ಜೂ. 12ಕ್ಕೆ ಪವನ್ ಕಲ್ಯಾಣ್ ನಟನೆಯ “ಹರಿ ಹರ ವೀರ ಮಲ್ಲು“ ರಿಲೀಸ್
ಟಾಲಿವುಡ್‌ನ ಪವರ್‌ಸ್ಟಾರ್ ಹಾಗೂ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಡಿಸಿಎಂ ಸ್ಥಾನಕ್ಕೇರಿದ ಬಳಿಕ ಪವನ್ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದರು. ಹೀಗಾಗಿ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದರು. ಇದೀಗ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ಹರಿ ಹರ ವೀರ ಮಲ್ಲು ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ.
ಹರಿ ಹರ ವೀರ ಮಲ್ಲು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಿನಿಪ್ರಿಯರಿಗೆ ಇಷ್ಟವಾಗಿವೆ. ಬಿಗ್ ಬಜೆಟ್ ತಯಾರಾಗಿರುವ ಹರಿ ಹರ ವೀರ ಮಲ್ಲು ಸಿನಿಮಾ ಜೂನ್ 12 ರಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ.
ಹರಿ ಹರ ವೀರ ಮಲ್ಲುವಾಗಿ ಪವನ್ ಕಲ್ಯಾಣ್ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ಪವರ್ ಸ್ಟಾರ್ ಮಿಂಚಿದ್ದಾರೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ಜಗರ್ಲಮುಡಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬಂದಿದೆ. ಬಾಬಿ ಡಿಯೋಲ್, ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ ಮತ್ತು ನೋರಾ ಫತೇಹಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ. ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ, ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದೆ.