಾಲ್ಪನಿಕ ಕಥಾಹಂದರ ಹೊಂದಿರುವ ಚಿತ್ರ‌. ನಿರ್ಮಾಪಕರ ಸಹಕಾರದಿಂದ ಅಂದುಕೊಂಡ ಯೋಜನೆಯಂತೆ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ನಾಗೇಶ್ ಅವರ ಸಹ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ಡಾ||ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಮಾಲಾಶ್ರೀ, ತನಿಷಾ ಕುಪ್ಪಂಡ, ಕಿಶನ್,‌ ಸಂಜನಾ ನಾಯ್ಡು, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಅನಾವರಣವಾಗಲಿದೆ ಎಂದು ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ತಿಳಿಸಿದರು.

ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಒಂದು ಹಾಡಿನಲ್ಲೂ ಅಭಿನಯಿಸಿದ್ದೇನೆ . ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ ಎಂದರು ನಟಿ ತನಿಷಾ ಕುಪ್ಪಂಡ. “ಬಿಗ್ ಬಾಸ್” ನಂತರ ನಾನು ಧಾರಾವಾಹಿಯಲ್ಲಿ ನಟಿಸಿದ್ದೆ. ನನ್ನ ಅಭಿನಯದ ಮೊದಲ ಚಿತ್ರ “ಪೆನ್ ಡ್ರೈವ್” ಎಂದು ನಟ ಕಿಶನ್ ಹೇಳಿದರು.

ತಮ್ಮ ಪಾತ್ರದ ಬಗ್ಗೆ ನಟಿ ಸಂಜನ ನಾಯ್ಡು ಮತ್ತು ನಟ ಕರಿಸುಬ್ಬು ಮಾಹಿತಿ ನೀಡಿದರು. ಟೀಸರ್‌ ಬಿಡುಗಡೆ ಮಾಡಿಕೊಟ್ಟ ಸಾ.ರಾ.ಗೋವಿಂದು ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ಮಾಪಕರಾದ ಹನುಮಂತ ರಾಜು ಹಾಗೂ ಲಯನ್ ಎಸ್ ವೆಂಕಟೇಶ್ ತಮ್ಮ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ. ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಎಂದರು. ಕಾರ್ಯಕಾರಿ ನಿರ್ಮಾಪಕ ಜಿ.ವೆಂಕಟೇಶ್ ಸಹ ಚಿತ್ರದ ಕುರಿತು ಮಾತನಾಡಿದರು.

Visited 1 times, 1 visit(s) today
error: Content is protected !!